ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ ಎರಡನೇ ಟೆಸ್ಟ್ | ಕೈಲ್ ವೇಗದ ದಾಳಿಗೆ ಕಂಗೆಟ್ಟ ಭಾರತ

ಸಾಧಾರಣ ಮೊತ್ತಕ್ಕೆ ಕುಸಿದ ಭಾರತ; ಪೂಜಾರ, ಪೃಥ್ವಿ, ಹನುಮ ಅರ್ಧಶತಕ
Last Updated 29 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಕ್ರೈಸ್ಟ್‌ಚರ್ಚ್: ‘ಬಹುತೇಕ ಎಲ್ಲ ಬ್ಯಾಟ್ಸ್‌ಮನ್‌ಗಳು ಸ್ವಯಂಕೃತ ತಪ್ಪುಗಳಿಂದ ಔಟಾಗಿದ್ದಾರೆ. ಪಿಚ್‌ನಿಂದ ಬೌಲರ್‌ಗಳಿಗೆ ಹೆಚ್ಚು ನೆರವು ಲಭಿಸಿಲ್ಲ’–

ಶನಿವಾರ ಹೆಗ್ಲೆ ಓವಲ್‌ನಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 63 ಓವರ್‌ಗಳಲ್ಲಿ 242 ರನ್‌ ಗಳಿಸಿ ಆಲೌಟ್ ಆಯಿತು. ಈ ಇನಿಂಗ್ಸ್‌ನಲ್ಲಿ ಅರ್ಧಶತಕ ಹೊಡೆದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮವಿಹಾರಿ ಅವರ ಹೇಳಿಕೆ ಇದು.

ಟಾಸ್ ಗೆದ್ದ ಆತಿಥೇಯ ನ್ಯೂಜಿಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೃತ್ತಿಜೀವನದ ಎರಡನೇ ಟೆಸ್ಟ್ ಆಡುತ್ತಿರುವ ‘ಲಂಬೂಜಿ’ ಕೈಲ್ ಜೆಮಿಸನ್ (14–3–45–5) ಅವರ ಬೌಲಿಂಗ್ ಮುಂದೆ ಭಾರತದ ಅನುಭವಿ ಬ್ಯಾಟ್ಸ್‌ಮನ್‌ಗಳು ನಿರುತ್ತರರಾದರು. ಅದನ್ನೇ ಹನುಮ ಪ್ರಾಮಾಣಿಕವಾಗಿ ಒಪ್ಪಿಕೊಂಡರು.

ಭಾರತದ ಸಾಧಾರಣ ಮೊತ್ತಕ್ಕೆ ಉತ್ತರವಾಗಿ ಆತಿಥೇಯ ತಂಡವು ದಿನದಾಟದ ಕೊನೆಗೆ 23 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 63 ರನ್‌ ಗಳಿಸಿದೆ. ಟಾಮ್ ಲಥಾಮ್ (ಬ್ಯಾಟಿಂಗ್ 27) ಮತ್ತು ಟಾಮ್ ಬ್ಲಂಡೆಲ್ (ಬ್ಯಾಟಿಂಗ್ 29) ಕ್ರೀಸ್‌ನಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (54;64ಎ, 8ಬೌಂ, 1ಸಿ) ಉತ್ತಮ ಆರಂಭವನ್ನೇ ನೀಡಿದರು. ಆದರೆ, ಮಯಂಕ್ ಅಗರವಾಲ್ ಕೇವಲ ಏಳು ರನ್ ಗಳಿಸಿ ನಿರ್ಗಮಿಸಿದರು. ಟ್ರೆಂಟ್ ಬೌಲ್ಟ್‌ ಎಸೆತದಲ್ಲಿ ಅವರ ಪಾದಚಲನೆ ನಿಖರವಾಗಿರಲಿಲ್ಲ. ಆದ್ದರಿಂದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಈ ಹಂತದಲ್ಲಿ ಪೃಥ್ವಿ ಜೊತೆಗೂಡಿದ ಚೇತೇಶ್ವರ್ ಪೂಜಾರ (54;140ಎ, 6ಬೌಂ) ತಾಳ್ಮೆಯಿಂದ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಇಪ್ಪತ್ತನೇ ಓವರ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರಗಿದ್ದ ಎಸೆತವನ್ನು ಆಡುವ ಭರದಲ್ಲಿ ಪೃಥ್ವಿ ತಪ್ಪು ಮಾಡಿದರು. ಬ್ಯಾಟ್‌ ಅಂಚು ಸವರಿ ಸಾಗಿದ ಚೆಂಡನ್ನು ಎರಡನೇ ಸ್ಲಿಪ್‌ನಲ್ಲಿದ್ದ ಟಾಮ್ ಲಥಾಮ್ ಕ್ಯಾಚ್ ಮಾಡಿದರು. ಬೌಲರ್ ಕೈಲ್ ಕೇಕೆ ಹಾಕಿದರು.

‘ರನ್‌ ಯಂತ್ರ’ ವಿರಾಟ್ ಕೊಹ್ಲಿ (3 ರನ್) ಟಿಮ್ ಸೌಥಿಯ ಸ್ವಿಂಗ್ ಮತ್ತು ಸೀಮ್‌ ಆದ ಎಸೆತಕ್ಕೆ ಎಲ್‌ಬಿಡಬ್ಲ್ಯು ಆದರು. ಡಿಆರ್‌ಎಸ್‌ ಪಡೆದ ಕೊಹ್ಲಿಗೆ ನಿರಾಶೆ ಕಾದಿತ್ತು. ಉಪನಾಯಕ ಅಜಿಂಕ್ಯ ರಹಾನೆ (7) ಕ್ರೀಸ್‌ನಲ್ಲಿ ಕಾಲೂರುವ ಪ್ರಯತ್ನ ಮಾಡಿದರು. ಅವರಿಗೂ ಸೌಥಿ ಪೆವಿಲಿಯನ್ ದಾರಿ ತೋರಿಸಿದರು.

ಪೂಜಾರ ಜೊತೆಗೂಡಿದ ಹನುಮ ವಿಹಾರಿ ಐದನೇ ವಿಕೆಟ್‌ಗೆ 81 ರನ್‌ ಸೇರಿಸಿದರು. ಆದರೆ ಚಹಾ ವಿರಾಮಕ್ಕೂ ಮುನ್ನ ಹನುಮ ಔಟಾಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ವಿರಾಮದ ನಂತರದ ಎಂಟು ಓವರ್‌ಗಳಲ್ಲಿ ಭಾರತದ ಇನಿಂಗ್ಸ್‌ಗೆ ತೆರೆಬಿತ್ತು!

ಕೈಲ್ ಎಸೆತದಲ್ಲಿ ಪೂಜಾರ ಔಟಾಗುವುದರೊಂದಿಗೆ ಉಳಿದ ಬ್ಯಾಟ್ಸ್‌ಮನ್‌ಗಳೂ ಪೆವಿಲಿಯನ್‌ಗೆ ಹೋಗಲು ಅವಸರಿಸಿದರು. ರಿಷಭ್ ಪಂತ್, ರವೀಂದ್ರ ಜಡೇಜ ಮತ್ತು ಉಮೇಶ್ ಯಾದವ್ ವಿಕೆಟ್‌ಗಳನ್ನು ಗಳಿಸಿದ ಕೈಲ್ ಕೇಕೆ ಹಾಕಿದರು.

**

ಚಹಾ ವಿರಾಮದ ಕೆಲವೇ ನಿಮಿಷಗಳ ಮೊದಲು ನಾನು ಔಟಾದೆ. ಪೂಜಾರ ಜೊತೆಗೆ ಉತ್ತಮ ಜೊತೆಯಾಟವಿತ್ತು. ಅದು ಮುಂದುವರಿದಿದ್ದರೆ ಮತ್ತಷ್ಟು ರನ್‌ ಗಳಿಕೆ ಸಾಧ್ಯವಿತ್ತು.
–ಹನುಮ ವಿಹಾರಿ, ಭಾರತ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT