ಬುಧವಾರ, ನವೆಂಬರ್ 20, 2019
22 °C

ಕೇನ್ ವಿಲಿಯಮ್ಸನ್ ಬೌಲಿಂಗ್ ಶೈಲಿಯಲ್ಲಿ ದೋಷವಿಲ್ಲ, ನಿಷೇದ ವಾಪಸ್: ಐಸಿಸಿ

Published:
Updated:

ದುಬೈ: ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಬೌಲಿಂಗ್‌ ಶೈಲಿಯು ನಿಯಮಬದ್ಧವಾಗಿದೆ. ಯಾವುದೇ ದೋಷವಿಲ್ಲದ ಕಾರಣ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ ಮುಂದುವರಿಸಬಹುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಶುಕ್ರವಾರ ಹೇಳಿದೆ.

ಶ್ರೀಲಂಕಾ ಎದುರು ಆಗಸ್ಟ್‌ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದ(ಆಗಸ್ಟ್‌ 14–18) ವೇಳೆ ಕೇನ್‌ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ವ್ಯಕ್ತವಾಗಿದ್ದವು. ಹೀಗಾಗಿ ಅವರು ಅಕ್ಟೋಬರ್‌ 11ರಂದು ಲೌಬರೋದಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಅವರು ಪ್ರತಿ ಬಾರಿ ಚೆಂಡನ್ನು ಎಸೆಯಲು ತಮ್ಮ ಮೊಣಕೈ ಅನ್ನು 15ಡಿಗ್ರಿ ಯಷ್ಟು ಸಮತಲದಲ್ಲಿ ತಿರುಗಿಸುತ್ತಾರೆ ಎಂಬುದು ಸಾಬೀತಾಗಿದ್ದು ಹೀಗಾಗಿ ಐಸಿಸಿಯ ಅಕ್ರಮ ಬೌಲಿಂಗ್‌ ನಿಯಮಾವಳಿ ಪ್ರಕಾರ ಅವರಿಗೆ ಬೌಲಿಂಗ್‌ ಮಾಡಲು ಅನುಮತಿ ನೀಡಲಾಗಿದೆ.

ವಿಲಿಯಮ್ಸನ್‌ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ ಮಾಡದಂತೆ ಈ ಹಿಂದೆ 2014ರ ಜುಲೈನಲ್ಲಿ ನಿಷೇದ ಹೇರಲಾಗಿತ್ತು. ಆಗಲೂ ಬೌಲಿಂಗ್‌ ಪರೀಕ್ಷೆಯಲ್ಲಿ ಭಾಗವಹಿಸಿ ಸಾಮರ್ಥ್ಯ ಸಾಬೀತು ಮಾಡಿದ್ದರು. ಬಳಿಕ ಅದೇ ವರ್ಷ ಡಿಸೆಂಬರ್‌ನಲ್ಲಿ ನಿಷೇದ ತೆರವುಗೊಳಿಸಲಾಗಿತ್ತು.

ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ
ನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ.

ಕ್ರೈಸ್ಟ್‌ಚರ್ಚ್‌ನ(ನ್ಯೂಜಿಲೆಂಡ್‌) ಹ್ಯಾಗ್ಲೆ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆತಿಥೇಯ ನ್ಯೂಜಿಲೆಂಡ್‌, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 153ರನ್‌ ಗಳಿಸಿತು. 

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ಕೇವಲ ಮೂರು ವಿಕೆಟ್‌ ಕಳೆದುಕೊಂಡು 18.3 ಓವರ್‌ಗಳಲ್ಲೇ ಗುರಿ ತಲುಪಿತು.

ಪ್ರವಾಸಿ ಪಡೆಯ ಮೂರೂ ವಿಕೆಟ್‌ಗಳು ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ಗೆ ದಕ್ಕಿದವು. ಮುಂದಿನ ಪಂದ್ಯ ನವೆಂಬರ್‌ 03ರಂದು ‌ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಪ್ರತಿಕ್ರಿಯಿಸಿ (+)