ಮಂಗಳವಾರ, ಮಾರ್ಚ್ 2, 2021
21 °C
ತಮ್ಮ ಮತ್ತು ಕೊಹ್ಲಿ ಬಾಂಧವ್ಯ ಮೊದಲಿನಂತೆಯೇ ಇರಲಿದೆ ಎಂದ ಉಪನಾಯಕ

ವಿರಾಟ್ ಕೊಹ್ಲಿ ನನ್ನ ನಾಯಕ: ಅಜಿಂಕ್ಯ ರಹಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 'ನನಗೆ ವಿರಾಟ್ ಕೊಹ್ಲಿಯೇ ನಾಯಕ. ನಾನು ಅವರಿಗೆ ಉಪನಾಯಕ' ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ಹಂಗಾಮಿ ನಾಯಕರಾಗಿದ್ದ ಭಾರತ ತಂಡವು ಚಾಂಪಿಯನ್ ಆಗಿತ್ತು. ಸರಣಿಯ ಮೊದಲ ಪಂದ್ಯದ ನಂತರ ವಿರಾಟ್ ಪಿತೃತ್ವ ರಜೆ ಪಡೆದ ಕಾರಣ ಮೂರು ಟೆಸ್ಟ್‌ಗಳಲ್ಲಿ ತಂಡವನ್ನು ರಹಾನೆ ಮುನ್ನಡೆಸಿದ್ದರು. ಇದರಿಂದಾಗಿ ಮುಂದಿನ ದಿನಗಳಲ್ಲಿಯೂ ಟೆಸ್ಟ್ ತಂಡಕ್ಕೆ ರಹಾನೆ ನಾಯಕರಾಗುವರೇ, ಕೊಹ್ಲಿ ಸೀಮಿತ ಓವರ್‌ಗಳಿಗೆ ನಾಯಕತ್ವ ವಹಿಸಬಹುದು ಎಂಬ ಚರ್ಚೆಗಳು ಗರಿಗೆದರಿದ್ದವು. ಆದರೆ ಈ ಎಲ್ಲ ಮಾತುಗಳಿಗೂ ರಹಾನೆ ತೆರೆ ಎಳೆದಿದ್ದಾರೆ.

’ಯಾವ ಬದಲಾವಣೆಗಳೂ ಆಗುವುದಿಲ್ಲ. ಎಲ್ಲವೂ ಮೊದಲಿನಂತೆಯೇ ಇರಲಿದೆ. ವಿರಾಟ್ ಯಾವಾಗಲೂ ನನ್ನ ನಾಯಕ. ಅವರು ವಿಶ್ರಾಂತಿಯಲ್ಲಿದ್ದಾಗ ಮತ್ತು ತಂಡಕ್ಕೆ ಅಗತ್ಯವಿದ್ದಾಗ ನನಗೆ ವಹಿಸಿದ ಹೊಣೆಯನ್ನು ನಿಭಾಯಿಸುತ್ತೇನೆ. ಉಪನಾಯಕನಾಗಿ ನನ್ನ ಕರ್ತವ್ಯ ಪಾಲಿಸುತ್ತೇನೆ‘ ಎಂದರು.

’ನಾಯಕನಾಗುವುದು ದೊಡ್ಡ ವಿಷಯವಲ್ಲ. ಆದರೆ ಆ ಸ್ಥಾನಕ್ಕೆ ನಾವು ಹೇಗೆ ನ್ಯಾಯ ಸಲ್ಲಿಸುತ್ತೇವೆ ಎನ್ನುವುದು ಮುಖ್ಯ. ನಾಯಕತ್ವ ಮತ್ತು ನಮ್ಮ ಆಟದಿಂದ ತಂಡದ ಗೆಲುವಿಗೆ ಕೊಡುವ ಕಾಣಿಕೆ ಮುಖ್ಯವಾಗುತ್ತದೆ. ಇಲ್ಲಿಯವರೆಗೆ ನನ್ನ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇನೆ. ಭವಿಷ್ಯದಲ್ಲಿಯೂ ಇದೇ ರೀತಿಯಲ್ಲಿ ಸಾಧನೆ ಮಾಡುವ ಭರವಸೆ ಇದೆ‘ ಎಂದು ಮುಂಬೈಕರ್ ಹೇಳಿದರು.

ಅವರು ನಾಯಕತ್ವ ವಹಿಸಿದ ಐದು ಟೆಸ್ಟ್‌ಗಳಲ್ಲಿ ಭಾರತ ತಂಡವು ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ.

’ನನ್ನ ಮತ್ತು ವಿರಾಟ್ ನಡುವೆ ಅತ್ಯುತ್ತಮ ಸ್ನೇಹವಿದೆ. ನಾನು ಉತ್ತಮವಾಗಿ ಆಡಿದಾಗಲೆಲ್ಲ ವಿರಾಟ್ ಶ್ಲಾಘಿಸಿದ್ದಾರೆ. ನಾವಿಬ್ಬರೂ ಸ್ಮರಣೀಯ ಜೊತೆಯಾಟಗಳಲ್ಲಿ ಭಾಗಿಯಾಗಿದ್ದೇವೆ. ಭಾರತ ಮತ್ತು ವಿದೇಶಿ ಪಿಚ್‌ಗಳಲ್ಲಿ ಆಡಿದ್ದೇವೆ. ವಿರಾಟ್ ನಾಲ್ಕನೇ ಮತ್ತು ನಾನು ಐದನೇ ಕ್ರಮಾಂಕದಲ್ಲಿ ಆಡುತ್ತೇವೆ. ಅದರಿಂದಾಗಿ ಬಹಳಷ್ಟು ಜೊತೆಯಾಟಗಳಲ್ಲಿ ಭಾಗಿಯಾಗಿದ್ದೇವೆ‘ ಎಂದು ರಹಾನೆ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು