ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನ್ನಿಸ್ ಲೋಕದ ನವ ತಾರೆ ಬಿಯಾಂಕಾ

Last Updated 15 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಈ ಸಲದ ಅಮೆರಿಕ ಓಪನ್‌ ಟೆನಿಸ್‌ನಲ್ಲಿ ಉದಯಿಸಿದ ಹೊಸ ತಾರೆ ಬಿಯಾಂಕಾ ಅಂಡ್ರೆಸ್ಕ್ಯು. ಇನ್ನೂ 19ರ ಹರೆಯದ ಈ ಯುವತಿ, ಫೈನಲ್‌ ಪಂದ್ಯದಲ್ಲಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ಳನ್ನು ಬಗ್ಗುಬಡಿದ ಪರಿ ನೋಡಿ ಟೆನಿಸ್‌ ಪ್ರೇಕ್ಷಕರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಂಡರು. 6–3, 7–5 ಸೆಟ್‌ಗಳ ಭರ್ಜರಿ ವಿಜಯವದು.

ಮೊದಲ ಸೆಟ್‌ನ ಸೋಲಿನ ಬಳಿಕ ಸೆರೆನಾ ಕಣಕ್ಕಿಳಿದಾಗ ಸೇರಿದ್ದ 23 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ‘ಸೆರೆನಾ ಸೆರೆನಾ’ ಎಂದು ಉತ್ಸಾಹದಿಂದ ಕೂಗುತ್ತಿದ್ದರು. ಎದುರಾಳಿಯ ಪರವಾದ ಈ ಘೋಷಣೆಯಿಂದ ‘ಡಿಸ್ಟರ್ಬ್ಡ್‌’ ಆಗದಂತೆ ಬಿಯಾಂಕಾ, ಒಂದು ಹಂತದಲ್ಲಿ ಕಿವಿಗೆ ಹತ್ತಿ ತುರುಕಿಸಿಕೊಂಡಿದ್ದಳು. ಎರಡನೇ ಸೆಟ್‌ನ ಹೋರಾಟ ನಿಜಕ್ಕೂ ರೋಮಾಂಚಕವಾಗಿತ್ತು. ಕೊನೆಗೂ ಅಪಾರ ಅನುಭವದ ಮುಂದೆ ಯೌವನದ ಕೆಚ್ಚು ಗೆದ್ದಿತು. ಗೆದ್ದ ಬಳಿಕ ಅಂಕಣದಲ್ಲೇ ತನ್ನನ್ನು ಸುತ್ತುವರಿದ ಕುಟುಂಬದ ಸದಸ್ಯರ ಮಧ್ಯೆ ಆಕೆ ತನ್ನ ವಿಜಯವನ್ನು ತಾನೇ ನಂಬಲಾಗದಂತೆ ನಿಂತುಬಿಟ್ಟಿದ್ದಳು. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ, ‘ನನಗೆ ಗೊತ್ತು– ನೀವೆಲ್ಲ ಸೆರೆನಾ ಗೆಲ್ಲಬೇಕೆಂದು ಬಯಸಿದ್ದಿರಿ. so I'm so sorry’ ಎಂದು ಬಿಯಾಂಕಾ ಹೇಳಿದಾಗ ಆಕೆಯ ವಿನಯವಂತಿಕೆಗೆ ಇಡೀ ಕ್ರೀಡಾಂಗಣ ತಲೆದೂಗಿತು.

2019 ಬಿಯಾಂಕಾಗೆ ನಿಜಕ್ಕೂ ಅದೃಷ್ಟದ ವರ್ಷ. ಜನವರಿ ಆರಂಭವಾಗುವುದಕ್ಕೆ ಮುನ್ನ ಆಕೆ ವಿಶ್ವ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ 107ನೇ ಸ್ಥಾನದಲ್ಲಿದ್ದಳು. ಕಳೆದ ವಾರ ಅಮೆರಿಕ ಓಪನ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ವಿಶ್ವ ಟೆನಿಸ್‌ನಲ್ಲಿ ಈಕೆಯ ರ‍್ಯಾಂಕಿಂಗ್‌ 5ಕ್ಕೆ ತಲುಪಿದೆ. ಕೆನಡಾ ದೇಶದ ಕ್ರೀಡಾಭಿಮಾನಿಗಳಿಗೂ ಇದೊಂದು ಅಪರೂಪದ ಸಂಭ್ರಮ. ಏಕೆಂದರೆ ಅಲ್ಲಿ ಈವರೆಗೆ ಪುರುಷರಾಗಲೀ, ಮಹಿಳೆಯರಾಗಲೀ ಯಾರೂ ಯಾವೊಂದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೂ ಗೆದ್ದಿಲ್ಲ. ಬಿಯಾಂಕಾಳೇ ಮೊದಲಿಗಳು. ಈ ಹಿಂದೆ (2014) ಕೆನಡಾದ ಯೂಜಿನಿ ಬುಚರ್ಡ್‌ ವಿಶ್ವ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದಿದ್ದಳು. ಪುರುಷ ಆಟಗಾರರಲ್ಲಿ ಕೆನಡಾದ ಮಿಲೋಸ್‌ ರೌನಿಚ್‌ ವಿಶ್ವ ರಾಂಕಿಂಗ್‌ನ 3ನೇ ಸ್ಥಾನ ಪಡೆದಿದ್ದರು. ಆದರೆ ಇಬ್ಬರೂ ವಿಂಬಲ್ಡನ್‌ನಲ್ಲಿ ಫೈನಲ್‌ವರೆಗೆ ತಲುಪಿದ್ದರೇ ಹೊರತು ಪ್ರಶಸ್ತಿ ಗೆದ್ದಿರಲಿಲ್ಲ. ಈಗ ಬಿಯಾಂಕಾಳ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಕೆನಡಾದ ಲಕ್ಷಾಂತರ ಪ್ರಜೆಗಳು ತಮ್ಮ ಸ್ವಂತದ್ದೆಂದೇ ಸಂಭ್ರಮಿಸಿದ್ದಾರೆ.

ಹವಾಮಾನ ವೈಪರೀತ್ಯದ ಕೆನಡಾ, ವಲಸಿಗರ ದೇಶ. ಬಿಯಾಂಕಾಳ ಹೆತ್ತವರು ಮೂಲತಃ ರೊಮೇನಿಯಾದಿಂದ 1994ರಲ್ಲಿ ಕೆನಡಾಕ್ಕೆ ವಲಸೆ ಬಂದವರು. ತಂದೆ ಎಂಜಿನಿಯರ್‌, ತಾಯಿ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗಿ. ಕೆಲವು ವರ್ಷಗಳ ಬಳಿಕ ಪೋಷಕರು ರೊಮೇನಿಯಾಗೆ ಮರಳಿದರು. 7ರ ಎಳವೆಯಲ್ಲೇ ಮಗಳನ್ನು ಅಲ್ಲಿ ಟೆನಿಸ್‌ ತರಬೇತಿಗೆ ಸೇರಿಸಿದರು. ನಾಲ್ಕು ವರ್ಷಗಳ ಬಳಿಕ ಮತ್ತೆ ಕೆನಡಾದಲ್ಲೇ ನೆಲೆಸಲು ಮರಳಿದ ಅಪ್ಪ–ಅಮ್ಮ, ಮಗಳ ಟೆನಿಸ್‌ ತರಬೇತಿಗೆ ಅಲ್ಲೂ ವ್ಯವಸ್ಥೆ ಮಾಡಿದರು. 11ರ ವಯಸ್ಸಿನಲ್ಲಿ ಟೊರಾಂಟೋದಲ್ಲಿ ರಾಷ್ಟ್ರೀಯ ಟೆನಿಸ್‌ ತರಬೇತಿ ಕಾರ್ಯಕ್ರಮಕ್ಕೆ ಸೇರಿದ ಬಿಯಾಂಕಾ, ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡಳು.

2014ರಲ್ಲಿ ಹವಾನಾದ ಗ್ರೇಡ್‌–5 ಟೂರ್ನಿಯಲ್ಲಿ ಸಿಂಗಲ್ಸ್‌ ಪ್ರಶಸ್ತಿ ಗೆದ್ದದ್ದು ಬಿಯಾಂಕಾಳ ಮೊದಲ ಯಶಸ್ಸು. 2015ರಲ್ಲಿ ಗ್ರೇಡ್‌–2 ಮಟ್ಟದಲ್ಲಿ ಸಿಂಗಲ್ಸ್‌ ಮತ್ತು ಡಬಲ್ಸ್‌ ಎರಡರಲ್ಲೂ ಪ್ರಶಸ್ತಿ. ಅದೇ ವರ್ಷ ಫ್ರೆಂಚ್‌ ಓಪನ್‌ನಲ್ಲಿ ಜೂನಿಯರ್‌ ಗ್ರ್ಯಾನ್‌ಸ್ಲಾಮ್‌ಗೆ ಪ್ರವೇಶ ಪಡೆದರೂ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದಳು. 2015ರಲ್ಲಿ ವಿಶ್ವದ ಅತ್ಯುತ್ತಮ ಆಟಗಾರ್ತಿಯರಲ್ಲಿ ಒಬ್ಬರಾದ ನಥಾಲಿ ಥಾಜಿಟ್‌, ಕೋಚ್‌ ಆಗಿ ಸಿಕ್ಕಿದ ಬಳಿಕ ಬಿಯಾಂಕಾ ಆಟಕ್ಕೆ ಹೊಸ ಮೊನಚು ಬಂತು. ಮುಂದಿನ ವರ್ಷ ಆಸ್ಟ್ರೇಲಿಯ ಓಪನ್‌ ಜೂನಿಯರ್ ವಿಭಾಗದಲ್ಲಿ ಮೊದಲ ಸೀಡ್‌ನೊಂದಿಗೆ ಪ್ರವೇಶ ಪಡೆದರೂ ಗಾಯದಿಂದಾಗಿ ಮಧ್ಯದಲ್ಲೇ ಸೋಲು ಅನುಭವಿಸಿದಳು. ಆರು ತಿಂಗಳ ಬಳಿಕ ಸುಧಾರಿಸಿಕೊಂಡು ವಿಂಬಲ್ಡನ್‌ನಲ್ಲಿ ಆರನೇ ಶ್ರೇಯಾಂಕದೊಂದಿಗೆ ಪ್ರವೇಶ ಪಡೆದರೂ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿದಳು. ಮುಂದಿನ ಮೂರು ವರ್ಷಗಳಲ್ಲಿ ಸ್ಥಳೀಯ ಟೂರ್ನಿಗಳಲ್ಲಿ ಗೆಲುವು, ಗ್ರ್ಯಾನ್‌ಪ್ರಿ ಟೂರ್ನಿಗಳಲ್ಲಿ ಸೋಲು, ನಡುವೆ ಗಾಯದ ಸಮಸ್ಯೆ– ಹೀಗೆ ಆಟ ಮುಂದುವರಿಯಿತು.

2019 ಆಕೆಯ ಅದೃಷ್ಟದ ವರ್ಷ. ಮಾರ್ಚ್‌ನಲ್ಲಿ ಇಂಡಿಯನ್‌ ವೆಲ್ಸ್‌ ಪ್ರಶಸ್ತಿ ಗೆದ್ದರೆ, ಕಳೆದ ತಿಂಗಳ ರೋಜರ್ಸ್‌ ಕಪ್‌ನಲ್ಲಿ ಪ್ರಶಸ್ತಿ ಗೆದ್ದಳು. ಈಗ ವೃತ್ತಿಜೀವನದ ಮೊದಲ ಗ್ರ್ಯಾನ್‌ಸ್ಲಾಮ್‌ ಅಮೆರಿಕನ್‌ ಓಪನ್‌.

ಕಳೆದ ಹತ್ತು ವರ್ಷಗಳಿಂದ ಎಳೆಯರ ಟೆನಿಸ್‌ ತರಬೇತಿಗೆ ಅಪಾರ ದುಡ್ಡು ಸುರಿದು, ಹೊಸ ಯೋಜನೆಗಳನ್ನು ರೂಪಿಸಿದ ಟೆನಿಸ್ ಕೆನಡಾ ಸಂಸ್ಥೆಗೆ ಇದೀಗ ಶ್ರಮಕ್ಕೆ ತಕ್ಕ ಫಲ ಪಡೆದ ಸಂಭ್ರಮ. ಬಿಯಾಂಕಾಳ ಗೆಲುವು ಕೆನಡಾದ ಎಳೆಯರಲ್ಲಿ ಟೆನಿಸ್‌ ಮೋಹವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಜಯ ಅಲ್ಲಿ ಇನ್ನಷ್ಟು ಚಾಂಪಿಯನ್‌ಗಳ ಉಗಮಕ್ಕೆ ಕಾರಣವಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT