‘ವಿಶ್ವ’ ಗೆದ್ದ ತುಂಟ ಹುಡುಗ.. ಅಮ್ಮನ ಬಣ್ಣನೆ

ಭಾನುವಾರ, ಜೂನ್ 16, 2019
22 °C
ಹೆಮ್ಮೆಯ ತಾಯಿ ಶಬನಮ್ ಸಿಂಗ್ ಮನದಾಳದ ಮಾತು

‘ವಿಶ್ವ’ ಗೆದ್ದ ತುಂಟ ಹುಡುಗ.. ಅಮ್ಮನ ಬಣ್ಣನೆ

Published:
Updated:
Prajavani

ಬೆಂಗಳೂರು: ‘ನನ್ನ ಮಗನ ಹಾವಭಾವ ನೋಡಿದವರೆಲ್ಲ ಇವನು ಸೋಮಾರಿ. ಏನು ಆಡ್ತಾನೆ ಎಂದೆಲ್ಲ ಹೇಳ್ತಿದ್ದರು. ಆದರೆ ಒಮ್ಮೆ ಮೈದಾನದೊಳಗೆ ಹೋದರೆ ಆತನ ಆಟ ಬೇರೆಯೇ ಆಗಿರುತ್ತಿತ್ತು. ಸೋಮಾರಿ ಅಂದವರೆಲ್ಲ ಕಣ್ಣುಪಿಳುಕಿಸದೇ ನೋಡುತ್ತಿದ್ದರು....’

ಎಲ್ಲ ಮಾದರಿಯ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಾಯಿ ಶಬನಮ್ ಸಿಂಗ್ ಅವರ ನುಡಿಗಳಿವು. ತಮ್ಮ ಜೀವನವನ್ನು ಮಗನ ಏಳ್ಗೆಗೆ ಮುಡಿಪಿಟ್ಟ ತಾಯಿ ಅವರು. ’ಪ್ರಜಾವಾಣಿ’ಯೊಂದಿಗೆ ದೂರವಾಣಿ ಮೂಲಕ ಹಂಚಿಕೊಂಡ ಭಾವಗುಚ್ಛ ಇಲ್ಲಿದೆ.

ಇದನ್ನೂ ಓದಿ... ಕೆಚ್ಚೆದೆಯ ಮಹಾರಾಜ ಈ ‘ಯುವರಾಜ’

* ಬಾಲ್ಯದಲ್ಲಿ ಯುವಿ ಕ್ರಿಕೆಟ್ ಆಡಲು ಆರಂಭಿಸಿದಾಗ ಆತ ಸ್ಟಾರ್ ಆಗಬೇಕು ಎಂದು ನೀವು ಕನಸು ಕಂಡಿದ್ದಿರಾ?
– ಖಂಡಿತವಾಗಿಯೂ ಇಲ್ಲ. ಅತನಿಗೆ ನಾನು ಯಾವತ್ತೂ ಆಡು ಅಥವಾ ಆಡಬೇಡ ಎಂದು ಹೇಳಿರಲಿಲ್ಲ. ಆದರೆ ಆತನ ತಂದೆ (ಯೋಗರಾಜ್ ಸಿಂಗ್) ಭಾರಿ ಕಟ್ಟುನಿಟ್ಟಿನ ವ್ಯಕ್ತಿ. ಮಗ ದೊಡ್ಡ ಕ್ರಿಕೆಟಿಗನಾಗಬೇಕು ಎಂಬ ಆಸೆ ಅವರದ್ದಾಗಿತ್ತು. ಅವರ ಒತ್ತಡವೇ ಹೆಚ್ಚಿತ್ತು. ಯುವಿಗೆ ಅಪಾರವಾದ ಪ್ರತಿಭೆ ಇತ್ತು. ಶ್ರಮಪಡುತ್ತಿದ್ದ. ಯಶಸ್ವಿಯಾದ. ಅಪ್ಪನ ಆಸೆಯನ್ನು ಈಡೇರಿಸಿದ.  

* ಯುವಿಯ ಬಾಲ್ಯ ಹೇಗಿತ್ತು?
– ಸಣ್ಣವನಿದ್ದಾಗ ಬಹಳ ಶಾಂತಸ್ವಭಾವದವನಾಗಿದ್ದ. ಹೆಚ್ಚು ಮಾತನಾಡುತ್ತಿರಲಿಲ್ಲ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ತಾನು, ತನ್ನ ಆಟ, ಓದು ಇಷ್ಟೇ ಆತನ ಜಗತ್ತಾಗಿತ್ತು. ಆದರೆ, 17 ವರ್ಷ ದಾಟಿದ ಮೇಲೆ ವಿಪರೀತ ತುಂಟನಾದ. ಮುಂಗೋಪವೂ ಇತ್ತು. ಆದರೆ ಯಾರಿಗೂ ಕೆಡುಕು ಬಯಸುವ ಸ್ವಭಾವ ಮಾತ್ರ ಇರಲಿಲ್ಲ. ತಪ್ಪು ಕಂಡರೆ ಕೆಂಪಗಾಗುತ್ತಿದ್ದ. 

* ಬೆಸ್ಟ್ ಇನಿಂಗ್ಸ್‌ ಎಂದು ಯಾವುದನ್ನು ಪರಿಗಣಿಸುತ್ತೀರಿ?
– 2011ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯ. ಆಸ್ಟ್ರೆಲಿಯಾ ಎದುರು ಅಜೇಯ 57 ಹೊಡೆದಿದ್ದ ಯುವಿಯ ಆಟ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತೆ ಇದೆ. ಅಂದು ಸಚಿನ್ ತೆಂಡೂಲ್ಕರ್ ಔಟಾದಾಗ ಭಾರತ ವಿಶ್ವಕಪ್ ಟೂರ್ನಿಯಿಂದ ಹೊರಬೀಳುತ್ತದೆ ಎಂದು ವಿಶ್ಲೇಷಿಸಿದವರೇ ಹೆಚ್ಚು. ಆದರೆ, ದೇವರ ದಯೆಯಿಂದ ಯುವಿ ಆಡಿದ. ಭಾರತ ಗೆದ್ದಿತು. ಇಡೀ ಟೂರ್ನಿಯಲ್ಲಿ ಯುವಿಯ ಆಟವೇ ಹೈಲೈಟ್.

* ಕ್ಯಾನ್ಸರ್‌ ವಿರುದ್ಧದ ಹೋರಾಟದ ಸಂದರ್ಭದ ಬಗ್ಗೆ
–ವಿಶ್ವಕಪ್‌ ಗೆದ್ದ ಖುಷಿಯ ಹಿಂದೆಯೇ  ಆ ಕರಾಳ ಸಂದರ್ಭ ಬಂದಿತ್ತು. ಆತನ ನೋವು ನೋಡಲು ಸಾಧ್ಯವಾಗುತ್ತಿರಲಿಲ್ಲ. ಮಗನೊಂದಿಗೆ ಹೋಟೆಲ್‌ನಲ್ಲಿ ನಾನೊಬ್ಬಳೇ ಇರುತ್ತಿದ್ದೆ. ಆತನಿಗೆ ಚಿಕಿತ್ಸೆ ನಡೆಯುವಾಗ ತಿನ್ನಲು ಏನೆಲ್ಲಾ ಕೇಳುತ್ತಿದ್ದ. ಆದರೆ ಅಡುಗೆ ಮಾಡುವ ವ್ಯವಸ್ಥೆ ಇರಲಿಲ್ಲ. ಅಮೆರಿಕದಲ್ಲಿ ಇದ್ದಾಗಲೂ ಇದೇ ಸ್ಥಿತಿ. ಕಡೆಗೆ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಮಾಡಿದ ಮೇಲೆ ಅಡುಗೆ ಮಾಡಿಕೊಡಲಾರಂಭಿಸಿದೆ. ಚಿಕಿತ್ಸೆಯ ಪ್ರತಿಯೊಂದು ಹಂತವೂ ಕ್ಲಿಷ್ಟಕರವಾಗಿತ್ತು.  ಕ್ರಿಕೆಟ್‌ನ ಬಹಳಷ್ಟು ಟೂರ್ನಿಗಳಲ್ಲಿ ಗೆದ್ದಂತೆ ಆ ಹೋರಾಟದಲ್ಲಿಯೂ ಜಯಿಸಿದ.

* ನಿವೃತ್ತಿಯ ನಿರ್ಧಾರ ಸರಿಯೇ? ಭವಿಷ್ಯದ ಯೋಜನೆಗಳು ಏನು?
– ಎಲ್ಲದಕ್ಕೂ ಒಂದು ಮುಕ್ತಾಯ ಮತ್ತು ಹೊಸ ಆರಂಭ ಇರುತ್ತದೆ. ಇಷ್ಟು ವರ್ಷ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಈಗ ಆಟದಿಂದ ಮತ್ತು ಸಮಾಜದಿಂದ ಪಡೆದದ್ದನ್ನು ಮರಳಿ ಕೊಡುವ ಸಮಯ ಬಂದಿದೆ. ಕ್ಯಾನ್ಸರ್‌ ಫೌಂಡೇಷನ್ ಮತ್ತು ಕ್ರಿಕೆಟ್ ಅಕಾಡೆಮಿ ಮೂಲಕ ಆ ಕೆಲಸ ಮಾಡಲು ಯುವಿ ಸಿದ್ಧನಾಗಿದ್ದಾನೆ. ಸಾಧ್ಯವಾದಷ್ಟೂ ಜನರಿಗೆ ಸಹಾಯ ನೀಡುವುದು ಅವನ ಉದ್ದೇಶ.


ಮುಂಬೈನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಭಾವುಕರಾದ ಯುವರಾಜ್‌ ಸಿಂಗ್‌

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 27

  Happy
 • 2

  Amused
 • 5

  Sad
 • 1

  Frustrated
 • 1

  Angry

Comments:

0 comments

Write the first review for this !