ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್| ನ್ಯೂಜಿಲೆಂಡ್‌ಗೆ ಕೊನೆಯ ಪಂದ್ಯದಲ್ಲಿ ಗೆಲುವು, ಪಾಕ್‌ಗೆ ಸೋಲು

ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಪಾಕಿಸ್ತಾನಕ್ಕೆ ಸೋಲು; ಬೇಟ್ಸ್ 12ನೇ ಶತಕ, ಹನಾಗೆ 5 ವಿಕೆಟ್
Last Updated 26 ಮಾರ್ಚ್ 2022, 12:40 IST
ಅಕ್ಷರ ಗಾತ್ರ

ಕ್ರೈಸ್ಟ್ ಚರ್ಚ್‌, ನ್ಯೂಜಿಲೆಂಡ್‌: ಭರ್ಜರಿ ಶತಕದ ಮೂಲಕ ಆರಂಭಿಕ ಬ್ಯಾಟರ್ ಸೂಝಿ ಬೇಟ್ಸ್‌ ಮಿಂಚಿದರು. ಮಧ್ಯಮ ವೇಗಿ ಹನಾ ರೋವ್‌ ಐದು ವಿಕೆಟ್‌ಗಳ ಗೊಂಚಲು ಗಳಿಸಿ ಸಂಭ್ರಮಿಸಿದರು. ಇದರ ಪರಿಣಾಮ, ನ್ಯೂಜಿಲೆಂಡ್ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 71 ರನ್‌ಗಳಿಂದ ಜಯ ಗಳಿಸಿತು.

ಶುಕ್ರವಾರ ಹೆಗ್ಲಿ ಓವಲ್‌ನಲ್ಲಿ ನಡೆದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಬೇಟ್ಸ್‌ (126; 135 ಎಸೆತ, 14 ಬೌಂಡರಿ) ಶತಕದ ಬಲದಿಂದ ನ್ಯೂಜಿಲೆಂಡ್ 8 ವಿಕೆಟ್‌ಗಳಿಗೆ 265 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಪಾಕಿಸ್ತಾನ 9 ವಿಕೆಟ್‌ಗಳಿಗೆ 194 ರನ್ ಗಳಿಸಿತು.

ನಿದಾ ದರ್ (50; 53 ಎ, 5 ಬೌಂಡರಿ, 1 ಸಿಕ್ಸರ್) ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪಾಕಿಸ್ತಾನ ತಂಡದಲ್ಲಿ ಭರವಸೆ ಮೂಡಿಸಿದ್ದರು. ಆದರೆ ದಿಢೀರ್ ಪತನ ಕಂಡ ತಂಡ ಸೋಲಿಗೆ ಶರಣಾಯಿತು.

ಎರಡೂ ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯವಾಗಿತ್ತು. ಪಾಕಿಸ್ತಾನ 7 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಆತಿಥೇಯ ನ್ಯೂಜಿಲೆಂಡ್‌ಗೆ ಟೂರ್ನಿಯಲ್ಲಿ ಇದು ಮೂರನೇ ಜಯ. ಕೊನೆಯ ಪಂದ್ಯದಲ್ಲಿ ಗೆದ್ದರೂ ತಂಡ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದೆ. ಆರು ಪಾಯಿಂಟ್ ಗಳಿಸಿರುವ ನ್ಯೂಜಿಲೆಂಡ್ ತಂಡ ಭಾರತ ಮತ್ತು ಇಂಗ್ಲೆಂಡ್‌ ಜೊತೆ ಸಮಾನ ಪಾಯಿಂಟ್‌ಗಳನ್ನು ಹೊಂದಿದೆ. ಆದರೆ ಇಂಗ್ಲೆಂಡ್ ಹಾಗೂ ಭಾರತದ ಬಳಿ ಉತ್ತಮ ರನ್‌ರೇಟ್ ಇದೆ.

5,000 ರನ್ ಒಡತಿ ಸೂಝಿ ಬೇಟ್ಸ್

ಕೋವಿಡ್ ನಿರ್ಬಂಧಗಳು ಇಲ್ಲದೇ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ಗೆ ಬೇಟ್ಸ್ ಅತ್ಯುತ್ತಮ ಕಾಣಿಕೆ ನೀಡಿದರು. ಶತಕ ಪೂರೈಸುವುದರೊಂದಿಗೆ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್ ಗಳಿಸಿದ ನಾಲ್ಕನೇ ಆಟಗಾರ್ತಿ ಎನಿಸಿಕೊಂಡರು. ಸತತ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ ಶತಕ ಗಳಿಸಿದ ಮೊದಲ ಬ್ಯಾಟರ್ ಎಂಬ ಸಾಧನೆಯೂ ಅವರದಾಯಿತು.

17 ರನ್ ಗಳಿಸಿದ್ದಾಗ ಅವರನ್ನು ಎಲ್‌ಬಿಡಬ್ಲ್ಯು ಔಟ್ ಎಂದು ಘೋಷಿಸಲಾಗಿತ್ತು. ಆದರೆ ಅಂಪೈರ್ ತೀರ್ಪು ಮರುಪರಿಶೀಲನೆಯಲ್ಲಿ ಅವರು ಬಚಾವಾಗಿದ್ದರು. ನಂತರ ಅಮೋಘ ಬ್ಯಾಟಿಂಗ್ ಮೂಲಕ 43ನೇ ಓವರ್‌ ವರೆಗೆ ಕ್ರೀಸ್‌ನಲ್ಲಿ ತಳವೂರಿ ನಿಂತರು. ರನ್ ರೇಟ್ ಹೆಚ್ಚಿಸಲು ನ್ಯೂಜಿಲೆಂಡ್ ಪ್ರಯತ್ನಿಸುತ್ತಿದ್ದರೆ ವಿಕೆಟ್‌ಗಳನ್ನು ಉರುಳಿಸಿ ಪಾಕಿಸ್ತಾನ ತಿರುಗೇಟು ನೀಡಿತು. ಕೊನೆಯ ಎರಡು ಓವರ್‌ಗಳಲ್ಲಿ ಕ್ಯಾಟಿ ಮಾರ್ಟಿನ್ ಮತ್ತು ಫ್ರಾಂಕಿ ಮೆಕೆ 32 ರನ್ ಕಲೆ ಹಾಕಿ ಮೊತ್ತವನ್ನು 250 ದಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT