ಶುಕ್ರವಾರ, ಜನವರಿ 24, 2020
16 °C

ರ‍್ಯಾಂಕಿಂಗ್: 3ನೇ ಸ್ಥಾನಕ್ಕೇರಿದ ಮಾರ್ನಸ್, ಸ್ಮಿತ್–ಕೊಹ್ಲಿ ಸ್ಥಾನದ ಮೇಲೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಮಾರ್ನಸ್‌ ಲಾಬುಶೇನ್‌ ಮೂರನೇ ಸ್ಥಾನಕ್ಕೇರಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದು, ಆಸಿಸ್‌ ದಾಂಡಿಗ ಸ್ಟೀವ್‌ ಸ್ಮಿತ್‌ ಎರಡನೇ ಕ್ರಮಾಂಕದಲ್ಲಿ ಮುಂದುವರಿದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್‌ ಸರಣಿಯಲ್ಲಿ ಅಮೋಘ ಆಟವಾಡಿದ್ದ ಲಾಬುಶೇನ್‌, 3 ಪಂದ್ಯಗಳ ಆರು ಇನಿಂಗ್ಸ್‌ಗಳಿಂದ ಒಂದು ದ್ವಿಶತಕ, ಒಂದು ಶತಕ ಹಾಗೂ ಮೂರು ಅರ್ಧಶತಕ ಸೇರಿ ಒಟ್ಟು 549 ರನ್‌ ಕಲೆ ಹಾಕಿದ್ದರು. ಹೀಗಾಗಿ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಅವರನ್ನು ಹಿಂದಿಕ್ಕಿದ್ದಾರೆ. ಮಾರ್ನಸ್‌ ಖಾತೆಯಲ್ಲಿ ಒಟ್ಟು 827 ಅಂಕಗಳು ಇವೆ.

ಇದನ್ನೂ ಓದಿ: ಒಂದು ಋತುವಿನಲ್ಲಿ ಮಿಂಚಿದಾಕ್ಷಣ ನಾನು ಶ್ರೇಷ್ಠ ಬ್ಯಾಟ್ಸ್‌ಮನ್ ಅಲ್ಲ: ಮಾರ್ನಸ್

ಒಂದು ಮತ್ತು ಎರಡನೇ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊಹ್ಲಿ ಖಾತೆಯಲ್ಲಿ 928 ಮತ್ತು ಸ್ಮಿತ್ ಖಾತೆಯಲ್ಲಿ 911 ಅಂಕಗಳು ಇವೆ. ವಿಲಿಯಮ್ಸನ್‌ 814 ಅಂಕ ಹೊಂದಿದ್ದಾರೆ. ಡೇವಿಡ್‌ ವಾರ್ನರ್‌ 5ನೇ ಸ್ಥಾನದಲ್ಲಿದ್ದಾರೆ.

2019ರ ಆರಂಭದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 110ನೇ ಕ್ರಮಾಂಕದಲ್ಲಿದ್ದ ಮಾರ್ನಸ್‌, ಬರೋಬ್ಬರಿ 106 ಸ್ಥಾನಗಳ ಏರಿಕೆಯೊಂದಿಗೆ 4ನೇ ಸ್ಥಾನಕ್ಕೆ ಬಂದು ನಿಂತಿದ್ದರು. ಈ ವರ್ಷ ಆಡಿದ ಮೊದಲ ಟೆಸ್ಟ್‌ನಲ್ಲಿ (ನ್ಯೂಜಿಲೆಂಡ್‌ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ) ಕ್ರಮವಾಗಿ 215 ಮತ್ತು 59 ರನ್‌ ಸಿಡಿಸಿದ್ದರು. ಹೀಗಾಗಿ ವರ್ಷಾರಂಭದಲ್ಲಿ 805 ಹೊಂದಿದ್ದ ಅವರು, ಹೆಚ್ಚುವರಿ 22 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ನಿರಂತರ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು ಕೊಹ್ಲಿ ಮತ್ತು ಸ್ಮಿತ್‌ ಅವರನ್ನು ಹಿಂದಿಕ್ಕುವ ಹಾದಿಯಲ್ಲಿ ಸಾಗಿದ್ದಾರೆ. ಭಾರತದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 6 ಮತ್ತು 9ನೇ ಸ್ಥಾನದಲ್ಲಿದ್ದು, ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ಪಂದ್ಯ: ಮತ್ತೆರಡು ದಾಖಲೆ ಬರೆದ ವಿರಾಟ್ ಕೊಹ್ಲಿ

ಬೌಲರ್‌ಗಳ ವಿಭಾಗದಲ್ಲಿ ಆಸಿಸ್‌ ವೇಗಿ ಪ್ಯಾಟ್‌ ಕಮಿನ್ಸ್‌ (904), ನ್ಯೂಜಿಲೆಂಡ್‌ನ ನೀಲ್‌ ವ್ಯಾಗ್ನರ್‌ (852) ಮತ್ತು ಜೇಸನ್‌ ಹೋಲ್ಡರ್‌ (830) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಭಾರತದ ಜಸ್‌ಪ್ರೀತ್‌ ಬೂಮ್ರಾ (794), ರವಿಚಂದ್ರನ್‌ ಅಶ್ವಿನ್‌ (772) ಹಾಗೂ ಮೊಹಮದ್‌ ಶಮಿ (771) ಕ್ರಮವಾಗಿ 6, 9 ಮತ್ತು 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹೋಲ್ಡರ್‌ (473), ರವಿಂದ್ರ ಜಡೇಜಾ (406) ಹಾಗೂ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ (395) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು