ಬುಧವಾರ, ಸೆಪ್ಟೆಂಬರ್ 22, 2021
29 °C

ಕ್ರಿಕೆಟ್ | ಧೋನಿ ಬೆಸ್ಟ್ ಫಿನಿಶರ್ ಹೌದೇ? ಮಿ.ಕೂಲ್ ಚೇಸ್ ಮಾಡಲಾಗದ 3 ಪಂದ್ಯಗಳಿವು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ವಿಶ್ವ ಕ್ರಿಕೆಟ್‌ನ ಬೆಸ್ಟ್‌ ಫಿನಿಶರ್‌ ಎನಿಸಿಕೊಂಡವರು. ಅಭಿಮಾನಿಗಳನ್ನು ಕುರ್ಚಿ ತುದಿಗೆ ತಂದು ಕೂರಿಸಿದ್ದ 2011ರ ವಿಶ್ವಕಪ್‌ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದ ಧೋನಿ, ಲಂಕಾ ಪಡೆಯನ್ನು ಮಣಿಸಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದರು.

2011ರ ಏಪ್ರಿಲ್‌ 2ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ 275 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಕಾದಿತ್ತು. ಖಾತೆ ತೆರೆಯುವ ಮೊದಲೇ ಆರಂಭಿಕ ವೀರೇಂದ್ರ ಸೆಹ್ವಾಗ್‌ ಪೆವಿಲಿಯನ್‌ ಸೇರಿಕೊಂಡಿದ್ದರು. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌(18) ಅವರೂ ಹೆಚ್ಚು ಹೊತ್ತು ನಿಂತಿರಲಿಲ್ಲ.

ತಂಡದ ಮೊತ್ತ 31 ಆಗುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಆಗ ಆಸರೆಯಾಗಿದ್ದು ಗೌತಮ್‌ ಗಂಭೀರ್‌ ಮತ್ತು ಧೋನಿ. ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದ್ದ ಗಂಭೀರ್‌ ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಈಗಿನ ನಾಯಕ ವಿರಾಟ್‌ ಕೊಹ್ಲಿ(35) ಜೊತೆ ಸೇರಿ ಮೂರನೇ ವಿಕೆಟ್‌ಗೆ 83 ರನ್‌ ಹಾಗೂ ಆಗಿನ ನಾಯಕ ಮಹೇಂದ್ರ ಸಿಂಗ್‌ ದೋನಿ ಜೊತೆ 4ನೇ ವಿಕೆಟ್‌ಗೆ 109ರನ್‌ ಕೂಡಿಸಿದ್ದರು.

ಬಿರುಸಿನ ಬ್ಯಾಟಿಂಗ್‌ ನಡೆಸಿದ್ದ ಧೋನಿ ಕೇವಲ 79 ಎಸೆತಗಳಲ್ಲಿ 91 ರನ್‌ ಗಳಿಸಿದ್ದರು. ಆಲ್‌ರೌಂಡರ್‌ ಯುವರಾಜ್‌ ಸಿಂಗ್‌(21) ಜೊತೆ ಸೇರಿ ಐದನೇ ವಿಕೆಟ್‌ಗೆ 54 ರನ್‌ ಕಲೆಹಾಕಿದ ಅವರು, 48.2 ಎರಡನೇ ಓವರ್‌ನಲ್ಲಿ 277 ರನ್‌ ಗಳಿಸಿ ಜಯದ ಲೆಕ್ಕ ಚುಕ್ತಾ ಮಾಡಿದ್ದರು.

ಧೋನಿ ಇಂತಹ ಸಾಕಷ್ಟು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರಾದರೂ, ಇತ್ತೀಚಿನ ದಿನಗಳಲ್ಲಿ ಅವರ ಬ್ಯಾಟಿಂಗ್‌ನಲ್ಲಿ ಮೊದಲಿನ ಲಯ ಉಳಿದಿಲ್ಲ. ಚೇಸಿಂಗ್‌ನಲ್ಲಿ ಅಷ್ಟೇನೂ ಮಿಂಚದ ಧೋನಿ ಬ್ಯಾಟಿಂಗ್‌ ಕೌಶಲದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಏಳುವ ಜೊತೆಗೆ ಕ್ರಿಕೆಟ್ ಭವಿಷ್ಯದ ಕುರಿತೂ ಚರ್ಚೆ ನಡೆಯುತ್ತಿದೆ. ನಿಧಾನಗತಿಯ ಬ್ಯಾಟಿಂಗ್‌ ಕುರಿತು, ‘ಧೋನಿ, ಸುಲಭವಾಗಿ ಗೆಲ್ಲಬಹುದಾದ ಪಂದ್ಯಗಳನ್ನು ಕೊನೆಯ ಓವರ್‌ವರೆಗೂ ಕೊಂಡೊಯ್ದು ಒತ್ತಡ ಹೆಚ್ಚಿಸುತ್ತಾರೆ’ ಎಂಬ ಟೀಕೆಗಳೂ ಕೇಳಿಬಂದವು. ಇಂತಹುದೇ ತೆಗಳಿಕೆ 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್ ವೇಳೆಯೂ ಕೇಳಿ ಬಂದಿತ್ತು. ಆ ‍ಪಂದ್ಯದಲ್ಲಿ ಧೋನಿ ರನೌಟ್‌ ಆಗಿದ್ದರು. ಅವರ ಬ್ಯಾಟಿಂಗ್‌ ಬಗ್ಗೆ ಎಷ್ಟು ಟೀಕೆಗಳಿದ್ದರೂ, ‘ಅಂದು ಧೋನಿ ಕ್ರೀಸ್‌ನಲ್ಲಿ ಇದ್ದಿದ್ದರೆ ಭಾರತ ನ್ಯೂಜಿಲೆಂಡ್‌ ವಿರುದ್ಧ ಗೆಲ್ಲುತ್ತಿತ್ತು. ಫೈನಲ್‌ ಪ್ರವೇಶಿಸುತ್ತಿತ್ತು’ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆ ಪಂದ್ಯದ ಬಳಿಕ ಅವರು ಟೀಂ ಇಂಡಿಯಾ ಪರ ಕಣಕ್ಕಿಳಿದಿಲ್ಲ ಎಂಬುದೂ ವಿಶೇಷ.

ಧೋನಿ ಕಳೆದ ಹಲವು ವರ್ಷಗಳಲ್ಲಿ ಇಂತಹ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಕೊನೆಯ ಓವರ್‌ವರೆಗೆ ಸಾಗಿದ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರಾದರೂ, ಕ್ರೀಸ್‌ನಲ್ಲಿದ್ದರೂ ಗೆದ್ದುಕೊಡಲು ಸಾಧ್ಯವಾಗದ ಪ್ರಮುಖ 3 ಇನಿಂಗ್ಸ್‌ಗಳ ವಿವರ ಇಲ್ಲಿದೆ.

ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ (2015ರ ಅಕ್ಟೋಬರ್‌ 11)
ಕೊನೆಯ ಓವರ್‌ನಲ್ಲಿ ಬೇಕಿತ್ತು 11 ರನ್‌: 
ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವದು. ಕಾನ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಐದು ವಿಕೆಟ್‌ ಕಳೆದುಕೊಂಡು 303 ರನ್ ಗಳಿಸಿತ್ತು. ಭಾರತ 298 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮೊತ್ತ ಬೆನ್ನಟ್ಟಿದ ಭಾರತಕ್ಕೆ ರೋಹಿತ್‌ ಶರ್ಮಾ (150) ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. 40 ಓವರ್‌ ಆಗುವಷ್ಟರಲ್ಲಿ 214 ರನ್‌ ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದಾಗ ಧೋನಿ ಕ್ರೀಸ್‌ಗೆ ಬಂದರು. 46.1ನೇ ಓವರ್‌ನಲ್ಲಿ ನಾಲ್ಕನೇ ವಿಕೆಟ್‌ ರೂಪದಲ್ಲಿ ರೋಹಿತ್‌ ಔಟ್‌ ಆಗುವಷ್ಟರಲ್ಲಿ ತಂಡದ ಮೊತ್ತ 269ಕ್ಕೆ ಏರಿತ್ತು. ಉಳಿದಿದ್ದ 23 ಎಸೆತಗಳಲ್ಲಿ ಭಾರತ 35 ರನ್ ಗಳಿಸಬೇಕಿತ್ತು. ಕೊನೆಯ ಓವರ್‌ ವರೆಗೂ ಈ ಅಂತರ ಹೀಗೆಯೇ ಮುಂದುವರಿಯಿತು.

ವೃತ್ತಿ ಜೀವನದ ಆರನೇ ಏಕದಿನ ಪಂದ್ಯದಲ್ಲಿ ಆಡುತ್ತಿದ್ದ ಅನನುಭವಿ ಕಗಿಸೊ ರಬಡಾ ಎಸೆದ ಅಂತಿಮ ಓವರ್‌ನಲ್ಲಿ ಭಾರತ 11 ರನ್‌ ಗಳಿಸಬೇಕಿತ್ತು. ಧೋನಿ ಮತ್ತು ಕನ್ನಡಿಗ ಸ್ಟುವರ್ಟ್‌ ಬಿನ್ನಿ ಕ್ರೀಸ್‌ನಲ್ಲಿದ್ದರು. ಮೊದಲೆರಡು ಎಸೆತಗಳಲ್ಲಿ ಧೋನಿ, ಮೂರು ರನ್‌ ಗಳಿಸಿದರು. ಮೂರನೇ ಎಸೆತದಲ್ಲಿ ಬಿನ್ನಿ ಒಂದು ರನ್‌ ಕದ್ದರು. ಕೊನೆಯ ಮೂರು ಎಸೆತಗಳಲ್ಲಿ 7 ರನ್ ಬೇಕಿದ್ದಾಗ ಧೋನಿ ಔಟಾದರು. ಐದನೇ ಎಸೆತದಲ್ಲಿ ಬಿನ್ನಿಯೂ ವಿಕೆಟ್‌ ಒಪ್ಪಿಸಿದರು. ಅಂತಿಮ ಎಸೆತದಲ್ಲಿ ಭುವನೇಶ್ವರ್‌ ಕುಮಾರ್ ಒಂದು ರನ್‌ ಗಳಿಸಿದರು.

ಹೀಗಾಗಿ ಭಾರತ ಕೇವಲ ಐದು ರನ್‌ಗಳ ಸೋಲು ಕಾಣಬೇಕಾಯಿತು. ಈ ಪಂದ್ಯದಲ್ಲಿ 30 ಎಸೆತಗಳನ್ನು ಎದುರಿಸಿದ ಧೋನಿ 31 ರನ್‌ ಗಳಿಸಿದರು.

ಸ್ಕೋರ್‌
ದಕ್ಷಿಣ ಆಫ್ರಿಕಾ:
303ಕ್ಕೆ 5
ಭಾರತ: 298ಕ್ಕೆ 7

ಭಾರತ–ವೆಸ್ಟ್ ಇಂಡೀಸ್‌ ಟಿ20 ಪಂದ್ಯ(2016 ಆಗಸ್ಟ್‌ 27)
ಕೊನೆಯ ಓವರ್‌ನಲ್ಲಿ ಬೇಕಿತ್ತು 8 ರನ್‌: 
ಫ್ಲೋರಿಡಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಬರೋಬ್ಬರಿ 245 ರನ್‌ ಪೇರಿಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತವನ್ನು ಆರಂಭಿಕ ರೋಹಿತ್‌ ಶರ್ಮಾ (28 ಎಸೆತಗಳಲ್ಲಿ 62 ರನ್‌) ಮತ್ತು ಮಧ್ಯಮ ಕ್ರಮಾಂಕದ ಕೆ.ಎಲ್‌ ರಾಹುಲ್‌ (51 ಎಸೆತಗಳಲ್ಲಿ 110 ರನ್‌) ಗೆಲುವಿನತ್ತ ಮುನ್ನಡೆಸಿದ್ದರು.

ಡ್ವೇನ್‌ ಬ್ರಾವೋ ಹಾಕಿದ ಕೊನೆಯ ಓವರ್‌ನಲ್ಲಿ ಭಾರತ ಎಂಟು ರನ್‌ ಗಳಿಸಬೇಕಿತ್ತು. ರಾಹುಲ್‌ ಜೊತೆಗೆ ಧೋನಿ ಕ್ರೀಸ್‌ನಲ್ಲಿದ್ದರು. ನಾಲ್ಕು ಎಸೆತಗಳನ್ನು ಎದುರಿಸಿದ್ದ ಧೋನಿ ಗಳಿಸಿದ್ದು ಕೇವಲ ಮೂರು ರನ್‌. ಉಳಿದೆರಡು ಎಸೆತಗಳಲ್ಲಿ ರಾಹುಲ್‌ ಎರಡು ರನ್‌ ಗಳಿಸಿದರು. ಒಂದು ಇತರೆ ರನ್‌ ಸಿಕ್ಕಿತ್ತು.

ಕೊನೆ ಎಸೆತದಲ್ಲಿ ಎರಡು ರನ್‌ ಬೇಕಿದ್ದಾಗ ಧೋನಿ ಕ್ಯಾಚ್‌ ನೀಡಿ ಔಟಾದರು. ಇದರೊಂದಿಗೆ ಭಾರತ ಕೇವಲ ಒಂದು ರನ್‌ ಅಂತರದ ವಿರೋಚಿತ ಸೋಲು ಕಂಡಿತು. ಈ ಪಂದ್ಯದಲ್ಲಿ ಧೋನಿ 25 ಎಸೆತಗಳಲ್ಲಿ 43 ರನ್‌ ಗಳಿಸಿದ್ದರು.

ಸ್ಕೋರ್‌
ವೆಸ್ಟ್ ಇಂಡೀಸ್‌: 245ಕ್ಕೆ 6
ಭಾರತ: 244ಕ್ಕೆ 4

ಭಾರತ–ವೆಸ್ಟ್ ಇಂಡೀಸ್‌ ಏಕದಿನ ಪಂದ್ಯ (2017 ಜುಲೈ 02)
ಕೊನೆಯ ಎರಡು ಓವರ್‌ಗಳಲ್ಲಿ 16 ರನ್‌ ಬೇಕಿತ್ತು:
ಧೋನಿ ಆಡಿದ ಅತ್ಯಂತ ನಿಧಾನಗತಿಯ ಇನಿಂಗ್ಸ್‌ ಇದು. ಬರೋಬ್ಬರಿ 114 ಎಸೆತಗಳನ್ನು ಎದುರಿಸಿದ ಅವರು ಗಳಿಸಿದ್ದು ಕೇವಲ 54 ರನ್‌.

ಅಂಟಿಗುವಾದಲ್ಲಿ ನಡೆದ ಈ ಪಂದ್ಯದಲ್ಲಿ ವಿಂಡೀಸ್‌ ಕೇವಲ 189ರನ್‌ಗಳ ಸಾಧಾರಣ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಅಜಿಂಕ್ಯ ರಹಾನೆ (60) ಹಾಗೂ ಧೋನಿ ಬಿಟ್ಟರೆ ಉಳಿದವರಿಂದ ಉತ್ತಮ ನೆರವು ಸಿಗಲಿಲ್ಲ.

48 ಓವರ್‌ ಮುಗಿದಾಗ ಭಾರತ ಗೆಲುವಿಗೆ ಇನ್ನು 16 ರನ್‌ ಬೇಕಿತ್ತು. ಧೋನಿ ಜೊತೆಗೆ ಕುಲದೀಪ್ ಯಾದವ್‌ ಕ್ರೀಸ್‌ನಲ್ಲಿದ್ದರು. ಕೆಸ್ರಿಕ್‌ ವಿಲಿಯಮ್ಸನ್‌ ಎಸೆದ 49ನೇ ಓವರ್‌ನಲ್ಲಿ ಮೂರು ಎಸೆತಗಳನ್ನು ಆಡಿದ ಧೋನಿ ಕೇವಲ ಒಂದು ರನ್‌ ಗಳಿಸಿ ಔಟಾದರು.

ಕೊನೆಯ ಓವರ್‌ನಲ್ಲಿ ಭಾರತ ಎರಡು ರನ್‌ ಗಳಿಸಿತು. ನಾಯಕ ಜೇಸನ್‌ ಹೋಲ್ಡರ್‌ ಎಸೆದ ಈ ಓವರ್‌ನಲ್ಲಿ ಮೊಹಮದ್‌ ಶಮಿ ಮತ್ತು ಉಮೇಶ್‌ ಯಾದವ್‌ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಭಾರತ 11 ರನ್‌ಗಳ ಸೋಲು ಕಂಡಿತು.

ಸ್ಕೋರ್‌
ವೆಸ್ಟ್ ಇಂಡೀಸ್‌: 189ಕ್ಕೆ 9
ಭಾರತ: 178ಕ್ಕೆ 10

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು