ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಸರಣಿ: ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಗೆ ಮಣಿದ ಪಾಕಿಸ್ತಾನ

Last Updated 23 ಏಪ್ರಿಲ್ 2021, 15:20 IST
ಅಕ್ಷರ ಗಾತ್ರ

ಹರಾರೆ, ಜಿಂಬಾಬ್ವೆ: ಲೂಕ್ ಜೊಂಗ್ವೆ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಜಿಂಬಾಬ್ವೆ ತಂಡ ಪಾಕಿಸ್ತಾನ ಎದುರಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಜಯ ಗಳಿಸಿತು.

ಮೊದಲ ಪಂದ್ಯದಲ್ಲಿ ಸೋತಿದ್ದ ಜಿಂಬಾಬ್ವೆ ಶುಕ್ರವಾರ ನಡೆದ ಹಣಾಹಣಿಯಲ್ಲಿ 19 ರನ್‌ಗಳಿಂದ ಪ್ರವಾಸಿ ತಂಡವನ್ನು ಮಣಿಸಿ ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿತು.

ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆರಿಸಿಕೊಂಡಿತು. ಆತಿಥೇಯರು ಒಂಬತ್ತು ವಿಕೆಟ್ ಕಳೆದುಕೊಂಡು 118 ರನ್ ಗಳಿಸಿದರು. 34 ರನ್ ಕಲೆ ಹಾಕಿದ ತಿನಾಶೆ ಕಮುನುಕನ್ವೆ ಏಕಾಂಗಿ ಹೋರಾಟ ನಡೆಸಿದರು.

ಸಾಧಾರಣ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ರಿಜ್ವಾನ್ ಅವರನ್ನು ಬೇಗನೇ ಕಳೆದುಕೊಂಡಿತು. ಬಾಬರ್ ಆಜಂ ಏಕಾಂಗಿಯಾಗಿ ತಂಡದ ಇನಿಂಗ್ಸ್‌ ಮನ್ನಡೆಸಲು ಪ್ರಯತ್ನಿಸಿದರು. ಆದರೆ 19.5 ಓವರ್‌ಗಳಲ್ಲಿ 99 ರನ್‌ಗಳಿಗೆ ತಂಡ ಆಲೌಟಾಗಿ ಸೋಲೊಪ್ಪಿಕೊಂಡಿತು.

ರಿಜ್ವಾನ್ ಮತ್ತು ಆಜಂ ವಿಕೆಟ್ ಉರುಳಿಸಿದ ಮಧ್ಯಮ ವೇಗಿ ಜೊಂಗ್ವೆ ಕೊನೆಯಲ್ಲಿ ಹ್ಯಾರಿಸ್ ರವೂಫ್ ಮತ್ತು ಅರ್ಷದ್ ಇಕ್ಬಾಲ್ ಅವರನ್ನೂ ವಾಪಸ್ ಕಳುಹಿಸಿದರು. ಈ ಮೂಲಕ 18 ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಅವರ ಪಾಲಾದವು. ರಯಾನ್ ಬರ್ಲ್‌, ಬ್ಲೆಸಿಂಗ್ ಮುಜರಬಾನಿ ಮತ್ತು ರಿಚರ್ಡ್ ಗರಾವ ಕೂಡ ಬೌಲಿಂಗ್‌ನಲ್ಲಿ ಮಿಂಚಿದರು.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ 11 ರನ್‌ಗಳಿಂದ ಜಯ ಗಳಿಸಿತ್ತು. ಕೊನೆಯ ಪಂದ್ಯ ಭಾನುವಾರ ನಡೆಯಲಿದ್ದು ಸತತ ಎರಡು ಟಿ20 ಸರಣಿ ಗೆಲುವಿನ ಗುರಿಯೊಂದಿಗೆ ಪಾಕಿಸ್ತಾನ ಕಣಕ್ಕೆ ಇಳಿಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದು ತಂಡ ಇಲ್ಲಿಗೆ ಬಂದಿತ್ತು.

ಸಂಕ್ಷಿಪ್ತ ಸ್ಕೋರು
ಜಿಂಬಾಬ್ವೆ:
20 ಓವರ್‌ಗಳಲ್ಲಿ 9ಕ್ಕೆ 118 (ತಿನಾಶೆ ಕಮುನುಕನ್ವೆ 34, ಮರುಮಾನಿ 13, ಮಧೆವೆರೆ 16, ಚಕಾಬ್ವ 18, ಮುಸಕಂಡ 13; ಮೊಹಮ್ಮದ್ ಹಸ್ನಾನಿ 19ಕ್ಕೆ2, ಫಹೀಂ ಅಶ್ರಫ್‌ 10ಕ್ಕೆ1, ಅರ್ಷದ್ ಇಕ್ಬಾಲ್ 16ಕ್ಕೆ1, ಹ್ಯಾರಿಸ್ ರವೂಫ್ 10ಕ್ಕೆ1, ಉಸ್ಮಾನ್ ಖಾದಿರ್ 28ಕ್ಕೆ1, ಡ್ಯಾನಿಶ್ ಅಜೀಜ್ 29ಕ್ಕೆ2)
ಪಾಕಿಸ್ತಾನ: 19.5 ಓವರ್‌ಗಳಲ್ಲಿ 99 (ಮೊಹಮ್ಮದ್ ರಿಜ್ವಾನ್ 13, ಬಾಬರ್ ಆಜಂ 41, ಡ್ಯಾನಿಶ್ ಅಜೀಜ್ 22; ಮುಜರಬಾನಿ 24ಕ್ಕೆ1, ಗರಾವ 10ಕ್ಕೆ1, ಲೂಕ್ ಜೊಂಗ್ವೆ 18ಕ್ಕೆ4, ಬರ್ಲ್‌ 21ಕ್ಕೆ2)
ಫಲಿತಾಂಶ: ಜಿಂಬಾಬ್ವೆಗೆ 19 ರನ್‌ಗಳ ಜಯ; ಮೂರು ಪಂದ್ಯಗಳ ಸರಣಿ 1–1ರಲ್ಲಿ ಸಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT