ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರದ ಪಾಕಿಸ್ತಾನದ 500ರ ಕನಸು; ಬಾಂಗ್ಲಾಗೆ 316 ರನ್‌ ಗುರಿ

ವಿಶ್ವಕಪ್ ಕ್ರಿಕೆಟ್
Last Updated 5 ಜುಲೈ 2019, 14:02 IST
ಅಕ್ಷರ ಗಾತ್ರ

ಲಂಡನ್‌: ಬಾಂಗ್ಲಾ ವಿರುದ್ಧ 500 ರನ್‌ ಸಿಡಿಸಿ ಪವಾಡ ರೀತಿಯಲ್ಲಿ ಬೃಹತ್‌ ಅಂತರದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಕಡಿವಾಣ ಹಾಕುವಲ್ಲಿ ಬಾಂಗ್ಲಾ ಹುಲಿಗಳು ಸಫಲರಾಗಿದ್ದಾರೆ. ಇಮಾಮ್‌ ಮತ್ತು ಬಾಬರ್‌ ಭರ್ಜರಿ ಜತೆಯಾಟದಿಂದಾಗಿ ತಂಡ ಉತ್ತಮ ಮೊತ್ತ ಕಲೆಹಾಕಿದೆ.

ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ 315ರನ್‌ಗಳಿಸಿದೆ. ಆರಂಭದಲ್ಲಿಯೇ ಫಖರ್‌ ಜಮಾನ್‌ ವಿಕೆಟ್‌ ಕಬಳಿಸುವ ಮೂಲಕ ಮೊಹಮ್ಮದ್‌ ಸೈಫುದ್ದೀನ್‌ ಪಾಕಿಸ್ತಾನಕ್ಕೆ ಆಘಾತ ನೀಡಿದರು. ಆದರೆ, ಇಮಾಮ್‌ ಉಲ್‌ ಹಕ್‌ (100) ಮತ್ತು ಬಾಬರ್‌ ಜಮಾನ್‌(96) ನಡೆಸಿದ ಉತ್ತಮ ಜತೆಯಾಟ ಬಾಂಗ್ಲಾ ಪಾಲಿಗೆ ಕಗ್ಗಂಟಾಯಿತು.

ಕ್ಷಣಕ್ಷಣದ ಸ್ಕೋರ್:https://bit.ly/2FS8vJ6

99 ಎಸೆತಗಳಲ್ಲಿ 100 ರನ್‌ ಸಿಡಿಸಿದ ಇಮಾನ್‌ಗೆ ಇದು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಶತಕ. ಪಾಕಿಸ್ತಾನದ ಪರ ವಿಶ್ವಕಪ್‌ನಲ್ಲಿ ಶತಕ ದಾಖಲೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು. 8 ಬೌಂಡರಿ ಬಾರಿಸಿದ್ದ ಅವರು ಹಿಟ್‌ ವಿಕೆಟ್‌ ಆಗಿ ಆಟ ಮುಗಿಸಿದರು.

ಬಿರುಸಿನ ಆಟ ಆಡಿದ ಬಾಬರ್‌ 11 ಬೌಂಡರಿಗಳೊಂದಿಗೆ ಶತಕದ ಅಂಚಿನಲ್ಲಿದ್ದಾಗ ಸೈಫುದ್ದೀನ್‌ ಎಸೆತದಲ್ಲಿ ಎಲ್‌ಬಿಡಬ್ಯುಗೆ ಒಳಗಾದರು. 42ನೇ ಓವರ್‌ ವರೆಗೂ ಉತ್ತಮ ಲಯದಲ್ಲಿದ್ದ ಪಾಕಿಸ್ತಾನದ ಮೇಲೆ ಬಾಂಗ್ಲಾ ಬೌಲರ್‌ಗಳ ಒತ್ತಡ ಆರಂಭವಾಯಿತು. ಒಂದರ ಹಿಂದೆ ಮತ್ತೊಂದು ವಿಕೆಟ್‌ ಉರುಳಲು ಶುರುವಾಯಿತು. ಇದರಿಂದಾಗಿ ಬೃಹತ್‌ ಮೊತ್ತ ದಾಖಲಿಸುವ ನಿರೀಕ್ಷೆ ಹುಸಿಯಾಯಿತು.

ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಮದ್‌ ವಾಸಿಮ್‌(43) ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. 26ಎಸೆತಗಳಲ್ಲಿ 1 ಸಿಕ್ಸರ್, 6ಬೌಂಡರಿ ಸಹಿತ 43ರನ್‌ ದಾಖಲಿಸುವ ಮೂಲಕ ತಂಡದ ಮೊತ್ತ 300 ರನ್‌ ದಾಟಲು ಆಸರೆಯಾದರು.

ಮೊಹಮ್ಮದ್‌ ಹಫೀಜ್‌(27) ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಹೆಚ್ಚಿನ ರನ್‌ ಹರಿಯಲಿಲ್ಲ. ಬಾಂಗ್ಲಾ ಪರ ಮೊಹಮ್ಮದ್‌ ಸೈಫುದ್ದೀನ್‌ 3 ವಿಕೆಟ್‌ ಹಾಗೂ ಮುಸ್ತಫಿಜುರ್‌ ರೆಹಮಾನ್‌ 5ವಿಕೆಟ್‌ ಪಡೆದರು. ಮೆಹದಿ ಹಸನ್‌ 1 ವಿಕೆಟ್‌ ಗಳಿಸಿದರು.

ಭಾರತ ತಂಡವು ಇಂಗ್ಲೆಂಡ್‌ ಎದುರು ಸೋತ ದಿನವೇ ಪಾಕ್‌ ತಂಡದ ಸೆಮಿಫೈನಲ್‌ ಹಾದಿ ದುರ್ಗಮವಾಗಿತ್ತು. ಬುಧವಾರ ಇಂಗ್ಲೆಂಡ್‌ ತಂಡವು ನ್ಯೂಜಿಲೆಂಡ್‌ ಎದುರು ಗೆದ್ದ ನಂತರ ಈ ದಾರಿ ಬಹುತೇಕ ಮುಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT