ಶುಕ್ರವಾರ, ಜನವರಿ 24, 2020
22 °C

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೂಲ್‌ ಮ್ಯಾನ್‌ ಎಂಎಸ್ ಧೋನಿಗೆ 15 ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

MS Dhoni

ಬೆಂಗಳೂರು: ಸೌರವ್‌ ಗಂಗೂಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ 2004ರಲ್ಲಿ ಎಂಎಸ್‌ ಧೋನಿ ಚೊಚ್ಚಲ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಅಡಿದರು. ಭಾರತ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಭಾವಿ ಆಟಗಾರನಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಸೋಮವಾರಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ್ದಾರೆ.  

ರಾಂಚಿಯ ಹುಡುಗ 2004ರ ಡಿಸೆಂಬರ್‌ 23ರಂದು ಬಾಂಗ್ಲಾದೇಶದ ಎದುರು ಆಡಿದ ಮೊದಲ ಪಂದ್ಯದಲ್ಲಿ ಒಂದೂ ರನ್‌ ಗಳಿಸದೆ  ರನ್‌ ಔಟ್‌ ಆಗಿದ್ದರು. ಎದುರಿಸಿದ ಮೊದಲ ಎಸೆತದಲ್ಲಿಯೇ ರನ್‌ ಕಸಿಯಲು ಹೋಗಿ ವಿಕೆಟ್‌ ಕಳೆದುಕೊಂಡು ಹೊರ ನಡೆದಿದ್ದರು. ಆ ಪಂದ್ಯದಲ್ಲಿ ಭಾರತ 11 ರನ್‌ ಗೆಲುವು ಸಾಧಿಸಿತ್ತು. 

ಇದನ್ನೂ ಓದಿ: ಟೀಂ ಇಂಡಿಯಾದ ಕೂಲ್‌ ಮ್ಯಾನ್‌ ಮಹೇಂದ್ರ ಸಿಂಗ್‌ ಧೋನಿ; ಸಾಧನೆ ಇಂದಿಗೂ ಜೀವಂತ!

ಬಾಂಗ್ಲಾ ಸರಣಿ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಧೋನಿ ಮೂರು ಪಂದ್ಯಗಳಲ್ಲಿ ಕೇವಲ 19 ರನ್‌ಗಳಷ್ಟೇ ಪೇರಿಸಿದ್ದರು. ಕೆಲವು ತಿಂಗಳಲ್ಲೇ (2005ರ ಏಪ್ರಿಲ್‌) ಧೋನಿ ಪಾಕಿಸ್ತಾನ ಎದುರಿನ ಸರಣಿಗೆ ಆಯ್ಕೆಯಾದರು. ವಿಶಾಖಪಟ್ಟಣದಲ್ಲಿ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೌರವ್‌ ಗಂಗೂಲಿ ಪ್ರೇರೇಪಿಸಿದರು. ಆ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ಗಳ ಬೆವರಿಳಿಸಿದ ಧೋನಿ 123 ಎಸೆತಗಳಲ್ಲಿ 148 ರನ್‌ ಸಿಡಿಸಿದರು. ಅವರ ಆರ್ಭಟಕ್ಕೆ ಪಾಕಿಸ್ತಾನ ತಂಡ ದಂಗುಬಡಿದಂತಾಗಿತ್ತು, ಟೀಂ ಇಂಡಿಯಾದಲ್ಲಿ ಹೊಸ ಪ್ರತಿಭೆ ಪ್ರಜ್ವಲಿಸಿತ್ತು. ಅಲ್ಲಿಂದ ಎಂಎಸ್‌ಡಿ ವೃತ್ತಿ ಬದುಕು ಪ್ರಮುಖ ತಿರುವು ಕಂಡಿತು.

ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಆಡಿರುವ 38 ವರ್ಷ ವಯಸ್ಸಿನ ಧೋನಿ ಪ್ರಸ್ತುತ ಆಟದಿಂದ ವಿರಾಮ ಪಡೆದಿದ್ದಾರೆ. 350 ಏಕದಿನ ಪಂದ್ಯ, 90 ಟೆಸ್ಟ್‌ ಪಂದ್ಯ ಹಾಗೂ 98 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಧೋನಿ, ಸ್ಟಂಪ್‌ ಹಿಂಬದಿಯಲ್ಲಿದ್ದಾಗ 829 ಬ್ಯಾಟ್ಸ್‌ಮನ್‌ಗಳ ಆಟ ಮುಗಿಸಿದ್ದಾರೆ. 2011ರ ವಿಶ್ವಕಪ್‌ ತಂಡದ ಸಾರಥ್ಯವಹಿಸಿದ್ದ ಅವರು, ಫೈನಲ್‌ ಪಂದ್ಯದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಮತ್ತೊಮ್ಮೆ ಭಾರತ ವಿಶ್ವಕಪ್‌ನೊಂದಿಗೆ ಸಂಭ್ರಮಿಸುವಂತೆ ಮಾಡಿದರು. 

ಇದನ್ನೂ ಓದಿ: ಭಾರತದ ಕ್ರಿಕೆಟ್ ಚಹರೆ ಬದಲಿಸಿದ ಧೋನಿ: ಐಸಿಸಿ

ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಏಕದಿನ ಪಂದ್ಯಗಳಲ್ಲಿ ಅತ್ಯಂತ ಆಕ್ರಮಣಕಾರಿ ತಂಡವಾಗಿ ಪರಿವರ್ತನೆಗೊಂಡಿತು. 2011ರ ವಿಶ್ವಕಪ್‌, 2007ರ ಟಿ20 ವಿಶ್ವಕಪ್‌ ಹಾಗೂ 2013ರ ಚಾಂಪಿಯನ್ಸ್‌ ಟ್ರೋಫಿ ಸೇರಿದಂತೆ ಐಸಿಸಿಯ ಮೂರು ಪ್ರಮುಖ ಟ್ರೋಫಿಗಳಲ್ಲಿ ಗೆಲುವು ಸಾಧಿಸಿದ ಭಾರತದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. 

ಐಪಿಎಲ್‌ ಫ್ರಾಂಚೈಸಿ 'ಚೆನ್ನೈ ಸೂಪರ್‌ ಕಿಂಗ್ಸ್‌' ಮುನ್ನಡೆಸಿ ಮೂರು ಐಪಿಎಲ್‌ ಕಿರೀಟ ಗಳಿಸಿಕೊಟ್ಟಿದ್ದಾರೆ. 2019ರ ವಿಶ್ವಕಪ್‌ನಿಂದ ಭಾರತ ಹೊರ ಬರುತ್ತಿದ್ದಂತೆ ಧೋನಿ ನಿವೃತ್ತಿಯ ಚರ್ಚೆ ಜೋರಾಯಿತು. ಕೆಲವು ಸಮಯ ಭಾರತೀಯ ಸೇನೆಯ ಶಿಬಿರಗಳಲ್ಲಿ ಹಾಗೂ ಮನೆ, ಮಕ್ಕಳೊಂದಿಗೆ ಸಮಯ ಮೀಸಲಿಟ್ಟಿರುವ ಧೋನಿ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ನಿವೃತ್ತಿ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, 'ಜನವರಿವರೆಗೂ ನನ್ನನ್ನೂ ಏನೂ ಕೇಳಬೇಡಿ' ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. 

ಏಕದಿನ ಕ್ರಿಕೆಟ್‌ನಲ್ಲಿ ಧೋನಿ ಸಾಧನೆ

ಏಕದಿನ ಪಂದ್ಯಗಳು– 350
ರನ್‌ ಗಳಿಕೆ – 10,773
ಗರಿಷ್ಠ ಸ್ಕೋರ್‌– 183
ಸ್ಟ್ರೈಕ್‌ ರೇಟ್‌– 87.56
ಶತಕ– 10
ಅರ್ಧ ಶತಕ– 73
ಬೌಂಡರಿ– 826
ಸಿಕ್ಸರ್– 229
ಕ್ಯಾಚ್‌– 321 + ಸ್ಟಂಪಿಂಗ್‌– 123 = 444 (ಡಿಸ್ಮಿಸಲ್)

ಬ್ಯಾಟಿಂಗ್‌ ಸರಾಸರಿ– 50.58

ಇದನ್ನೂ ಓದಿ: 'ನಾಯಕ'ನ ನೆನಪಿನಂಗಳ | ವೃತ್ತಿ ಬದುಕಿನ ಆ ಎರಡು ಸಂದರ್ಭಗಳನ್ನು ಮರೆಯಲಾರೆ: ಧೋನಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು