ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಜಯ ಭಾರತ ತಂಡದ ಮಹಾಸಾಧನೆ: ಮುಖ್ಯ ಕೋಚ್‌ ರವಿಶಾಸ್ತ್ರಿ

Last Updated 29 ಡಿಸೆಂಬರ್ 2020, 15:52 IST
ಅಕ್ಷರ ಗಾತ್ರ

ಮೆಲ್ಬರ್ನ್: ಅಡಿಲೇಡ್‌ನಲ್ಲಿ ಅನುಭವಿಸಿದ್ದ ಮಹಾಪತನದ ನಂತರ ಇಲ್ಲಿ ಈ ರೀತಿ ಪುಟಿದೆದ್ದಿರುವುದು ಭಾರತ ತಂಡದ ಮಹಾಸಾಧನೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಬಣ್ಣಿಸಿದ್ದಾರೆ.

’ಈ ಗೆಲುವು ಕೇವಲ ಭಾರತದ ಮಟ್ಟಿಗೆ ಅಲ್ಲ. ಇಡೀ ವಿಶ್ವ ಕ್ರಿಕೆಟ್‌ನಲ್ಲಿಯೇ ಐತಿಹಾಸಿಕವಾದುದು. ತಂಡದ ಎಲ್ಲ ಆಟಗಾರರೂ ತೋರಿದ ಸಂಘಟಿತ ಸಾಮರ್ಥ್ಯ ಇದಕ್ಕೆ ಕಾರಣ‘ ಎಂದು ಶಾಸ್ತ್ರಿ ಮಂಗಳವಾರ ಪಂದ್ಯದ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಹೇಳಿದರು.

’ಹೋದ ಪಂದ್ಯದಲ್ಲಿ ಕೇವಲ ಮೂರು ದಿನಗಳಲ್ಲಿ ಸೋತಿದ್ದೆವು. ಎರಡನೇ ಇನಿಂಗ್ಸ್‌ನಲ್ಲಿ 36 ರನ್ ಮಾತ್ರ ಗಳಿಸಿದ್ದ ತಂಡವು ಎರಡನೇ ಪಂದ್ಯದಲ್ಲಿ ಪುಟಿದೆದ್ದು ತಿರುಗೇಟು ನೀಡಿರುವುದು ಅಸಾಧಾರಣ ಮನೋಬಲದ ಪ್ರತೀಕ‘ ಎಂದು ಶ್ಲಾಘಿಸಿದ್ದಾರೆ.

’ಭಾರತ ಕ್ರಿಕೆಟ್ ತಂಡವು ತನ್ನ ಲಕ್ಷಾಂತರ ಅಭಿಮಾನಿಗಳಿಗೆ ಈ ಗೆಲುವನ್ನು ಹೊಸ ವರ್ಷಕ್ಕೆ ಕಾಣಿಕೆಯಾಗಿ ನೀಡಿದೆ. ಅವರೆಲ್ಲರ ಮುಖದಲ್ಲಿ ಸಂತಸ ಮೂಡಿದರೆ ಅದೇ ಸಾರ್ಥಕ ಭಾವ ನಮಗೆ‘ ಎಂದು ಹೇಳಿದರು.

’ವಿರಾಟ್ ಕೊಹ್ಲಿ ನಾಯಕತ್ವದ ತಂಡವು ಯಾವಾಗಲೂ ನಿರ್ಭಯವಾದ ಕ್ರಿಕೆಟ್ ಆಡುತ್ತದೆ. ಮೂರ್ನಾಲ್ಕು ವರ್ಷಗಳಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ದೃತಿಗೆಡದ ಆಟ ತಂಡದ್ದಾಗಿದೆ. ಇವತ್ತು ಅಜಿಂಕ್ಯ ರಹಾನೆ ಅದನ್ನೇ ಮುಂದುವರಿಸಿದ್ದಾರೆ‘ ಎಂದು ಹೇಳಿದರು.

’ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಉತ್ತಮವಾಗಿತ್ತು. ಭರವಸೆ ಮೂಡಿಸಿರುವ ಯುವ ಆಟಗಾರ. ಮೊಹಮ್ಮದ್ ಸಿರಾಜ್ ಕೂಡ ಶಿಸ್ತಿನಿಂದ ಬೌಲಿಂಗ್‌ ಮಾಡಿದ್ದಾರೆ‘ ಎಂದು ಶಾಸ್ತ್ರಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT