ಗುರುವಾರ , ಫೆಬ್ರವರಿ 20, 2020
19 °C

IND VS NZ T20 | ಕಿವೀಸ್ ವಿರುದ್ಧ 'ಕ್ಲೀನ್ ಸ್ವೀಪ್' ಸಾಧನೆ ಮಾಡಿದ ಟೀಂ ಇಂಡಿಯಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮೌಂಟ್ ಮಾಂಗನುಯಿ: ಭಾರತದ ಗೆಲುವಿನ ಓಟಕ್ಕೆ ಕೊನೆಯ ಪಂದ್ಯದಲ್ಲಾದರೂ ತಡೆ ಹಾಕುವ ಆತಿಥೇಯರ ಕನಸು ಕೈಗೂಡಲಿಲ್ಲ. ಟ್ವೆಂಟಿ–20 ಕ್ರಿಕೆಟ್ ಸರಣಿಯ ಐದನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಳು ರನ್‌ಗಳ ಜಯ ಸಾಧಿಸಿದ ಭಾರತ ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಸಂಭ್ರಮಿಸಿತು.

ಬೇ ಓವಲ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌.ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರ 88 ರನ್‌ ಜೊತೆಯಾಟ, 50ನೇ ಪಂದ್ಯ ಆಡಿದ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಪರಿಣಾಮಕಾರಿ ದಾಳಿಗೆ ಕಂಗೆಟ್ಟ ಟಿಮ್ ಸೌಥಿ ಬಳಗ ತವರಿನಲ್ಲಿ ವೈಟ್‌ವಾಷ್ ಮುಖಭಂಗಕ್ಕೆ ಒಳಗಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ನೀಡಿದ 164 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭದಲ್ಲಿ 17 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ ಸುಲಭವಾಗಿ ಸೋಲೊಪ್ಪಿಕೊಳ್ಳುವ ನಿರೀಕ್ಷೆ ಮೂಡಿತ್ತು. ಆದರೆ ಟಿಮ್‌ ಸೀಫರ್ಟ್ (50; 30 ಎಸೆತ, 3 ಸಿಕ್ಸರ್‌, 5 ಬೌಂಡರಿ) ಮತ್ತು ನೂರನೇ ಪಂದ್ಯ ಆಡಿದ ರಾಸ್ ಟೇಲರ್ (53; 47 ಎ, 2 ಸಿ, 5 ಬೌಂ) 99 ರನ್‌ಗಳ ಜೊತೆಯಾಟವಾಡಿ ನ್ಯೂಜಿಲೆಂಡ್ ಪಾಳಯದಲ್ಲಿ ಭರವಸೆ ಮೂಡಿಸಿದರು.

ಅಂತಿಮ ಓವರ್‌ಗಳಲ್ಲಿ ಮತ್ತೆ ಹಿಡಿತ ಸಾಧಿಸಿದ ಭಾರತದ ಬೌಲರ್‌ಗಳು 25 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಉರುಳಿಸಿ ಕ್ಲೀನ್ ಸ್ವೀಪ್‌ ಕನಸು ನಸಸು ಮಾಡಿಕೊಂಡರು. ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲೂ ಕೊನೆಯ ಓವರ್‌ಗಳಲ್ಲಿ ಭಾರತ ತಿರುಗೇಟು ನೀಡಿ ಗೆದ್ದಿತ್ತು. ಆ ಪಂದ್ಯಗಳು ಸೂಪರ್ ಓವರ್‌ನಲ್ಲಿ ಮುಕ್ತಾಯಗೊಂಡಿದ್ದವು.  

ಎರಡು, ಮೂರು ಮತ್ತು ನಾಲ್ಕನೇ ಓವರ್‌ಗಳಲ್ಲಿ ಕ್ರಮವಾಗಿ ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ ಮತ್ತು ಟಾಮ್ ಬ್ರೂಸ್ ವಾಪಸಾದರು. ಈ ಸಂದರ್ಭದಲ್ಲಿ ಜೊತೆಗೂಡಿದ ಸೀಫರ್ಟ್ ಮತ್ತು ಟೇಲರ್‌ ಭಾರತದ ಬೌಲರ್‌ಗಳನ್ನು ನಿರಾಯಾಸವಾಗಿ ದಂಡಿಸಿದರು. ಶಿವಂ ದುಬೆ ಹಾಕಿದ 10ನೇ ಓವರ್‌ನಲ್ಲಿ 34 ರನ್‌ಗಳನ್ನು ಕಬಳಿಸಿ ಜಯದತ್ತ ದಾಪುಗಾಲು ಹಾಕುವ ಸೂಚನೆ ನೀಡಿದರು. 45 ಎಸೆತಗಳು ಬಾಕಿ ಇದ್ದಾಗ ತಂಡ 3ಕ್ಕೆ 116 ಎಂಬ ಸ್ಥಿತಿಯಲ್ಲಿತ್ತು. ಆದರೆ ಸೀಫರ್ಟ್‌ ಔಟಾದ ನಂತರ ಪಂದ್ಯದ ಗತಿ ಬದಲಾಯಿತು.

ಮತ್ತೆ ವೈಫಲ್ಯ ಕಂಡ ಸಂಜು ಸ್ಯಾಮ್ಸನ್: ನಾಲ್ಕನೇ ಪಂದ್ಯದಲ್ಲಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಾಗದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲೂ ವೈಫಲ್ಯ ಕಂಡರು. ವಿಶ್ರಾಂತಿ ಪಡೆದ ವಿರಾಟ್ ಕೊಹ್ಲಿ ಬದಲಿಗೆ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ (60; 41 ಎ, 3 ಸಿ, 3 ಬೌಂ) ಆಕರ್ಷಕ ಬ್ಯಾಟಿಂಗ್ ಮೂಲಕ ಮಿಂಚಿದರು. ರಾಹುಲ್ (45; 33 ಎ, 2 ಸಿ, 4 ಬೌಂ) ಔಟಾದ ನಂತರ ಶ್ರೇಯಸ್ ಅಯ್ಯರ್ ಜೊತೆ 42 ರನ್ ಸೇರಿಸಿದ ಅವರು ಎಡಗಾಲಿನ ಮೀನಖಂಡದ ಸೆಳೆತಕ್ಕೆ ಒಳಗಾಗಿ ಅಂಗಣ ತೊರೆದರು. ಅಯ್ಯರ್ 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 33 ರನ್ ಕಲೆ ಹಾಕಿದರು.

ಸ್ಕೋರ್‌ ವಿವರ

ಭಾರತ 3ಕ್ಕೆ 163 (20 ಓವರ್‌ಗಳಲ್ಲಿ)

ಕೆ.ಎಲ್‌.ರಾಹುಲ್ ಸಿ ಮಿಷೆಲ್ ಸ್ಯಾಂಟ್ನರ್ ಬಿ ಹ್ಯಾಮಿಷ್ ಬೆನೆಟ್ 45

ಸಂಜು ಸ್ಯಾಮ್ಸನ್ ಸಿ ಮಿಷೆಲ್ ಸ್ಯಾಂಟ್ನರ್ ಬಿ ಸ್ಕಾಟ್ ಕುಗೆಲಿನ್ 02

ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತಿ 60

ಶ್ರೇಯಸ್ ಅಯ್ಯರ್ ಔಟಾಗದೆ 33

ಶಿವಂ ದುಬೆ ಸಿ ಬ್ರೂಸ್ ಬಿ ಸ್ಕಾಟ್ ಕುಗೆಲಿನ್ 05

ಮನೀಷ್ ಪಾಂಡೆ ಔಟಾಗದೆ 11

ಇತರೆ (ಲೆಗ್‌ಬೈ 1, ವೈಡ್ 6) 07

ವಿಕೆಟ್ ಪತನ

1-8 (ಸಂಜು ಸ್ಯಾಮ್ಸನ್, 1.3), 2-96 (ಕೆ.ಎಲ್‌.ರಾಹುಲ್, 11.3), 2-138* (ರೋಹಿತ್ ಶರ್ಮಾ, ಗಾಯಗೊಂಡು ನಿವೃತ್ತಿ ), 3-148 (ಶಿವಂ ದುಬೆ, 18.5)

ಬೌಲಿಂಗ್

ಟಿಮ್ ಸೌಥಿ 4–0–52–0, ಸ್ಕಾಟ್ ಕುಗೆಲಿನ್ 4–0–25–2, ಹ್ಯಾಮಿಷ್ ಬೆನೆಟ್ 4–0–21–1, ಇಶ್ ಸೋಧಿ 4–0–28–0, ಮಿಷೆಲ್ ಸ್ಯಾಂಟ್ನರ್ 4–0–36–0

ನ್ಯೂಜಿಲೆಂಡ್ 9ಕ್ಕೆ 156 (20 ಓವರ್‌ಗಳಲ್ಲಿ)

ಮಾರ್ಟಿನ್ ಗಪ್ಟಿಲ್ ಎಲ್‌ಬಿಡಬ್ಲ್ಯು ಜಸ್‌ಪ್ರೀತ್ ಬೂಮ್ರಾ 02

ಕಾಲಿನ್ ಮನ್ರೊ ಬಿ ವಾಷಿಂಗ್ಟನ್ ಸುಂದರ್ 15

ಟಿಮ್ ಸೀಫರ್ಟ್ ಸಿ ಸಂಜು ಸ್ಯಾಮ್ಸನ್ ಬಿ ನವದೀಪ್ ಸೈನಿ 50

ಟಾಮ್ ಬ್ರೂಸ್ ರನ್ ಔಟ್‌ (ಸಂಜು ಸ್ಯಾಮ್ಸನ್/ಕೆ.ಎಲ್‌.ರಾಹುಲ್) 00

ರಾಸ್ ಟೇಲರ್ ಸಿ ಕೆ.ಎಲ್.ರಾಹುಲ್ ಬಿ ನವದೀಪ್ ಸೈನಿ 53

ಡ್ಯಾರಿ ಮಿಷೆಲ್ ಬಿ ಬೂಮ್ರಾ 02

ಮಿಷೆಲ್ ಸ್ಯಾಂಟ್ನರ್ ಸಿ ಮನೀಷ್ ಪಾಂಡೆ ಬಿ ಶಾರ್ದೂಲ್ ಠಾಕೂರ್ 06

ಸ್ಕಾಟ್ ಕುಗೆಲಿನ್ ಸಿ ವಾಷಿಂಗ್ಟನ್ ಸುಂದರ್ ಬಿ ಶಾರ್ದೂಲ್ ಠಾಕೂರ್ 00

ಟಿಮ್ ಸೌಥಿ ಬಿ ಬೂಮ್ರಾ 06

ಇಶ್ ಸೋಧಿ ಔಟಾಗದೆ 16

ಹ್ಯಾಮಿಷ್ ಬೆನೆಟ್ ಔಟಾಗದೆ 01

ಇತರೆ (ಲೆಗ್ ಬೈ 1, ವೈಡ್ 3, ನೋಬಾಲ್ 1) 05

ವಿಕೆಟ್ ಪತನ

1-7 (ಮಾರ್ಟಿನ್ ಗಪ್ಟಿಲ್, 1.3), 2-17 (ಕಾಲಿನ್ ಮನ್ರೊ, 2.3), 3-17 (ಟಾಮ್ ಬ್ರೂಸ್, 3.2), 4-116 (ಟಿಮ್ ಸೀಫರ್ಟ್, 12.4), 5-119 (ಡ್ಯಾರಿಲ್ ಮಿಷೆಲ್, 13.6), 6-131 (ಮಿಷೆಲ್ ಸ್ಯಾಂಟ್ನರ್, 16.3), 7-132 (ಸ್ಕಾಟ್ ಕುಗೆಲಿನ್, 16.5), 8-133 (ರಾಸ್ ಟೇಲರ್, 17.1), 9-141 (ಟಿಮ್ ಸೌಥಿ, 18.2)

ಬೌಲಿಂಗ್

ವಾಷಿಂಗ್ಟನ್ ಸುಂದರ್ 3–0–20–1, ಜಸ್‌ಪ್ರೀತ್ ಬೂಮ್ರಾ 4–1–12–3, ನವದೀಪ್ ಸೈನಿ 4–0–23–2, ಶಾರ್ದೂಲ್ ಠಾಕೂರ್ 4–0–38–2, ಯಜುವೇಂದ್ರ ಚಾಹಲ್ 4–0–28–0, ಶಿವಂ ದುಬೆ 1–0–34–0

ಫಲಿತಾಂಶ: ಭಾರತಕ್ಕೆ 7 ರನ್‌ಗಳ ಜಯ; 5 ಪಂದ್ಯಗಳ ಸರಣಿಯಲ್ಲಿ 5–0 ಗೆಲುವು.

ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬೂಮ್ರಾ

ಸರಣಿಯ ಶ್ರೇಷ್ಠ ಆಟಗಾರ: ಕೆ.ಎಲ್‌.ರಾಹುಲ್

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ಫೆಬ್ರುವರಿ 5ರಿಂದ

 

ಬೂಮ್ರಾ 50; ಟೇಲರ್ 100

ಭಾನುವಾರ ಭಾರತದ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಟ್ವೆಂಟಿ–20 ಕ್ರಿಕೆಟ್‌ನಲ್ಲಿ 50 ಪಂದ್ಯಗಳ ಮೈಲಿಗಲ್ಲು ಸಾಧಿಸಿದರೆ, ನ್ಯೂಜಿಲೆಂಡ್‌ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಸ್ ಟೇಲರ್ 100ನೇ ಪಂದ್ಯವನ್ನಾಡಿದ ಖುಷಿಯಲ್ಲಿ ಮಿಂದರು. 

ಭಾರತದ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಕಲೆ ಹಾಕಿದ ಭಾರತದ ಎಂಟನೇ ಆಟಗಾರ ಎನಿಸಿದರು. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಆಟಗಾರ ಎಂಬ ಖ್ಯಾತಿಯೂ ಅವರದಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು