ಗುರುವಾರ , ಆಗಸ್ಟ್ 5, 2021
28 °C
ಸಾಕ್ಷ್ಯಾಧಾರ ತೋರಿಸಿ ಸಾಬೀತು ಮಾಡಿ; ಜಯವರ್ಧನೆ, ಸಂಗಕ್ಕಾರ ತಿರುಗೇಟು

2011ರ ವಿಶ್ವಕಪ್ ಫೈನಲ್ ‘ಮಾರಾಟ’ ಮಾಡಿದ್ದ ಶ್ರೀಲಂಕಾ: ಮಾಜಿ ಸಚಿವ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ಕುಮಾರ ಸಂಗಕ್ಕಾರ

ಕೊಲಂಬೊ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು ಶ್ರೀಲಂಕಾ ತಂಡವು ಭಾರತಕ್ಕೆ ‘ಮಾರಾಟ’ ಮಾಡಿತ್ತು ಎಂದು ಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳತುಗಾಮಗೆ ಆರೋಪಿಸಿದ್ದಾರೆ.

ಸ್ಥಳೀಯ ‘ಸಿರಸಾ’ ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಫೈನಲ್‌ನಲ್ಲಿ ಭಾರತಕ್ಕೆ 275 ರನ್‌ಗಳ ಗುರಿ ಒಡ್ಡಲು ಲಂಕಾ ತಂಡವು ಫಿಕ್ಸ್‌ ಮಾಡಿಕೊಂಡಿತ್ತು. ಗೌತಮ್ ಗಂಭೀರ್ (97) ಮತ್ತು ಮಹೇಂದ್ರಸಿಂಗ್ ಧೋನಿ (91) ಅವರ ಬ್ಯಾಟಿಂಗ್ ಬಲದಿಂದ ಭಾರತವು ಟ್ರೋಫಿ ಗೆದ್ದಿತು’ ಎಂದಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ತವರಿನಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಧೋನಿ ಬಳಗವು ಪಾತ್ರವಾಗಿತ್ತು. 1983ರಲ್ಲಿ ಕಪಿಲ್‌ದೇವ್ ಬಳಗವು ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.

‘ನಾನು ಕ್ರೀಡಾ ಸಚಿವನಾಗಿದ್ದಾಗಲೂ ಈ ಮಾತು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. 2011ರ ವಿಶ್ವಕಪ್ ಟ್ರೋಫಿಯನ್ನು ನಾವು ಮಾರಿದ್ದೆವು’ ಎಂದಿದ್ದಾರೆ. 

‘ದೇಶದ ಹಿತದೃಷ್ಟಿಯಲ್ಲಿ ಈ ಮಾತನ್ನು ನಾನು ಹೇಳಬಾರದು. ಈ ಹೇಳಿಕೆಯನ್ನು ಜವಾಬ್ದಾರಿಯುತವಾಗಿ ನೀಡುತ್ತಿದ್ದೇನೆ. ಪಂದ್ಯ ಫಿಕ್ಸ್ ಆಗಿತ್ತು. ಈ ಬಗ್ಗೆ ಚರ್ಚೆ ಮಾಡಬಲ್ಲೆ’ ಎಂದಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿರುವ ಆಗಿನ ಲಂಕಾ ತಂಡದ ನಾಯಕರಾಗಿದ್ದ ಕುಮಾರ ಸಂಗಕ್ಕಾರ, ‘ಮಾಜಿ ಸಚಿವರು ತಮ್ಮ ಬಳಿ ಸಾಕ್ಷ್ಯಾಧಾರಗಳಿದ್ದರೆ ಐಸಿಸಿಗೆ ಸಲ್ಲಿಸಬೇಕು. ಭ್ರಷ್ಟಾಚಾರ ತಡೆ ಘಟಕ ಮತ್ತು ಭದ್ರತಾ ಘಟಕಗಳು ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಆ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಮಹೇಲ ಜಯವರ್ಧನೆ ಕೂಡ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 

‘ದೇಶದಲ್ಲಿ ಈಗ ಚುನಾವಣೆ ಇದೆ. ಸರ್ಕಸ್‌ ಆರಂಭವಾಗಿದೆ.ಆರೋಪಿಗಳ ಹೆಸರು ಮತ್ತು ಸಾಕ್ಷ್ಯಗಳು..?’ ಎಂದು ಜಯವರ್ಧನೆ ಟ್ವೀಟ್ ಮಾಡಿದ್ದಾರೆ.

‘ಎರಡು ಗುಂಪುಗಳು ಈ ಪ್ರಕರಣದಲ್ಲಿ ಶಾಮೀಲಾಗಿವೆ. ಆದರೆ ಅದರಲ್ಲಿ ಯಾವುದೇ ಆಟಗಾರ ಇಲ್ಲ’ ಎಂದು ಮಹಿಂದಾನಂದ ಅಳತುಗಾಮಗೆ ಹೇಳಿದ್ದಾರೆ.

ಫೈನಲ್ ಪಂದ್ಯದ ವೀಕ್ಷಣೆಗೆ ಆಹ್ವಾನಿತರಲ್ಲಿ ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಷ ಮತ್ತು ಅಳತುಗಾಮಗೆ ಕೂಡ ಇದ್ದರು. ಕೆಲವು ದಿನಗಳ ಹಿಂದೆ ಮಾಜಿ ನಾಯಕ  ಅರ್ಜುನ ರಣತುಂಗಾ ಅವರೂ 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆಗಿರುವ ಕುರಿತು ತನಿಖೆ ಮಾಡುವಂತೆ ಒತ್ತಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು