ಶನಿವಾರ, ಫೆಬ್ರವರಿ 29, 2020
19 °C

ಏಷ್ಯಾಕಪ್ ಆಡಲು ಭಾರತ ಬರದಿದ್ದರೆ, ನಾವು ವಿಶ್ವಕಪ್‌ನಲ್ಲಿ ಭಾಗವಹಿಸಲ್ಲ: ಪಾಕ್

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ನವದಹೆಲಿ: ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಲು ಭಾರತವು ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಾಸೀಂ ಖಾನ್‌ ಹೇಳಿದ್ದಾರೆ.

ಸದ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಟಿ20 ಮತ್ತು ಟೆಸ್ಟ್‌ ಸರಣಿಗಳಿಗೆ ತಂಡ ಕಳುಹಿಸಲು ಮೊದಲು ನಿರಾಕರಿಸಿದ್ದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಬಳಿಕ ಒಪ್ಪಿಗೆ ಸೂಚಿಸಿತ್ತು. ಈ ಬೆಳವಣಿಗೆ ಬಳಿಕ ಇದೇ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶಕ್ಕೆ ಬಿಟ್ಟುಕೊಡಲಾಗಿದೆ ಎಂಬ ವದಂತಿ ಕೇಳಿಬಂದಿತ್ತು.

ಮಾತ್ರವಲ್ಲದೆ, ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡದಿರುವ ತನ್ನ ನಿರ್ಧಾರವನ್ನು ಬಿಸಿಸಿಐ ಸಡಿಲಿಸಿಲ್ಲ. ಅದರ ಪರಿಣಾಮವಾಗಿ ಪಾಕಿಸ್ತಾನವು ಏಷ್ಯಾಕಪ್‌ ಆತಿಥ್ಯ ವಹಿಸುವ ಹಕ್ಕನ್ನು ಕಳೆದುಕೊಂಡಿದೆ ಎಂಬ ಸುದ್ದಿಯೂ ಕಳೆದವಾರ ಹರಿದಾಡಿತ್ತು.

ಈ ಕುರಿತ ಪ್ರಶ್ನೆಗೆ  ‘ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಏಷ್ಯಾಕಪ್‌ ಆಯೋಜನೆಯ ಹಕ್ಕನ್ನು ನಮಗೆ ನೀಡಿದೆ. ಅದನ್ನು ನಾವೇಕೆ ಬೇರೆಯವರಿಗೆ ವರ್ಗಾಯಿಸಬೇಕು. ಹಾಗೆ ವರ್ಗಾಯಿಸುವ ಅಧಿಕಾರ ನಮಗಿಲ್ಲ’ ಎಂದು ವಾಸೀಂ ಹೇಳಿದ್ದಾರೆ. ಮುಂದವರಿದು, ‘ಈ ವರ್ಷದ ಸೆ‍ಪ್ಟೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್‌ ಟ್ವೆಂಟಿ–20 ಟೂರ್ನಿಯಿಂದ ಭಾರತ ಹಿಂದೆ ಸರಿದರೆ, 2021ರಲ್ಲಿ ಆ ರಾಷ್ಟ್ರದಲ್ಲಿ ನಿಗದಿಯಾಗಿರುವ ವಿಶ್ವ ಟ್ವೆಂಟಿ–20 ಟೂರ್ನಿಗೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

2009ರ ಮಾರ್ಚ್‌ನಲ್ಲಿ ಟೆಸ್ಟ್ ಪಂದ್ಯವಾಡಲು ಲಾಹೋರ್‌ಗೆ ತೆರಳುತ್ತಿದ್ದ ವೇಳೆ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಅದಾದ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ಬೇರೆ ರಾಷ್ಟ್ರಗಳ ತಂಡಗಳು ನಿರಾಕರಿಸಿದ್ದವು. ಇದರಿಂದಾಗಿ ಹಲವು ಟೂರ್ನಿಗಳ ಆತಿಥ್ಯ ಪಾಕ್‌ ಕೈತಪ್ಪಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ತೆರಳಿ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಿತ್ತು. ಮಾತ್ರವಲ್ಲದೆ ಕ್ರಿಕೆಟ್‌ ಆಡಲು ಪಾಕಿಸ್ತಾನ ಸುರಕ್ಷಿತ ಎಂದು ಹೇಳಿಕೊಂಡಿತ್ತು.

ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವವರೆಗೆ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ 2008ರ ನಂತರ ಭಾರತ ತಂಡ ಪಾಕ್ ಪ್ರವಾಸ ಕೈಗೊಂಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು