ಶುಕ್ರವಾರ, ಮೇ 14, 2021
21 °C

PV Web Exclusive | ಐಪಿಎಲ್‌: ತಂಡಗಳ ಯಶಸ್ಸಿನಲ್ಲಿ ದಿಗ್ಗಜರ ಮಾಸ್ಟರ್ ಪ್ಲಾನ್‌

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಗಳಿಸಿತು. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ದೇವದತ್ತ ಪಡಿಕ್ಕಲ್‌, ಗ್ಲೆನ್ ಮ್ಯಾಕ್ಸ್‌ವೆಲ್‌ ಮುಂತಾದ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಜೊತೆಯಲ್ಲಿ ಲೆಗ್ ಸ್ಪಿನ್ ಮೋಡಿಗಾರರಾದ ಯಜುವೇಂದ್ರ ಚಾಹಲ್‌, ಆ್ಯಡಂ ಜಂಪಾ, ವೇಗಿಗಳಾದ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಮುಂತಾದವರೇ ಎದ್ದುಕಾಣುವ ತಂಡದಲ್ಲಿ ಅಷ್ಟೇನೂ ಹೆಸರು ಮಾಡದೇ ಇದ್ದ ಹರ್ಷಲ್ ಪಟೇಲ್ ಆ ಪಂದ್ಯದಲ್ಲಿ ತಂಡದ ಗೆಲುವಿನ ರೂವಾರಿಯಾದರು.

ಡೆತ್ ಓವರ್‌ಗಳಲ್ಲಿ ಅವರನ್ನು ಬಳಸಲು ಹೂಡಿದ ತಂತ್ರವೇ ಈ ಯಶಸ್ಸಿಗೆ ಕಾರಣ. ಅದನ್ನು ಪಂದ್ಯದ ನಂತರ ಹರ್ಷಲ್ ಪಟೇಲ್ ಅವರೇ ಹೇಳಿದ್ದರು. ಹಾಗಾದರೆ ಈ ಹೊಸ ತಂತ್ರದ ಆಲೋಚನೆಯು ತಂಡದ ಡ್ರೆಸಿಂಗ್ ಕೊಠಡಿಯಲ್ಲಿ ಮೂಡಿದ್ದಾದರೂ ಹೇಗೆ...?

ಕೋಚ್‌ಗಳ ಅನುಭವದ ಮೂಸೆಯಲ್ಲಿ ಹೊಳೆಯುವ ಯೋಚನೆಗಳು ಕೆಲವೊಮ್ಮೆ ಪಂದ್ಯದ ಗತಿಯನ್ನೇ ಬದಲಿಸುತ್ತವೆ. ಲೀಗ್‌ನ ಪ್ರತಿಯೊಂದು ತಂಡಗಳಲ್ಲೂ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಲು ದಿಗ್ಗಜರ ಪಡೆಯೇ ಇದೆ. ವಿಶ್ವ ಕ್ರಿಕೆಟ್‌ನಲ್ಲಿ ಆಡಿ ಮಿಂಚಿದ್ದ ಈ ಕೋಚ್‌ಗಳು ಕೂಡ ಐಪಿಎಲ್‌ ಟೂರ್ನಿ ರೋಚಕವಾಗಲು ಕಾರಣರಾಗಿದ್ದಾರೆ.

ವರ್ಷಗಳಿಂದ ಒಂದೇ ತಂಡದಲ್ಲಿ ತಂತ್ರಗಳನ್ನು ಹೆಣೆಯುತ್ತಿರುವ ಕೋಚ್‌ಗಳೂ ಐಪಿಎಲ್‌ನಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಟೀಫನ್ ಫ್ಲೆಮಿಂಗ್‌, ಮುಂಬೈ ಇಂಡಿಯನ್ಸ್‌ನ ಮಹೇಲ ಜಯವರ್ಧನೆ, ಕೋಲ್ಕತ್ತ ನೈಟ್ ರೈಡರ್ಸ್‌ನ ಬ್ರೆಂಡನ್ ಮೆಕ್ಕಲಂ ಮುಂತಾದವರು ಇಂಥವರ ಸಾಲಿಗೆ ಸೇರುತ್ತಾರೆ. ಐಪಿಎಲ್‌ನಲ್ಲಿ ಆಡಿ ನಂತರ ಕೋಚ್‌ಗಳಾದ ಅನಿಲ್ ಕುಂಬ್ಳೆ, ಮೆಕ್ಕಲಂ, ಮಹೇಲ, ರಿಕಿ ಪಾಂಟಿಂಗ್‌, ಸ್ಟೀಫನ್‌ ಫ್ಲೆಮಿಂಗ್‌ ಮುಂತಾದ ಅಪರೂಪದ ವ್ಯಕ್ತಿತ್ವಗಳೂ ಇಲ್ಲಿವೆ. ಸದ್ಯ ಐಪಿಎಲ್‌ನಲ್ಲಿರುವ ಕನ್ನಡಿಗ ಕೋಚ್ ಅನಿಲ್ ಕುಂಬ್ಳೆ ಒಬ್ಬರೇ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಶ್ರೀಲಂಕಾದವರ ಪ್ಯಾಬಲ್ಯ ಕೋಚಿಂಗ್‌ನಲ್ಲಿ ಎದ್ದು ಕಾಣುತ್ತಿದೆ.

ಮಹೇಲ ಜಯವರ್ಧನೆ ಅವರು ಐಪಿಎಲ್‌ನ ಅತ್ಯಂತ ಯಶಸ್ವಿ ಕೋಚ್‌. ಇದು, ತಂಡದೊಂದಿಗೆ ಅವರಿಗೆ ಐದನೇ ವರ್ಷ. ಇಷ್ಟರಲ್ಲೇ ಮೂರು ಬಾರಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಹೀಗಾಗಿ ಲೀಗ್‌ನಲ್ಲಿ ಅವರ ತಾರಾ ಮೌಲ್ಯವೂ ಹೆಚ್ಚಿದೆ. 55 ಅಂತರರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಒಟ್ಟು 222 ಟಿ–20 ಪಂದ್ಯಗಳಲ್ಲಿ ಕಣಕ್ಕೆ ಇಳಿದಿರುವ ಅವರು ಚುಟುಕು ಕ್ರಿಕೆಟ್‌ನ ಎಲ್ಲ ಆಯಾಮಗಳನ್ನೂ ಬಲ್ಲವರು. ಈ ಅನುಭವ ಮುಂಬೈ ಇಂಡಿಯನ್ಸ್‌ನ ಉತ್ತಮ ಸಾಧನೆಗೆ ಕೈ ಹಿಡಿದಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗ ರಿಕಿ ಪಾಂಟಿಂಗ್. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪುನರ್ಜೀವ ನೀಡಿದ ಅವರು ಈ ಬಾರಿಯೂ ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. ಹೊಸ ನಾಯಕನ ನೇತೃತ್ವದಲ್ಲಿ ತಂಡ ಮೊದಲ ಪಂದ್ಯವನ್ನು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದಿದ್ದು, ಮತ್ತೊಮ್ಮೆ ಫೈನಲ್‌ನತ್ತ ಹೆಜ್ಜೆ ಹಾಕುವ ನಿರೀಕ್ಷೆ ಮೂಡಿಸಿದೆ. ಒಟ್ಟಾರೆ 48 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದರೂ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಯಶಸ್ಸಿನ ಶೃಂಗಕ್ಕೆ ಏರಿಸಿದ ಅನುಭವ ಇಲ್ಲಿ ಕೋಚ್‌ ಕಾರ್ಯವನ್ನು ಸುಲಭವಾಗಿ ನಿಭಾಯಿಸಲು ಅವರಿಗೆ ನೆರವಾಗಿದೆ.

ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಆಟಗಾರನಾಗಿ ಕಣಕ್ಕೆ ಇಳಿದ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ನಂತರದ ವರ್ಷದಲ್ಲೇ ಕೋಚ್ ಆಗಿ ನೇಮಕವಾಗಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಚೆನ್ನೈ ಸೂಪರ್ ಕಿಂಗ್ಸ್‌ನ ಏಳು–ಬೀಳುಗಳಿಗೆ ಸಾಕ್ಷಿಯಾಗಿದ್ದಾರೆ. ಐದು ಅಂತರರಾಷ್ಟ್ರೀಯ ಪಂದ್ಯ ಸೇರಿದಂತೆ ಫ್ಲೆಮಿಂಗ್ ಒಟ್ಟಾರೆ ಆಡಿರುವುದು 53 ಟಿ20 ಪಂದ್ಯ ಮಾತ್ರ. ಆದರೆ ಕೋಚಿಂಗ್‌ನಲ್ಲಿ ಚುಟುಕು ಕ್ರಿಕೆಟ್‌ನ ಒಳಹೊರಗನ್ನೆಲ್ಲ ಅರಿತುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ ಈಗ ಕೋಲ್ಕತ್ತ ನೈಟ್ ರೈಡರ್ಸ್‌ಗಾಗಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಕೋಚ್ ಆಗಿ ಮೊದಲ ಆವೃತ್ತಿಯಲ್ಲಿ ಯಶಸ್ಸು ಕಾಣದೇ ಇದ್ದರೂ ಮತ್ತೆ ಭರವಸೆ ಮೂಡಿಸಿದ್ದಾರೆ.

ಅನಿಲ್ ಕುಂಬ್ಳೆ ಕೂಡ ಲೀಗ್‌ನಲ್ಲಿ ಆಡಿ ನಂತರ ಕೋಚಿಂಗ್ ಹುದ್ದೆಗೇರಿದವರು. ಭಾರತ ತಂಡದ ಕೋಚ್ ಆಗಿದ್ದ ಅವರು ಪಂಜಾಬ್ ಕಿಂಗ್ಸ್ ಕೋಚ್‌ ಸ್ಥಾನದಲ್ಲಿ ಎರಡನೇ ಆವೃತ್ತಿ ಪೂರೈಸುತ್ತಿದ್ದಾರೆ. ಕಳೆದ ಬಾರಿ ಅವರ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ನಂತರ ಚೇತರಿಸಿಕೊಂಡು ಆಟಗಾರರನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರು. ಹೀಗಾಗಿ ಈ ಸಲವೂ ನಿರೀಕ್ಷೆ ಮೂಡಿಸಿದ್ದಾರೆ. 

ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕ ಕೂಡ ಆಗಿದ್ದಾರೆ. ತಂಡವನ್ನು ಆಯ್ಕೆ ಮಾಡುವುದರಿಂದ ಹಿಡಿದು ತಂತ್ರಗಳನ್ನು ಹೆಣೆಯುವ ವರೆಗೂ ಅವರದೇ ಜವಾಬ್ದಾರಿ.

ಟಾಮ್ ಮೂಡಿ ತಂಡವನ್ನು ತೊರೆದ ನಂತರ ಸನ್‌ರೈಸರ್ಸ್ ಹೈದರಾಬಾದ್‌ನ ಕೋಚ್ ಆಗಿ ನೇಮಕಗೊಂಡಿರುವ ಟ್ರೆವರ್ ಬೆಯ್ಲೀಸ್‌ ಆಟಗಾರನಾಗಿ ಹೆಚ್ಚು ಮಿಂಚಿದವರಲ್ಲ. ಆದರೆ ಕೋಚ್ ಆಗಿ ದೊಡ್ಡ ಹೆಸರು ಮಾಡಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ದೊರಕಿಸಿಕೊಟ್ಟಿರುವ ಅವರು ಶ್ರೀಲಂಕಾದ ಕೋಚ್ ಆಗಿದ್ದಾಗ ತಂಡ ರನ್ನರ್ ಅಪ್ ಆಗಿತ್ತು. ಕೋಲ್ಕತ್ತ ನೈಟ್ ರೈಡರ್ಸ್ ಅವರ ಸಲಹೆಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿತ್ತು. ಈಗ ಸನ್‌ರೈಸರ್ಸ್‌ಗೆ ಏನು ಕೊಡುಗೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಗ್ಯಾರಿ ಕರ್ಸ್ಟನ್‌ ನಂತರ ಬೆಂಗಳೂರು ತಂಡದ ಕೋಚ್ ಆಗಿರುವ, ಆಸ್ಟ್ರೇಲಿಯಾದ ಮಾಜಿ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದ ಸೈಮನ್ ಕ್ಯಾಟಿಚ್‌ ಈ ವರೆಗೆ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗದೇ ಇರುವ ವಿರಾಟ್ ಕೊಹ್ಲಿ ಬಳಗಕ್ಕೆ ಈ ಬಾರಿಯಾದರೂ ಕಪ್ ಗೆಲ್ಲಿಸಿಕೊಡುತ್ತಾರಾ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದು ಮತ್ತು ಆರ್‌ಸಿಬಿ ಅಭಿಮಾನಿಗಳದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು