ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

’ಬಾಲಂಗೋಚಿ‘ ತಂಡದ ದೌರ್ಬಲ್ಯ ಅಲ್ಲ: ಆರ್ಷದೀಪ್

Published : 4 ಆಗಸ್ಟ್ 2023, 15:45 IST
Last Updated : 4 ಆಗಸ್ಟ್ 2023, 15:45 IST
ಫಾಲೋ ಮಾಡಿ
Comments

ತರೊಬಾ, ಟ್ರಿನಿಡಾಡ್ (ಪಿಟಿಐ): ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಸಿದ ಹನ್ನೊಂದು ಆಟಗಾರರ ಸಂಯೋಜನೆಯು ಉತ್ತಮವಾಗಿತ್ತು ಎಂದು ಭಾರತ ತಂಡದ ಎಡಗೈ ಮಧ್ಯಮವೇಗಿ ಆರ್ಷದೀಪ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ವಿಂಡೀಸ್ ಬಳಗವು 4 ರನ್‌ಗಳಿಂದ ಭಾರತದ ಎದುರು ಜಯಿಸಿತ್ತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತ್ತು.

ತಂಡದಲ್ಲಿ ಆರನೇ ಕ್ರಮಾಂಕದವರಗೆ ಮಾತ್ರ ಪರಿಣತ ಬ್ಯಾಟರ್‌ಗಳು ಇದ್ದಾರೆ. ನಂತರ ’ಬಾಲಂಗೋಚಿ‘ಗಳ ಸಾಲು ದೊಡ್ಡದಾಗಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ. ಅದರಿಂದಾಗಿಯೇ ಸೋಲಬೇಕಾಯಿತು ಎಂಬ ಟೀಕೆಗಳೂ ಕೇಳಿಬಂದಿವೆ. 

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಿಂಗ್, ‘ಪಂದ್ಯದ ನಂತರ ಇಂತಹ ಮಾತುಗಳು ಕೇಳಿ ಬರುತ್ತವೆ. ಆದರೆ ನಮ್ಮ ಹನ್ನೊಂದರ ಬಳಗವು ಉತ್ತಮವಾಗಿತ್ತು ಎಂಬ ವಿಶ್ವಾಸವಿದೆ. ಆರು ಅಥವಾ ಒಂಬತ್ತು ಬೌಲರ್‌ಗಳು ತಂಡದಲ್ಲಿದ್ದರೂ ಗೆಲ್ಲುವ ವಿಶ್ವಾಸ ನಮಗಿರುತ್ತದೆ‘ ಎಂದರು.

‘ನಮ್ಮ ಒಬ್ಬ ಬ್ಯಾಟರ್ ಕೊನೆಯ ಹಂತದವರೆಗೂ ಕ್ರೀಸ್‌ನಲ್ಲಿ ಉಳಿಯಬೇಕಿತ್ತು. ಅಂತಿಮ ಎರಡು ಓವರ್‌ಗಳಲ್ಲಿ ಐವರು ಫೀಲ್ಡರ್‌ಗಳು 30 ಯಾರ್ಡ್ ವೃತ್ತದೊಳಗೆ ಇದ್ದರು. ಇದರ ಲಾಭ ಪಡೆಯಬಹುದಿತ್ತು‘ ಎಂದು 24 ವರ್ಷದ ಆರ್ಷದೀಪ್ ಹೇಳಿದರು.

ಆರ್ಷದೀಪ್ ಕೊನೆಯಲ್ಲಿ ಏಳು ಎಸೆತಗಳಲ್ಲಿ 12 ರನ್‌ ಗಳಿಸಿದ್ದರು. ಅದರಲ್ಲಿ ಎರಡು ಬೌಂಡರಿ ಇದ್ದವು ಆದರೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 ರನ್ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ನಿಗದಿಯ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 145 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

ಭಾರತದ ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅವರು ಬೇಗನೆ ಔಟಾದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ತಿಲಕ್ ವರ್ಮಾ (39 ರನ್) ಬಿಟ್ಟರೆ ಉಳಿದವರಿಂದ ದೊಡ್ಡ ಮೊತ್ತ ಗಳಿಕೆಯಾಗಲಿಲ್ಲ. ವರ್ಮಾ ಅವರಿಗೆ ಇದು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.

ಭಾರತ ವಿಂಡೀಸ್‌ಗೆ ದಂಡ ದುಬೈ (ಪಿಟಿಐ):

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರೈಸದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಂಡ ವಿಧಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು ನಿಗದಿತ ವೇಳೆಯೊಳಗೆ ಎರಡು ಓವರ್‌ ಕಡಿಮೆ ಹಾಕಿತ್ತು. ಆದ್ದರಿಂದ ಪಂದ್ಯ ಶುಲ್ಕದ ಶೇ 10ರಷ್ಟು ಮೊತ್ತದ ದಂಡ ವಿಧಿಸಲಾಗಿದೆ. ಭಾರತ ತಂಡವು ಒಂದು ಓವರ್‌ ಕಮ್ಮಿ ಮಾಡಿದ್ದರಿಂದ ಶೇ ಐದರಷ್ಟು ದಂಡ ವಿಧಿಸಲು  ಐಸಿಸಿ ಪಂದ್ಯ ರೆಫರಿ ರಿಚಿ ರಿಚರ್ಡ್ಸನ್ ನಿರ್ಧಾರ ಕೈಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT