ಭಾನುವಾರ, ಮಾರ್ಚ್ 7, 2021
30 °C
ಆರಂಭದಲ್ಲಿಯೇ ಎಡವಿದ ದಕ್ಷಿಣ ಆಫ್ರಿಕಾ

ಬೆಂಗಳೂರು ಹುಡುಗ ಮಯಂಕ್ ಅಗರವಾಲ್‌ನ ದ್ವಿಶತಕದ ದರ್ಬಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶಾಖಪಟ್ಟಣ: ‘ಬಂದರು ನಗರಿ’ಯ ಕಡಲಿನಲ್ಲಿ ಗುರುವಾರ ಬೆಂಗಳೂರು ಹುಡುಗ ಮಯಂಕ್ ಅಗರವಾಲ್ ಸಂತಸದ ಅಲೆಗಳನ್ನು ಎಬ್ಬಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು.  ಆರಂಭಿಕ ಆಟಗಾರನಾಗಿ ಸಫಲತೆಯ ದೋಣಿಯೇರಿದ ರೋಹಿತ್ ಶರ್ಮಾ ಅವರೊಂದಿಗೆ  317 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ದಾಖಲೆಯನ್ನೂ ಬರೆದರು.

ಈ ಗಟ್ಟಿ ಬುನಾದಿಯ ಮೇಲೆ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 136 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 502 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ತಂಡವು ದಿನದಾಟದ ಕೊನೆಗೆ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 39 ರನ್‌ ಗಳಿಸಿತು. ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಎರಡು ವಿಕೆಟ್ ಕಬಳಿಸಿದರು.

ಮಯಂಕ್ ಆಟದ ಹೊಳಪು: ಪಂದ್ಯದ ಮೊದಲ ದಿನವಾದ ಬುಧವಾರ ಮಧ್ಯಾಹ್ನ ಮಳೆಯಿಂದಾಗಿ ಆಟ ನಿಂತಾಗ ಮಯಂಕ್ ಅಗರವಾಲ್ 84 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಶತಕ ಗಳಿಸಿದ್ದ ರೋಹಿತ್ ಶರ್ಮಾ ಕೂಡ ಇನ್ನೊಂದು ಬದಿಯಲ್ಲಿ ಇದ್ದರು.

ಎರಡನೇ ದಿನ ಬೆಳಿಗ್ಗೆ ಆಟ ಆರಂಭವಾದಾಗ ದಕ್ಷಿಣ ಆಫ್ರಿಕಾ ಬೌಲರ್‌ಗಳ ಲೆಕ್ಕಾಚಾರವನ್ನು ಭಾರ ತದ ಜೋಡಿಯು ಬುಡಮೇಲು ಮಾ ಡಿತು. ಬೆಳಿಗ್ಗೆಯ ವಾತಾವರಣದಲ್ಲಿ ಎದುರಾಳಿಗಳಿಗೇ ಬಿಸಿ ಮುಟ್ಟಿಸಿತು. ದಿನದಾಟದ 21ನೇ ಎಸೆತದಲ್ಲಿ ಶತಕ ಪೂರೈಸಿದರು. ಸ್ಪಿನ್ನರ್ ಕೇಶವ ಮಹಾರಾಜ್ ಅವರು ಹಾಕಿದ 69ನೇ ಓವರ್‌ನಲ್ಲಿ  ಎರಡನೇ ಎಸೆತವನ್ನು ಪುಷ್ ಮಾಡಿ  ಒಂದು ರನ್ ಗಳಿಸಿದ ಮಯಂಕ್‌ ಸಂಭ್ರಮಿಸಿದರು. ಹೆಲ್ಮೆಟ್ ತೆಗೆದು ಎರಡೂ ಕಣ್ಣು ಮುಚ್ಚಿ, ತೋಳಗಲಿಸಿ ಆಕಾಶದತ್ತ ಮುಖ ಮಾಡಿದರು. ಇತ್ತ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇನ್ನೊಂದು ಬದಿಯಲ್ಲಿದ್ದ ರೋಹಿತ್ ಧಾವಿಸಿ ಬಂದು ಮಯಂಕ್ ಅವರನ್ನು ಬಿಗಿದಪ್ಪಿ ಅಭಿನಂದಿಸಿದರು.

ನಂತರವೂ ಇವರಿಬ್ಬ ಆಟದ ಅಬ್ಬರ ಮುಂದುವರಿಯಿತು. ಬೌಲರ್‌ಗಳು ದಿಕ್ಕು ತೋಚದೇ ಪರದಾಡಿದರು. ರೋಹಿತ್ 76ನೇ ಓವರ್‌ನಲ್ಲಿ 150ರ ಗಡಿ ಮುಟ್ಟಿದರು. ಆದರೆ, 82ನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಎಸೆತದ ಸ್ಪಿನ್‌ ಗುರುತಿಸದ ರೋಹಿತ್ ಮುಂದಡಿ ಇಟ್ಟು ತಪ್ಪು ಮಾಡಿದರು. ಚುರುಕಾದ ಸ್ಟಂಪಿಂಗ್ ಮಾಡಿದ ಕ್ವಿಂಟನ್ ಡಿ ಕಾಕ್ ಅವರು ಮೊದಲ ವಿಕೆಟ್ ಜೊತೆಯಾಟವನ್ನು ಮುರಿದರು.

ಆದರೆ ಇನ್ನೊಂದೆಡೆ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸುತ್ತಿದ್ದ ಮಯಂಕ್ ಆಟ ಮತ್ತಷ್ಟು ರಂಗೇರಿತು. ಆಕರ್ಷಕ ಡ್ರೈವ್‌ಗಳು, ಸ್ವೀಪ್‌ ಮತ್ತು ಫ್ಲಿಕ್‌ಗಳ ರಸದೌತಣವನ್ನು ಉಣಬಡಿಸಿದರು. ಕ್ಲೋಸ್ ಇನ್ ಫೀಲ್ಡಿಂಗ್‌  ವ್ಯವಸ್ಥೆಯನ್ನೂ ಪರಿಗಣಿಸದ ಅವರು ಚೆಂಡನ್ನು ಸರಾಗವಾಗಿ ಬೌಂಡರಿ ದಾಟಿಸಿದರು. ಅವರ  ಏಕಾಗ್ರತೆ‌ಯು ಉತ್ತುಂಗದಲ್ಲಿತ್ತು. 

116ನೇ ಓವರ್‌ನ ಮೊದಲ ಎಸೆತವನ್ನು ಡ್ರೈವ್ ಮಾಡಿದ ಮಯಂಕ್ ಎರಡು ರನ್‌ಗಳನ್ನು ಗಳಿಸಿದರು. ಅದರೊಂದಿಗೆ ದ್ವಿಶತಕದ ಸಂಭ್ರಮ ಆಚರಿಸಿದರು. ಆದರೆ ಈ ಬಾರಿ ತಮ್ಮ ಸಹ ಆಟಗಾರರ ಅಭಿನಂದನೆ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ಮೆಚ್ಚುಗೆಯನ್ನೂ ಮಯಂಕ್ ಗಳಿಸಿದರು. ನಾಯಕ ಫಾಫ್ ಡು ಪ್ಲೆಸಿ ಓಡಿಬಂದು ಹಸ್ತಲಾಘವ ಮಾಡಿ ಅಭಿನಂದಿಸಿದರು.ಪ್ರೇಕ್ಷಕರ ಗ್ಯಾಲರಿಯಲ್ಲಿ ಕರತಾಡನ ಮುಗಿಲುಮುಟ್ಟಿತು. ನಂತರವೂ ಅವರು ಉತ್ತಮವಾಗಿ ಆಡುವಾಗ ತ್ರಿಶತಕದ ಸಾಧನೆ ಮಾಡುವ ನಿರೀಕ್ಷೆ ಮೂಡಿತ್ತು. ಆದರೆ, ಡೀನ್ ಎಲ್ಗರ್ ಎಸೆತದಲ್ಲಿ ಕ್ಯಾಚ್ ಪಡೆದ ಡೇನ್ ಪೀಡ್ತ್ ನಿಟ್ಟುಸಿರುಬಿಟ್ಟರು. ಮಯಂಕ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ತಂಡವು 500 ರನ್‌ ಮೊತ್ತದ ಗಡಿ ದಾಟಿದಾಗ ವಿರಾಟ್ ಡಿಕ್ಲೇರ್ಡ್‌ ಮಾಡಿಕೊಂಡರು.

**

ದೇವರ ಕೃಪೆಯಿಂದ ಮಯಂಕ್ ಇವತ್ತು ಈ ಸಾಧನೆ ಮಾಡಿದ್ದಾನೆ. ಮಯಂಕ್ ಶ್ರಮ ಮತ್ತು ಅವರ ಕೋಚ್ ಮುರಳಿಯ ಮಾರ್ಗದರ್ಶನ ಮಹತ್ವದ್ದು. ಇನ್ನೇನೂ ಹೇಳಲಾರೆ.
–ಅನುರಾಗ್ ಅಗರವಾಲ್, ಮಯಂಕ್ ತಂದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು