ಸೋಮವಾರ, ಫೆಬ್ರವರಿ 17, 2020
17 °C
ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದ ಬಾಂಗ್ಲಾದೇಶ

ಯುವ ವಿಶ್ವಕಪ್ | ಸೆಮಿಯಲ್ಲಿ ಸೋಲುಕಂಡ ಕಿವೀಸ್: ಭಾರತ–ಬಾಂಗ್ಲಾ ಫೈನಲ್ ಫೈಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಷೆಫ್‌ಸ್ಟ್ರೂಮ್‌: 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ ಅಂತರದಿಂದ ಗೆದ್ದ ಬಾಂಗ್ಲಾದೇಶ, ಇದೇ ಮೊದಲ ಸಲ ಫೈನಲ್‌ಗೆ ಪ್ರವೇಶ ಪಡೆಯಿತು. ಈಗಾಗಲೇ ಫೈನಲ್‌ ಪ್ರವೇಶಿಸಿರುವ ಭಾರತ, ಬಾಂಗ್ಲಾ ಬಳಗಕ್ಕೆ ಅಂತಿಮ ಸುತ್ತಿನಲ್ಲಿ ಸವಾಲು ನೀಡಲಿದೆ.

ಇಲ್ಲಿನ ಸೆನ್ವೆಸ್‌ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾ ನಾಯಕ ಅಕ್ಬರ್‌ ಅಲಿ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಬಾಂಗ್ಲಾ ಬೌಲರ್‌ಗಳು, ಕಿವೀಸ್‌ಗೆ ಎರಡನೇ ಓವರ್‌ನಲ್ಲೇ ಆಘಾತ ನೀಡಿದರು.

ಕೇವಲ 74 ರನ್‌ ಆಗುವಷ್ಟರಲ್ಲೇ ನ್ಯೂಜಿಲೆಂಡ್‌ನ ನಾಲ್ಕು ವಿಕೆಟ್‌ ಪತನವಾಗಿದ್ದವು. ಈ ವೇಳೆ ಜೊತೆಯಾದ ನಿಕೋಲಸ್‌ ಲಿಡ್ಸ್‌ಸ್ಟೋನ್‌ (44) ಹಾಗು ಬಿಡಬ್ಲ್ಯೂ ಗ್ರೀನಲ್‌ ಐದನೇ ವಿಕೆಟ್‌ಗೆ 67 ರನ್‌ ಸೇರಿಸಿ ಅಲ್ಪ ಚೇತರಿಕೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಉಳಿದವರದಿಂದ ಉತ್ತಮ ಆಟ ಮೂಡಿ ಬರಲಿಲ್ಲ.

ಇದನ್ನೂ ಓದಿ: ಪಾಕ್ ವಿರುದ್ಧ 10 ವಿಕೆಟ್ ಜಯ: ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ವಿಕೆಟ್‌ ಕೊಡದೆ ಆಡಿದ ಗ್ರೀನಲ್‌ 83 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ ಅಜೇಯ 75 ರನ್‌ ಗಳಿಸಿದರು. ಅವರ ಆಟದ ನೆರವಿನಿಂದ ಕಿವೀಸ್‌ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 211 ರನ್‌ ಕಲೆ ಹಾಕಿತು.

ಈ ಮೊತ್ತದೆದುರು ನಿರಾಯಾಸವಾಗಿ ಬ್ಯಾಟ್‌ ಬೀಸಿದ ಅಲಿ ಪಡೆ ಇನ್ನೂ 35 ಎಸೆತಗಳು ಬಾಕಿ ಇರುವಂತೆಯೇ 215 ರನ್‌ ಗಳಿಸಿ ಗೆಲುವಿನ ಸಂಭ್ರಮ ಆಚರಿಸಿತು.

ಕೇವಲ 32 ರನ್‌ ಆಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡರೂ ಎದೆಗುಂದದೆ ಆಡಿದ ಮೊಹಮದ್‌ವುಲ್‌ ಹಸನ್‌ ಜಾಯ್‌ ಹಾಗೂ ತೊವ್ಹಿದ್‌ ಹ್ರಿದೋಯ್‌ (40) ಮೂರನೇ ವಿಕೆಟ್‌ಗೆ 68 ರನ್‌ ಸೇರಿಸಿರು. 127 ಎಸೆತಗಳನ್ನು ಎದುರಿಸಿದ ಜಾಯ್‌ 13 ಬೌಂಡರಿ ಸಹಿತ 100 ರನ್‌ ಗಳಿಸಿದರು.

ಕೊನೆಯಲ್ಲಿ ಶಹಾದತ್‌ ಹೊಸ್ಸೈನ್‌ (40) ಹಾಗೂ ಶಮಿನ್‌ ಹೊಸ್ಸೈನ್‌ (5) ಬಾಂಗ್ಲಾ ತಂಡಕ್ಕೆ ಜಯದ ರನ್‌ ಕೂಡಿಸಿದರು.

ಭಾರತ–ಬಾಂಗ್ಲಾ ಫೈನಲ್‌ ಫೈಟ್‌
ಭಾನುವಾರ ಇದೇ ಮೈದಾನದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತದ ಜೊತೆ ಪ್ರಶಸ್ತಿಗಾಗಿ ಸೆಣಸಲಿದೆ. 

ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಭಾರತ, ಸತತ ಮೂರನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಭಾರತ ನಾಲ್ಕು ಬಾರಿ ಚಾಂಪಿಯನ್‌ ಆಗಿದೆ. ಬಾಂಗ್ಲಾ ಫೈನಲ್‌ ತಲುಪಿರುವುದು ಇದೇ ಮೊದಲು.

ಬಾಂಗ್ಲಾದೇಶದ ಫೈನಲ್‌ ಹಾದಿ
ಜಿಂಬಾಬ್ವೆ ವಿರುದ್ಧ 9 ವಿಕಟ್‌ ಜಯ (ಗುಂಪು ಹಂತ)
ಸ್ಕಾಟ್ಲೆಂಡ್‌ ವಿರುದ್ಧ 7 ವಿಕೆಟ್‌ ಜಯ (ಗುಂಪು ಹಂತ)
ಪಾಕಿಸ್ತಾನ ವಿರುದ್ಧ ಪಂದ್ಯ ರದ್ಧು (ಗುಂಪು ಹಂತ)
ದಕ್ಷಿಣ ಆಫ್ರಿಕಾ ವಿರುದ್ಧ 104 ರನ್ ಜಯ (ಕ್ವಾರ್ಟರ್‌ ಫೈನಲ್‌)
ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ ಜಯ (ಸೆಮಿಫೈನಲ್‌)

ಭಾರತದ ಫೈನಲ್‌ ಹಾದಿ
ಶ್ರೀಲಂಕಾ ವಿರುದ್ಧ 90 ರನ್‌ ಜಯ (ಗುಂಪು ಹಂತ)
ಜಪಾನ್‌ ವಿರುದ್ಧ 10 ವಿಕೆಟ್‌ ಜಯ (ಗುಂಪು ಹಂತ)
ನ್ಯೂಜಿಲೆಂಡ್‌ ವಿರುದ್ಧ 44 ರನ್‌ ಜಯ (ಗುಂಪು ಹಂತ)
ಆಸ್ಟ್ರೇಲಿಯಾ ವಿರುದ್ಧ 74 ರನ್ ಜಯ (ಕ್ವಾರ್ಟರ್‌ ಫೈನಲ್‌)
ಪಾಕಿಸ್ತಾನ ವಿರುದ್ಧ 10 ವಿಕೆಟ್‌ ಜಯ (ಸೆಮಿಫೈನಲ್‌)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು