ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ನಲ್ಲಿ ಆಡಲು ಹಾರ್ದಿಕ್ ಫಿಟ್ ಅಲ್ಲವೇ? ಸ್ಪಷ್ಟನೆ ಕೊಟ್ಟ ರೋಹಿತ್

Last Updated 9 ಅಕ್ಟೋಬರ್ 2021, 7:02 IST
ಅಕ್ಷರ ಗಾತ್ರ

ಅಬುಧಾಬಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿರುವ ಪಾಂಡ್ಯ, ಯುಎಇನಲ್ಲಿ ಸಾಗುತ್ತಿರುವ ಟೂರ್ನಿಯ ದ್ವಿತೀಯಾರ್ಧದಲ್ಲಿ ಒಂದೇ ಒಂದು ಎಸೆತವನ್ನು ಬೌಲಿಂಗ್ ಮಾಡಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.

ಎರಡನೇ ಹಂತದಲ್ಲಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಪಾಂಡ್ಯ ಬಳಿಕ ಐದು ಪಂದ್ಯಗಳಲ್ಲಿ ಆಡಿದರೂ ತಮ್ಮ ನೈಜ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಲು ಸಾಧ್ಯವಾಗಲಿಲ್ಲ.

ಈ ನಡುವೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ. ಹಾರ್ದಿಕ್ ಸಾಮರ್ಥ್ಯದ ಬಗ್ಗೆ ನಂಬಿಕೆಯಿದ್ದು, ಮುಂದಿನ ವಾರದಿಂದ ಬೌಲಿಂಗ್ ಆರಂಭಿಸಬಹುದು ಎಂದು ಹೇಳಿದ್ದಾರೆ.

'ಹಾರ್ದಿಕ್ ಬೌಲಿಂಗ್‌ಗೆ ಸಂಬಂಧಿಸಿದಂತೆ ಫಿಸಿಯೊಗಳು ಹಾಗೂ ತರಬೇತುದಾರರು ಅವರ ಬೌಲಿಂಗ್‌ನತ್ತ ನಿಗಾ ವಹಿಸುತ್ತಿದ್ದಾರೆ. ಅವರು ಇನ್ನೂ ಒಂದೇ ಒಂದು ಎಸೆತವನ್ನು ಎಸೆದಿಲ್ಲ. ಆದರೆ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದಾರೆ. ಮುಂದಿನ ವಾರ ಬೌಲಿಂಗ್ ಮಾಡಲು ಸಾಧ್ಯವಾಗಬಹುದು. ಯಾರಿಗೆ ಗೊತ್ತು? ವೈದ್ಯರು ಹಾಗೂ ಫಿಸಿಯೋಗಳಿಗೆ ಈ ಕುರಿತು ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗಬಹುದು' ಎಂದು ರೋಹಿತ್ ಹೇಳಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ 12 ಪಂದ್ಯ ಆಡಿರುವ ಪಾಂಡ್ಯ ಅವರಿಗೆ 14.11ರ ಸರಾಸರಿಯಲ್ಲಿ 127 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಅಲ್ಲದೆ ಕೇವಲ 113.39ರ ಸರಾಸರಿಯನ್ನಷ್ಟೇ ಕಾಪಾಡಿಕೊಂಡಿದ್ದರು.

ಅವರ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೋಹಿತ್, 'ಹೌದು, ಸ್ವತಃ ಪಾಂಡ್ಯ ಅವರೇ ಈ ಬಗ್ಗೆ ನಿರಾಸೆಗೊಂಡಿದ್ದಾರೆ. ಆದರೆ ಅವರೊಬ್ಬ ಗುಣಮಟ್ಟದ ಆಟಗಾರನಾಗಿದ್ದು, ಹಿಂದೆಯೂ ಇಂತಹ ಕಠಿಣ ಪರಿಸ್ಥಿತಿಯಿಂದ ಹೊರಬಂದಿದ್ದಾರೆ' ಎಂದು ತಿಳಿಸಿದರು.

'ಹಾರ್ದಿಕ್ ಪಾಂಡ್ಯ ಸಾಮರ್ಥ್ಯದ ಬಗ್ಗೆ ತಂಡಕ್ಕೆ ನಂಬಿಕೆಯಿದೆ. ವೈಯಕ್ತಿಕವಾಗಿ ನನಗೂ ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ. ಅವರೊಬ್ಬ ಮೌಲ್ಯಯುತ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT