ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

Last Updated 17 ಅಕ್ಟೋಬರ್ 2021, 13:41 IST
ಅಕ್ಷರ ಗಾತ್ರ

ನವದೆಹಲಿ: ರಾಹುಲ್ ದ್ರಾವಿಡ್ ಅವರನ್ನು ತರಬೇತುದಾರ ಸ್ಥಾನಕ್ಕೆ ಮನವೊಲಿಸಿದ ಎರಡು ದಿನಗಳ ಬಳಿಕ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾನುವಾರ ಭಾರತ ತಂಡದ ಮುಖ್ಯ ಕೋಚ್‌ ಹಾಗೂ ಮೂವರು ಸಹಾಯಕ ಕೋಚ್‌ಗಳ ಹುದ್ದೆಗಳಿಗೆ ಔಪಚಾರಿಕವಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ಶಿಫಾರಸುಗಳ ಮೇರೆಗೆ ರೂಪಿಸಿದ ನಿಯಮಗಳನ್ವಯ ಬಿಸಿಸಿಐ ಈ ಅರ್ಜಿಗಳನ್ನು ಆಹ್ವಾನಿಸಿದೆ.

ಏನಾದರೂ ಪವಾಡ ನಡೆಯದಿದ್ದರೆ, ಪ್ರಸ್ತುತ ಎನ್‌ಸಿಎ ಮುಖ್ಯಸ್ಥರಾಗಿರುವ ಮತ್ತು ಭಾರತ ‘ಎ‘ ಮತ್ತು 19 ವರ್ಷದೊಳಗಿನವರ ತಂಡಗಳ ಮಾರ್ಗದರ್ಶಕ ಶಕ್ತಿಯಾಗಿರುವ ದ್ರಾವಿಡ್ ಅವರು ಮುಖ್ಯ ಕೋಚ್‌ ಆಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ.

ಐಪಿಎಲ್‌ ಟೂರ್ನಿಯ ಫೈನಲ್ ಸಂದರ್ಭದಲ್ಲಿ ದುಬೈನಲ್ಲಿ ನಡೆದ ಬಿಸಿಸಿಐನ ಉನ್ನತ ಅಧಿಕಾರಿಗಳ ಜೊತೆಗಿನ ಚರ್ಚೆಯಲ್ಲಿ ದ್ರಾವಿಡ್ ಈಗಾಗಲೇ ಹುದ್ದೆ ವಹಿಸಿಕೊಳ್ಳಲು ಅನೌಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಬಿಸಿಸಿಐ, ಕ್ರಿಕೆಟ್ ಸಲಹಾ ಸಮಿತಿಯ(ಸಿಎಸಿ) ಮೂಲಕ ಅಪೆಕ್ಸ್ ಸಮಿತಿಗೆ ಈ ಕುರಿತು ಔಪಚಾರಿಕ ಶಿಫಾರಸು ಮಾಡಬೇಕಾಗುತ್ತದೆ. ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನವಾಗಿದೆ .

2023ರ ವಿಶ್ವಕಪ್ ಅಂದರೆ ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್‌, ಬೌಲಿಂಗ್, ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌ ತರಬೇತುದಾರರ ಹುದ್ದೆಗಳಿಗೆ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ.

ಸದ್ಯ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಂ ರಾಥೋಡ್ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಅವರ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿದೆ. ಬೌಲಿಂಗ್ ತರಬೇತುದಾರರ ಹುದ್ದೆಗೆ ಪಾರಸ್‌ ಮಾಂಬ್ರೆ ಆಯ್ಕೆಯಾಗುವ ನಿರೀಕ್ಷೆಯಿದೆ.

ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಬೇಕಾದ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಹುದ್ದೆಗೂ ಬಿಸಿಸಿಐ ಅಭ್ಯರ್ಥಿಗಳ ಶೋಧ ನಡೆಸಿದೆ. ಈ ಹುದ್ದೆಯಲ್ಲಿದ್ದ ಆಶಿಶ್ ಕೌಶಿಕ್ ಇತ್ತೀಚೆಗೆ ಸ್ಥಾನ ತ್ಯಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT