ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ಪಿ.ಜಿಯಿಂದ ಪಾಕ್‌ ವಿರುದ್ಧ ಪಂದ್ಯದವರೆಗೆ....

Published 8 ಜೂನ್ 2024, 0:29 IST
Last Updated 8 ಜೂನ್ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ಹತ್ತು ವರ್ಷಗಳ ಹಿಂದೆ ನಗರದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದ 22 ವರ್ಷದ ಯುವಕ ವೃತ್ತಿಪರ ಕ್ರಿಕೆಟಿನಾಗುವ ಕನಸು ಹೊಂದಿದ್ದರು. ಅದಕ್ಕಾಗಿ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ ತರಬೇತಿ ಸಹ ಪಡೆಯುತ್ತಿದ್ದರು. ಗುರುವಾರ ಪಾಕಿಸ್ತಾನ ವಿರುದ್ಧ ಅಮೆರಿಕದ ಚಾರಿತ್ರಿಕ ಟಿ20 ವಿಶ್ವಕಪ್‌ ಲೀಗ್‌ ಪಂದ್ಯದ ಗೆಲುವಿನಲ್ಲಿ ಮಿಂಚಿದ ನಾಸ್ತುಷ್‌ ಕೆಂಜಿಗೆ ಅಂದಿನ ದಿನಗಳಲ್ಲಿ ರಾಜ್ಯ ತಂಡಕ್ಕೆ ಸಹ ಆಯ್ಕೆಯಾಗುವ ಆಸೆ ಕೈಬಿಟ್ಟು ನಿರಾಶರಾಗಿದ್ದರು.

‌ಹುಟ್ಟಿನಿಂದ ಅಮೆರಿಕ ಪೌರತ್ವ ಪಡೆದಿದ್ದ ಅವರು ಕನಸಿನಿಂದ ಹೊರಬಂದು ದಯಾನಂದಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊ ಟೆಕ್ನಾಲಜಿ ಎಂಜಿನಿಯರಿಂಗ್ ಪದವಿಯೊಡನೆ ತಾಯ್ನಾಡು ಅಮೆರಿಕಕ್ಕೆ ಮರಳಿದ್ದರು. ಒಳಮನಸ್ಸಿನಲ್ಲಿ ಕ್ರಿಕೆಟಿನಾಗುವ ಆಸೆ ಬತ್ತಿರಲಿಲ್ಲ. ನ್ಯೂಯಾರ್ಕ್‌ನಲ್ಲಿ ವೈದ್ಯಕೀಯ ಉಪಕರಣಗಳ ಪರೀಕ್ಷಕನ ಕೆಲಸದೊಡನೆ ಉದ್ಯೋಗ ಆರಂಭಿಸಿದರು. ಕೆಂಜಿಗೆ ಪೋಷಕರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯವರು.

‘ಈ ಅವಧಿಯಲ್ಲಿ ನನ್ನ ಗುರಿಯತ್ತ ಗಮನಕೊಟ್ಟೆ. ವರ್ಷದ ನಂತರ ನ್ಯೂಯಾರ್ಕ್‌ನ ಕೊಲಂಬಿಯಾ ಕ್ರಿಕೆಟ್‌ ಕ್ಲಬ್ ಸೇರಿದೆ. ನನ್ನ ಆಸೆಗೆ ಮತ್ತೆ ಜೀವ ಬಂತು’ ಎಂದು ಎಡಗೈ ಸ್ಪಿನ್ನರ್‌ ಕೆಂಜಿಗೆ ಸುದ್ದಿಸಂಸ್ಥೆ ಜೊತೆ ನೆನಪಿಸಿಕೊಂಡರು.

‘ನೋಶ್ ಪ್ರತಿಭಾನ್ವಿತ. ನೆಟ್ಸ್‌ ವೇಳೆ ತುಂಬಾ ಶ್ರಮ ಹಾಕುತ್ತಿದ್ದರು. ಕೆಎಸ್‌ಸಿಎ ಲೀಗ್‌ನಲ್ಲೂ ಆಡಿದ್ದರು. ಆದರೆ ಇಲ್ಲಿ ಹಲವಾರು ಮಂದಿ ರಾಜ್ಯ ತಂಡಕ್ಕೆ ಬರಲು ಹಾತೊರೆಯುತ್ತಿರುತ್ತಾರೆ. ದುರದೃಷ್ಟವಶಾತ್‌ ಅವರಿಗೆ ಅವಕಾಶ ಸಿಗಲಿಲ್ಲ’ ಎಂದು ಕೆಐಒಸಿಯಲ್ಲಿ ಕೋಚ್ ಆಗಿರುವ ಇರ್ಫಾನ್ ಸೇಠ್ ನೆನಪಿಸಿಕೊಂಡರು.

ಮುಂದಿನ ಕೆಲವೇ ವರ್ಷಗಳಲ್ಲಿ ಅವರು ಹಂತಹಂತವಾಗಿ ಪ್ರಗತಿ ಕಂಡರು. ಅಮೆರಿಕ ರಾಷ್ಟ್ರೀಯ ತಂಡದ ಜೊತೆ ಕೇಂದ್ರಿಯ ಗುತ್ತಿಗೆ ಪಡೆದರು. ಮೇಜರ್‌ ಲೀಗ್‌ನಲ್ಲಿ ಎಂಐ ನ್ಯೂಯಾರ್ಕ್‌ಗೆ ಆಡುವ ಅವಕಾಶ ಪಡೆದರು. ಅಲ್ಲಿ ಅವರು ಪರಿಣಾಮಕಾರಿಯಾಗಿದ್ದು 6 ಪಂದ್ಯಗಳಿಂದ 5.76 ಇಕಾನಮಿ ದರದಲ್ಲಿ ಆರು ವಿಕೆಟ್‌ ಪಡೆದರು. ನ್ಯೂಜಿಲೆಂಡ್‌ನ ಅನುಭವಿ ಮಾರ್ಟಿನ್ ಗಪ್ಟಿಲ್ ಅವರ ವಿಕೆಟ್‌ ಕೂಡ ಒಳಗೊಂಡಿತ್ತು.

‘ಆ ಅನುಭವ ನನಗೆ ತುಂಬಾ ನೆರವಾಯಿತು. ದೊಡ್ಡ ಆಟಗಾರರ ಮತ್ತು ಮಹತ್ವದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿತು’ ಎಂದು ಕೆಂಜಿಗೆ ಹೇಳಿದರು. ಅವರ ಪ್ರದರ್ಶನ ಗಮನಿಸಿದ ವೆಸ್ಟ್‌ ಇಂಡೀಸ್ ಆಟಗಾರ ಡ್ವೇನ್‌ ಬ್ರೇವೊ ಅವರು ಫ್ಲಾರಿಡಾದಲ್ಲಿ ನಡೆದ ಅಮೆರಿಕ ಓಪನ್ ಟಿ20 ಟೂರ್ನಿಯಲ್ಲಿ ಆಡುವ ಅವಕಾಶ ನೀಡಿದರು. ಅಲ್ಲಿ ವಿವಿಧ ರಾಷ್ಟ್ರಗಳ ಆಟಗಾರರಿದ್ದರು.

‘ಅಮೆರಿಕ ತಂಡಕ್ಕೆ ಆಯ್ಕೆಯಾಗಲು ನಾನು 800 ಗಂಟೆಗಳ ಸಮುದಾಯ ಸೇವೆ ಮಾಡಬೇಕಿತ್ತು. ಅವುಗಳಲ್ಲಿ ಕಿರಿಯ ಕ್ರಿಕೆಟಿಗರಿಗೆ ಕಲಿಸುವುದೂ ಒಳಗೊಂಡಿತ್ತು. ಆದರೆ ರಾಷ್ಟ್ರೀಯ ತಂಡಕ್ಕೆ ಸೇರಿದ್ದರಿಂದ ಇವ್ಯಾವುದೂ ವ್ಯರ್ಥ ಪ್ರಯತ್ನವಾಗಲಿಲ್ಲ’ ಎಂದರು. 2019ರಲ್ಲಿ ಅವರು ಯುಎಇ ತಂಡದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಇಲ್ಲಿಯವರೆಗೆ 40 ಏಕದಿನ ಮತ್ತು ಏಳು ಟಿ20 ಪಂದ್ಯಗಳನ್ನು ಆಡಿದ್ದಾರೆ.

‘ಅಸೋಸಿಯೇಟ್‌ ತಂಡದ ಆಟಗಾರರಿಗೆ ದೊಡ್ಡ ತಂಡಗಳ ವಿರುದ್ಧ ಆಡುವ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಪಾಕ್‌ ವಿರುದ್ಧದ ಪಂದ್ಯದ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡೆ. ನನ್ನಂಥ ಆಟಗಾರರಿಗೆ ಇದು ಸವಾಲು ಕೂಡ’ ಎಂದು ಕೆಂಜಿಗೆ ಅಭಿಪ್ರಾಯಪಟ್ಟರು. ಐಸಿಸಿ ಕ್ವಾಲಿಫೈಯರ್‌ನಲ್ಲಿ ಅವರು ಅಮೆರಿಕ ಪರ ಅತ್ಯಧಿಕ ವಿಕೆಟ್‌ ಪಡೆದವರು.

‍ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಮಧ್ಯಮ ಹಂತದ ಓವರುಗಳಲ್ಲಿ ಉಸ್ಮಾನ್‌ ಖಾನ್, ಆಜಂ ಖಾನ್ ಮತ್ತು ಶದಾಬ್ ಖಾನ್ ಅವರ ವಿಕೆಟ್‌ಗಳನ್ನು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT