ಮಂಗಳವಾರ, ಜನವರಿ 26, 2021
16 °C

ಶಾಂತಚಿತ್ತ ಬ್ಯಾಟಿಂಗ್‌ ಸೊಬಗಿನ ವಿಲಿಯಮ್ಸನ್‌

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಅದು 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌. ರೋಚಕ ಹಣಾಹಣಿಯಲ್ಲಿ ಇಂಗ್ಲೆಂಡ್‌ ಪ್ರಶಸ್ತಿ ಗೆದ್ದಿತ್ತು. ಟೈ ಆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ ಸೋಲುಣಿಸಿತ್ತು. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್ ಕಣ್ಣಲ್ಲಿ ನೀರ ಹನಿ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡಿ ಸರಣಿಶ್ರೇಷ್ಠರಾಗಿದ್ದ ಅವರಿಗೆ ವಿಶ್ವಕಪ್‌ ಎತ್ತಿ ಹಿಡಿಯುವ ಕನಸು ನನಸಾಗಲಿಲ್ಲ ಎಂಬ ಕೊರಗು ಇನ್ನಿಲ್ಲದಂತೆ ಕಾಡಿತ್ತು.

ಶಾಂತ ಸ್ವಭಾವದ, ಹಮ್ಮುಬಿಮ್ಮಿಲ್ಲದ ಕೇನ್‌ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಐದು ವರ್ಷಗಳ ನಂತರ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಅಲಂಕರಿಸಿದ್ದಾರೆ. ಈ ಹಾದಿಯಲ್ಲಿ ಅವರು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ಸ್ಟೀವನ್‌ ಸ್ಮಿತ್‌ ಅವರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್‌ ಮಾದರಿಯಲ್ಲಿ 7,000 ರನ್‌ಗಳ ಮೈಲಿಗಲ್ಲು ದಾಟಿದ್ದಾರೆ. ರಾಸ್ ಟೇಲರ್ (7379) ಹಾಗೂ ಸ್ಟೀಫನ್ ಫ್ಲೆಮಿಂಗ್ (7172) ನಂತರ ಈ ಸಾಧನೆ ಮಾಡಿದ ಕಿವೀಸ್‌ನ ಮೂರನೇ ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌.

2015ರಲ್ಲಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಕೇನ್‌ ಅವರ ಕಣ್ಣಲ್ಲಿ ಕೊಹ್ಲಿ ಮತ್ತು ಸ್ಮಿತ್ ಅವರೇ ಶ್ರೇಷ್ಠ ಆಟಗಾರರಂತೆ. ಇವರ ಎದುರು ಆಡುವುದೇ ಸೌಭಾಗ್ಯ ಎಂಬುದು ವಿಲಿಯಮ್ಸನ್ ಅವರ ಮೆಚ್ಚುಗೆಯ ನುಡಿ. ಕೊಹ್ಲಿ ಹಾಗೂ ಸ್ಮಿತ್‌ ರೀತಿಯಲ್ಲಿ ಕೇನ್‌ ಸೆಲಿಬ್ರಿಟಿ ವ್ಯಕ್ತಿತ್ವ ಹೊಂದಿದವರಲ್ಲ. ಆದರೂ ನಡವಳಿಕೆ, ಶಾಂತ ವ್ಯಕ್ತಿತ್ವದ ಕಾರಣದಿಂದ ಅವರನ್ನು ಇಷ್ಟಪಡುವ ಬಹಳಷ್ಟು ಅಭಿಮಾನಿಗಳಿದ್ದಾರೆ.

ಪಾಕಿಸ್ತಾನ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ ದ್ವಿಶತಕದ (238) ಮೂಲಕ ಕೇನ್‌ ಬೆಳಗಿದ್ದಾರೆ. ತಾವಾಡಿದ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಎರಡನೇ ಬಾರಿ 200ರ ಗಡಿ ದಾಟಿದ್ದಾರೆ. ಅವರ ಬ್ಯಾಟಿಂಗ್‌ ಸ್ಥಿರತೆಗೆ ವಿಶ್ವದೆಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.

‘ಕೇನ್‌ ವಿಲಿಯಮ್ಸನ್ ಬ್ಯಾಟಿಂಗ್ ಸ್ಥಿರತೆ ನೋಡಿದರೆ ಅಚ್ಚರಿ ಎನಿಸುವುದಿಲ್ಲ. ಯಾವುದೇ ಪಂದ್ಯಕ್ಕೆ ಸಜ್ಜುಗೊಳ್ಳುವಾಗ ತೋರುವ ಕಠಿಣ ಪರಿಶ್ರಮ ಅವರ ಯಶಸ್ಸಿನ ಗುಟ್ಟು. ಯುವ ಆಟಗಾರರಿಗೆ ನಿಜವಾದ ಆದರ್ಶ ಅವರು’ ಎಂದು ಭಾರತದ ಮಾಜಿ ಆಟಗಾರ ವಿ.ವಿ.ಎಸ್‌. ಲಕ್ಷ್ಮಣ್ ಹೇಳುತ್ತಾರೆ.

ಇದುವರೆಗೆ 83 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೇನ್‌ 7115 ರನ್‌ ಕಲೆ ಹಾಕಿದ್ದಾರೆ. 54.31 ಅವರ ಬ್ಯಾಟಿಂಗ್ ಸರಾಸರಿ. 151 ಏಕದಿನ ಪಂದ್ಯಗಳಿಂದ ಗಳಿಸಿದ್ದು 6173 ರನ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು