ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕಗಳ ವೃತ್ತಿ ಜೀವನಕ್ಕೆ ತೆರೆ ಎಳೆದ ಕ್ರಿಕೆಟ್‌ ‘ರಾಣಿ’ ಮಿಥಾಲಿ ರಾಜ್

Last Updated 9 ಜೂನ್ 2022, 16:53 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಕ್ರಿಕೆಟ್‌ ಕಂಡಂತಹ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾದ ಮಿಥಾಲಿ ರಾಜ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಬುಧವಾರ ನಿವೃತ್ತಿ ಪ್ರಕಟಿಸಿದರು. ಇದರೊಂದಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಜ್ವಲಿಸಿದ ನಕ್ಷತ್ರವೊಂದು ತೆರೆಮೆರೆಗೆ ಸರಿದಂತಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿ ಒಟ್ಟಾರೆಯಾಗಿ ಅತಿಹೆಚ್ಚು ರ‌ನ್‌ಗಳನ್ನು ಕಲೆಹಾಕಿದ ಬ್ಯಾಟರ್‌ ಎಂಬ ದಾಖಲೆಯೂ ಸೇರಿದಂತೆ, ಹಲವು ಪ್ರಥಮಗಳನ್ನು ತಮ್ಮ ಹೆಸರಿನಲ್ಲಿ ಬರೆಯಿಸಿಕೊಂಡಿರುವ ಮಿಥಾಲಿ ಅವರು ‘ಟ್ವೀಟ್‌’ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ತಿಳಿಸಿದ್ದಾರೆ.

ಆಕ್ರಮಣ ಮತ್ತು ರಕ್ಷಣಾತ್ಮಕ ಆಟವನ್ನು ಮೈಗೂಡಿಸಿಕೊಂಡು ಇನಿಂಗ್ಸ್‌ ಕಟ್ಟುತ್ತಿದ್ದ ಮಿಥಾಲಿ, ಭಾರತದ ಹಲವಾರು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುದೀರ್ಘ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ಹಲವು ಮಧುರ ನೆನಪುಗಳನ್ನು ಕಟ್ಟಿಕೊಂಡು ಅವರು ಇದೀಗ ವೃತ್ತಿಜೀವನಕ್ಕೆ ತೆರೆಎಳೆದಿದ್ದಾರೆ.

‘ಕಳೆದ ಹಲವು ವರ್ಷಗಳಿಂದ ನನಗೆ ಪ್ರೀತಿ ಹಾಗೂ ಬೆಂಬಲ ನೀಡಿದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆ ಹಾಗೂ ಬೆಂಬಲದೊಂದಿಗೆ ನಾನು ಎರಡನೇ ಇನಿಂಗ್ಸ್‌ನತ್ತ ಮುಖ ಮಾಡುತ್ತಿದ್ದೇನೆ’ ಎಂದು ಮಿಥಾಲಿ ಹೇಳಿದ್ದಾರೆ.

39 ವರ್ಷದ ಮಿಥಾಲಿ 232 ಏಕದಿನ ಮತ್ತು 89 ಟ್ವೆಂಟಿ–20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಸುದೀರ್ಘ ವೃತ್ತಿಜೀವನದಲ್ಲಿ ಅವರಿಗೆ 12 ಟೆಸ್ಟ್‌ ಪಂದ್ಯಗಳನ್ನು ಮಾತ್ರ ಆಡುವ ಅವಕಾಶ ದೊರೆತಿದೆ. ಆದರೆ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ಏಕೈಕ ಆಟಗಾರ್ತಿ ಎಂಬ ಹಿರಿಮೆ ಒಲಿದಿದೆ.

ತಂಡದ ನಾಯಕಿಯಾಗಿಯೂ ಛಾಪು ಮೂಡಿಸಿದ್ದ ಮಿಥಾಲಿ, ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು 2005 ಮತ್ತು 2017ರಲ್ಲಿ ಫೈನಲ್‌ವರೆಗೂ ಮುನ್ನಡೆಸಿದ್ದರು. 2017ರ ವಿಶ್ವಕಪ್‌ನಲ್ಲಿ ಮಿಥಾಲಿ ನಾಯಕತ್ವದ ತಂಡ ನೀಡಿದ್ದ ಪ್ರದರ್ಶನ, ಭಾರತದ ಮಹಿಳಾ ಕ್ರಿಕೆಟ್‌ನ ದಿಶೆಯನ್ನೇ ಬದಲಿಸಿತ್ತು.

ತಮ್ಮ 16ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಕಣಕ್ಕಿಳಿದಿದ್ದರು. 1999ರಲ್ಲಿ ಐರ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನ ಆರಂಭವಾಗಿತ್ತು. ಈ ವರ್ಷ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯ ಅವರ ಕೊನೆಯ ಪಂದ್ಯ. ಆ ಪಂದ್ಯದಲ್ಲಿ 68 ರನ್‌ ಗಳಿಸಿದ್ದರು.

ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಒಟ್ಟಾರೆ 10,868 ರನ್‌ಗಳನ್ನು ಮಿಥಾಲಿ ಕಲೆಹಾಕಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ 10 ಸಾವಿರಕ್ಕಿಂತ ಅಧಿಕ ರನ್‌ಗಳನ್ನು ಕಲೆಹಾಕಿರುವುದು ಮಿಥಾಲಿ ಮತ್ತು ಇಂಗ್ಲೆಂಡ್‌ನ ಚಾರ್ಲೊಟ್‌ ಎಡ್ವರ್ಡ್ಸ್‌ (10,273) ಮಾತ್ರ.

2019 ರಲ್ಲೇ ಅವರು ಟಿ–20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮಾರ್ಚ್‌ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಮಿಥಾಲಿ ನೇತೃತ್ವದ ಭಾರತ ತಂಡ ಬೇಗನೇ ಹೊರಬಿದ್ದಿತ್ತು. ಆ ಸಂದರ್ಭದಲ್ಲೇ ಅವರ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿಬಂದಿದ್ದವು.

*
ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಇದು ಸೂಕ್ತ ಸಮಯವೆಂದು ನನಗನಿಸುತ್ತಿದೆ. ಪ್ರತಿಭಾನ್ವಿತ ಆಟಗಾರ್ತಿಯನ್ನೊಳಗೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯ ಉಜ್ವಲವಾಗಿದೆ.
-ಮಿಥಾಲಿ ರಾಜ್

*
ಭಾರತದ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅಪಾರ. ಶ್ರೀಮಂತ ಪರಂಪರೆಯೊಂದನ್ನು ನೀವು ಬಿಟ್ಟು ಹೋಗುತ್ತಿದ್ದೀರಿ. ನಿಮಗೆ ಅಭಿನಂದನೆಗಳು. ಜೀವನದ ಹೊಸ ಇನಿಂಗ್ಸ್‌ಗೆ ಶುಭವಾಗಲಿ.
-ಬಿಸಿಸಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT