ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಿಂದ ಏನು ಬಯಸುತ್ತಿದ್ದಾರೆ ನಾಯಕ ರೋಹಿತ್‌? ರಾಹುಲ್‌ ವಿವರಣೆ ಇದು..

Last Updated 13 ಜನವರಿ 2023, 7:09 IST
ಅಕ್ಷರ ಗಾತ್ರ

ಕೋಲ್ಕತ್ತ: ಅತಿ ಒತ್ತಡದ ಸನ್ನಿವೇಶದಲ್ಲಿ ಕ್ರೀಸಿಗಿಳಿದು ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಅಮೂಲ್ಯ ಜಯ ಒದಗಿಸಿಕೊಟ್ಟಿರುವ ವಿಕೆಟ್ ಕೀಪರ್, ಬ್ಯಾಟರ್ ಕೆ.ಎಲ್. ರಾಹುಲ್, ಭಾರತದ ಏಕದಿನ ತಂಡದಲ್ಲಿ ತಮ್ಮ ಜವಾಬ್ದಾರಿ ಕುರಿತು ವಿವರಣೆ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಅವರ ಅಜೇಯ 64 ರನ್ ನೆರವಿನೊಂದಿಗೆ, ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಸರಣಿ ವಶಪಡಿಸಿಕೊಂಡಿದೆ.

ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ರಾಹುಲ್, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವುದು ನನ್ನ ಆಟವನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ. ನಾಯಕ ರೋಹಿತ್ ಶರ್ಮಾ ಅವರಿಗೆ ತಾವೇನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟತೆಯಿದೆ. ನಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವರು ಬಯಸಿದ್ದಾರೆ ಎಂದು ತಿಳಿಸಿದರು.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಆತುರಪಡಬೇಕಾದ ಅಗತ್ಯವಿಲ್ಲ. ಸ್ನಾನ ಮಾಡಿ ಆರಾಮವಾಗಿ ಕುಳಿತುಕೊಂಡು ಪಂದ್ಯ ವೀಕ್ಷಿಸಬಹುದು. ಆದರೆ ತಂಡವು ನನ್ನಿಂದ ಏನನ್ನು ಬಯಸುತ್ತದೆ ಎಂಬುದನ್ನು ಸದಾ ಯೋಚಿಸುತ್ತಿರಬೇಕು. ಸನ್ನಿವೇಶವನ್ನು ಗ್ರಹಿಸಲು ಸಾಧ್ಯವಾದರೆ ಇದು ನನಗೆ ಹಾಗೂ ತಂಡಕ್ಕೆ ನೆರವಾಗುತ್ತದೆ ಎಂದು ಹೇಳಿದರು.

ಈ ಪಂದ್ಯದಲ್ಲಿ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ರಾಹುಲ್, 103 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ರಾಹುಲ್ ಅವರಿಗೆ ಫಿನಿಶರ್ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ನಿಟ್ಟಿನಲ್ಲಿ ಮಂಬರುವ ಪಂದ್ಯಗಳು ರಾಹುಲ್ ಪಾಲಿಗೆ ಮಹತ್ವವೆನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT