ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಜಯ | 5 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಅತಿ ಕಿರಿಯ ಎನಿಸಿದ ನಸೀಮ್

ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 1–0 ಜಯ
Last Updated 23 ಡಿಸೆಂಬರ್ 2019, 16:17 IST
ಅಕ್ಷರ ಗಾತ್ರ

ಕರಾಚಿ: ಹದಿಹರೆಯದ ಬೌಲರ್ ನಸೀಮ್‌ ಶಾ (31ಕ್ಕೆ5), ಐದು ವಿಕೆಟ್‌ ಪಡೆದ ವಿಶ್ವದ ಎರಡನೇ ಅತಿ ಕಿರಿಯ ಬೌಲರ್‌ ಎನಿಸಿದರು. ಅವರ ಆಮೋಘ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ಸೋಮವಾರ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 263 ರನ್‌ ಗಳಿಂದ ಸೋಲಿಸಿತು.

ಹತ್ತು ವರ್ಷಗಳ ನಂತರ ತವರು ನೆಲದಲ್ಲಿ ನಡೆದ ಈ ಮೊದಲ ಟೆಸ್ಟ್‌ ಸರಣಿಯನ್ನು ಪಾಕ್‌ 1–0 ಯಿಂದ ಗೆದ್ದುಕೊಂಡಿತು. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ಮಳೆ–ಪ್ರತಿಕೂಲ ಹವಾಮಾನದಿಂದ ‘ಡ್ರಾ’ ಆಗಿತ್ತು.

ಅಂತಿಮ ದಿನದಾಟ ಕೇವಲ 15 ನಿಮಿಷಗಳಲ್ಲಿ ಮುಗಿದುಹೋಯಿತು. ಭಾನುವಾರ 7 ವಿಕೆಟ್‌ಗೆ 212 ರನ್‌ ಗಳಿಸಿದ್ದ ಶ್ರೀಲಂಕಾ ಅದೇ ಮೊತ್ತಕ್ಕೆ ಆಲೌಟಾಯಿತು. 16 ವರ್ಷದ ನಸೀಮ್‌ ಶಾ 12.2 ಓವರುಗಳಲ್ಲಿ 31 ರನ್ನಿಗೆ 5 ವಿಕೆಟ್‌ ಉರುಳಿಸಿ ಗಮನ ಸೆಳೆದರು.

ಸರಣಿಯಲ್ಲಿ ಎರಡೂ ಟೆಸ್ಟ್‌ಗಳಲ್ಲಿ ಶತಕ ಹೊಡೆದು ದಾಖಲೆ ಮಾಡಿದ ಅಬಿದ್‌ ಅಲಿ ‘ಪಂದ್ಯದ ಪುರುಷೋತ್ತಮ’ ಹಾಗೂ ‘ಸರಣಿಯ ಸರ್ವೋತ್ತಮ’ ಎನಿಸಿದರು.

ನಸೀಮ್‌ ಶಾ ಐದು ವಿಕೆಟ್‌ ಪಡೆದ ಅತಿ ಕಿರಿಯ ವೇಗದ ಬೌಲರ್‌ ಎನಿಸಿದರು. ಆದರೆ ಐದು ವಿಕೆಟ್‌ ಪಡೆದ ವಿಶ್ವದ ಅತೀ ಕಿರಿಯ ಬೌಲರ್ ದಾಖಲೆ ನಾಲ್ಕು ದಿನಗಳ ಅಂತರದಲ್ಲಿ ಅವರ ಕೈತಪ್ಪಿತು. ಪಾಕಿಸ್ತಾನದವರೇ ಆದ ಎಡಗೈ ಸ್ಪಿನ್ನರ್‌ ನಸೀಮ್‌ ಉಲ್‌ ಘನಿ, 1958ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಜಾರ್ಜ್‌ಟೌನ್‌ನಲ್ಲಿ 116 ರನ್ನಿಗೆ 5 ವಿಕೆಟ್‌ ಪಡೆದಿದ್ದರು. ಆಗ ಅವರ ವಯಸ್ಸು 16 ವರ್ಷ 303 ದಿನ. ನಸೀಮ್‌ ವಯಸ್ಸು 16 ವರ್ಷ 307 ದಿನ.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಅಲ್ಲಿ ಯಾವುದೇ ಟೆಸ್ಟ್‌ ಸರಣಿ ನಡೆದಿರಲಿಲ್ಲ. ಈ ಅವಧಿಯಲ್ಲಿ ಪಾಕಿಸ್ತಾನ ತವರಿನಲ್ಲಿ ಆಡಬೇಕಾದ 33 ಟೆಸ್ಟ್‌ ಪಂದ್ಯಗಳನ್ನು ದೇಶದ ಹೊರಗಡೆ ಆಡಿತ್ತು. ಹೆಚ್ಚಿನ ಪಂದ್ಯಗಳು ದುಬೈನಲ್ಲಿ ನಡೆದಿದ್ದವು.

ದಿನದ ಮೊದಲ ಎಸೆತದಲ್ಲೇ ನಸೀಮ್‌, ಲಸಿತ್‌ ಎಂಬುಲ್‌ಡೆನಿಯಾ ಅವರನ್ನು ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಡಿಸುವ ಮೂಲಕ ಎದುರಾಳಿಗಳ ತ್ವರಿತ ಪತನಕ್ಕೆ ನಾಂದಿಹಾಡಿದರು.

‘ನಮಗೆ ಇಂಥ ಒಂದು ಪ್ರದರ್ಶನ ಅಗತ್ಯವಾಗಿತ್ತು’ ಎಂದು ನಾಯಕನಾಗಿ ಮೊದಲ ಟೆಸ್ಟ್‌ ಜಯ ಆಚರಿಸಿದ ಅಜಲ್‌ ಅಲಿ ಪ್ರತಿಕ್ರಿಯಿಸಿದರು.

ಸ್ಕೋರುಗಳು
ಪಾಕಿಸ್ತಾನ:
191ಮತ್ತು 3 ವಿಕೆಟ್‌ಗೆ 555 ಡಿಕ್ಲೇರ್‌
ಶ್ರೀಲಂಕಾ: 271 ಮತ್ತು 62.5 ಓವರುಗಳಲ್ಲಿ 212 (ಒಶಾಡ ಫರ್ನಾಂಡೊ 102, ನಿರೋಶನ್‌ ಡಿಕ್ವೆಲ್ಲಾ 65; ನಸೀಮ್‌ ಶಾ 31ಕ್ಕೆ4, ಯಾಸಿರ್‌ ಶಾ 84ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT