ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವಿದೇಶಿ ಅಂಗಳದಲ್ಲಿ ಭಾರತಕ್ಕೆ ’ಪಿಂಕ್ ಬಾಲ್ ಟೆಸ್ಟ್‘

Last Updated 15 ಡಿಸೆಂಬರ್ 2020, 9:21 IST
ಅಕ್ಷರ ಗಾತ್ರ

‘ಹೊನಲು ಬೆಳಕಿನಲ್ಲಿ ಟೆಸ್ಟ್ ಆಡುವಂತೆ ಯಾರೂ ನಮ್ಮ ತಲೆಗೆ ಬಂದೂಕು ಇಟ್ಟು ಬೆದರಿಕೆ ಹಾಕಲು ಸಾಧ್ಯವಿಲ್ಲ. ಪಿಂಕ್‌ ಬಾಲ್ ಬಗ್ಗೆ ಇರುವ ಗೊಂದಲ ನಿವಾರಣೆಯಾಗಬೇಕು. ಡ್ಯೂಕ್ ಮತ್ತು ಕುಕಬುರಾ ಚೆಂಡುಗಳ ಗೊಂದಲ ಬಗೆಹರಿಯಬೇಕು’ –

ಎರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತಾಧಿಕಾರಿಗಳ ಸಮಿತಿಯ ಮುಖ್ಯಸ್ಥ ವಿನೊದ್ ರಾಯ್ ಹೇಳಿದ್ದ ಮಾತಿದು. 2015ರಿಂದಲೂ ಪಿಂಕ್ ಬಾಲ್ ಟೆಸ್ಟ್‌ಗಳಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಭಾರತದ ಧೋರಣೆಯನ್ನು ಅವರು ಧ್ವನಿಸಿದ್ದರು. ಆದರೆ ಹೋದ ವರ್ಷ ಸೌರವ್ ಗಂಗೂಲಿ ಬಳಗವು ಬಿಸಿಸಿಐ ಆಡಳಿತ ಚುಕ್ಕಾಣಿ ಹಿಡಿದ ಕೂಡಲೇ ಮಾಡಿದ ಮೊದಲ ಕೆಲಸವೇ ಭಾರತವನ್ನು ಪಿಂಕ್ ಬಾಲ್ ಟೆಸ್ಟ್‌ ಆಡಿಸಲು ಸಿದ್ಧಗೊಳಿಸಿದ್ದು. ಹೋದ ನವೆಂಬರ್‌ನಲ್ಲಿ ತಮ್ಮ ತವರು ಕೋಲ್ಕತ್ತದ ಈಡನ್ ಗಾರ್ಡನ್ ಅಂಗಳದಲ್ಲಿಯೇ ಬಾಂಗ್ಲಾ ಮತ್ತು ಭಾರತ ನಡುವಣ ಹೊನಲು–ಬೆಳಕಿನ ಟೆಸ್ಟ್ ಪಂದ್ಯವನ್ನು ಅದ್ದೂರಿಯಾಗಿ ನಡೆಸಿಬಿಟ್ಟರು ಗಂಗೂಲಿ. ಅದಕ್ಕಾಗಿ 72 ಎಸ್‌ಜಿ. ಚೆಂಡುಗಳನ್ನೂ ತರಿಸಿದ್ದರು. ಅದೀಗ ಇತಿಹಾಸ.

ಈಗ ಭಾರತ ತಂಡವು ವಿದೇಶಿ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ನಸುಗೆಂಪು ಚೆಂಡಿನಲ್ಲಿ ಟೆಸ್ಟ್‌ ಆಡಲು ಸಿದ್ಧವಾಗಿದೆ. ಇದೇ 17ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎದುರು ಹೊನಲು ಬೆಳಕಿನ ಟೆಸ್ಟ್ ಆಡಲಿದೆ. ಹೋದ ನೆವೆಂಬರ್‌ನಲ್ಲಿ ಕೋಲ್ಕತ್ತದಲ್ಲಿ ಬಾಂಗ್ಲಾ ಎದುರು ಸುಲಭವವಾಗಿ ಜಯಿಸಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಜಯ ಅಷ್ಟು ಸುಲಭವಲ್ಲ. ಏಕೆಂದರೆ, ಆಸ್ಟ್ರೇಲಿಯಾ ತಂಡ ಐದು ವರ್ಷಗಳಿಂದ ಪಿಂಕ್ ಬಾಲ್‌ ಟೆಸ್ಟ್ ಆಡುತ್ತಿದೆ. ಆದ್ದರಿಂದ ವಿರಾಟ್ ಕೊಹ್ಲಿ ಬಳಗಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ.

ಮೂರು ವರ್ಷಗಳ ಹಿಂದೆ ಬಿಸಿಸಿಐ ಕೂಡ ಹಗಲು ರಾತ್ರಿ ಪಂದ್ಯಗಳ ಪ್ರಯೋಗ ಮಾಡಿತ್ತು. ದುಲೀಪ್ ಟ್ರೋಫಿ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಿಸಿತ್ತು. ಆಗ ಆಡಿದ್ದ ಭಾರತ ತಂಡದ ಆಟಗಾರರು ಪಿಂಕ್ ಬಾಲ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಮುಸ್ಸಂಜೆಯ ಇಬ್ಬನಿಯಿಂದಾಗಿ ಚೆಂಡಿನ ಮೇಲೆ ಹಿಡಿತ ಕಷ್ಟವೆಂಬುದು ಬಹಳಷ್ಟು ಬೌಲರ್‌ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. 90 ಓವರ್‌ಗಳ ಆಟವಾದ ಕಾರಣ, ಆಡಿದಂತೆ ಚೆಂಡಿನ ಬಣ್ಣ ಮಾಸುವ ಬಗ್ಗೆಯೂ ದೂರುಗಳಿದ್ದವು.

ಆ ಪಂದ್ಯದಲ್ಲಿ ಕನ್ನಡಿಗ ಮಯಂಕ್ ಅಗರವಾಲ್, ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಮತ್ತು ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಆಡಿದ್ದರು. ಇವರೆಲ್ಲರೂ ನಂತರ ಬಾಂಗ್ಲಾ ವಿರುದ್ಧದ ಕೋಲ್ಕತ್ತ ಟೆಸ್ಟ್‌ನಲ್ಲಿಯೂ ಕಣಕ್ಕಿಳಿದಿದ್ದರು. ಆಗ ಪಿಂಕ್ ಬಾಲ್ ಬಗ್ಗೆ ವಿರಾಟ್ ಕೊಹ್ಲಿಯವರು, ’ಹಾಕಿ ಚೆಂಡಿನಂತೆ ತುಸು ಭಾರವಾಗಿದೆ‘ ಎಂದಿದ್ದರು.

ಆದರೆ ಕೊರೊನಾ ಕಾಲಘಟ್ಟದ ಬೇರೆ ಬೇರೆ ನಿಯಮಗಳು ಮತ್ತು ವಾತಾವರಣದ ನಡುವೆ ವಿದೇಶಿ ಅಂಗಳದಲ್ಲಿ ಆಡುವುದು ಭಾರತಕ್ಕೆ ನಿಜವಾದ ’ಟೆಸ್ಟ್‘ ಆಗಲಿದೆ. ಮೊದಲಿನಿಂದಲೂ ಚೆಂಡಿನ ಬಣ್ಣ, ತೂಕದ ಬಗ್ಗೆ ವಿರೋಧ ಮಾಡುತ್ತಿದ್ದ ಭಾರತದ ಒತ್ತಾಯಕ್ಕೆ ಏನೇನು ಮಾರ್ಪಾಟುಗಳಾಗಿವೆ ಎಂಬುದನ್ನು ನೋಡಬೇಕಿದೆ.

ಹೊನಲು ಬೆಳಕು ಟೆಸ್ಟ್‌ನ ಇತಿಹಾಸ: ಹಾಗೆ ನೋಡಿದರೆ ಹೊನಲು–ಬೆಳಕಿನ ಟೆಸ್ಟ್‌ ಪಂದ್ಯದ ಪರಿಕಲ್ಪನೆ ಹೊಸದೇನಲ್ಲ. 1952ರ ಆಗಸ್ಟ್ 11ರಂದು ಇಂಗ್ಲೆಂಡ್‌ನಲ್ಲಿ ಹಗಲು–ರಾತ್ರಿ ಪ್ರಥಮ ದರ್ಜೆ ಪಂದ್ಯ ನಡೆದಿತ್ತು. ಅದನ್ನು ನೋಡಲು ಏಳು ಸಾವಿರಕ್ಕೂ ಹೆಚ್ಚು ಜನ ಪ್ರೇಕ್ಷಕರು ಸೇರಿದ್ದರಂತೆ.

‘ಅಭಿಮಾನಿ ಪ್ರೇಕ್ಷಕರೇ ನಿಮ್ಮ ಕಣ್ಣುಗಳು ಚೆಂಡಿನ ಮೇಲೆಯೇ ನೆಟ್ಟಿರಲಿ. ಯಾವುದೇ ಸಂದರ್ಭದಲ್ಲಿ ನಿಮ್ಮತ್ತ ನುಗ್ಗಿ ಬರಬಹುದು. ಆದ್ದರಿಂದ ನಿಮ್ಮನ್ನು ನೀವು ಚೆಂಡಿನ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಜಾಗೃತರಾಗಿರಿ’ ಎಂಬ ಘೋಷಣೆಯನ್ನೂ ಆಗಿನ ಉದ್ಘೋಷಕರು ಪದೇ ಪದೇ ಮಾಡಿದ್ದು ದಾಖಲಾಗಿದೆ.

ಏಕೆಂದರೆ ಅಂದು ಬಳಕೆಯಾಗಿದ್ದ ಹೊನಲು ಬೆಳಕಿನ ವ್ಯವಸ್ಥೆ ಮತ್ತು ಕೆಂಪು ಚೆರಿ ಚೆಂಡು ನೋಟಕ್ಕೆ ಬೀಳುವುದು ಕಷ್ಟವಾಗಿತ್ತು. ಆ ಲೈಟ್ಸ್‌ಗಳನ್ನು ಹಾಕಿದ್ದು ಫುಟ್‌ಬಾಲ್ ಪಂದ್ಯಗಳಿಗಾಗಿ. ಅಂದು ಕೂಡ ಒಂದು ಫುಟ್‌ಬಾಲ್ ಪಂದ್ಯ ಮುಗಿದ ನಂತರ, ಜ್ಯಾಕ್ ಯಂಗ್ ಅವರ ಸಹಾಯಾರ್ಥ ಕ್ರಿಕೆಟ್ ಪಂದ್ಯ ನಡೆಸಲಾಗಿತ್ತು. ಮಿಡ್ಲೆಸೆಕ್ಸ್‌ ಕ್ರಿಕೆಟ್‌ ಕ್ಲಬ್ ಮತ್ತು ಅರ್ಸನಲ್ ಫುಟ್‌ಬಾಲ್ ಕ್ಲಬ್ ನಡುವಣ ಆ ಪಂದ್ಯ ಆರಂಭವಾದಾಗ ಸಂಜೆಯ ಸೂರ್ಯ ಪಶ್ಚಿಮದತ್ತ ಪಯಣಿಸಿದ್ದ.

ಆದರೂ ಬಿಬಿಸಿಯ ಮೂಲಕ ಪ್ರಸಾರವಾದ ಈ ಪಂದ್ಯ ಕ್ರೀಡಾಪ್ರೇಮಿಗಳ ವಲಯವನ್ನು ಆಕರ್ಷಿಸಿತು. ಆದರೆ, ಅಲ್ಲಿಯ :ದ ಟೈಮ್ಸ್‌ ಪತ್ರಿಕೆಯು ಮಾಡಿದ್ದ ಟೀಕೆಯೇ ಬಹಳ ವರ್ಷಗಳ ಕಾಲ ಚಾಲ್ತಿಯಲ್ಲಿ ಉಳಿಯಿತು. ‘ಟೆಸ್ಟ್ ಪಂದ್ಯದ ಇನಿಂಗ್ಸ್‌ ಅನ್ನು ಸಂಜೆ ಆರಂಭಿಸಿದರೆ ಆ ತಂಡದ ಕೊನೆಯ ವಿಕೆಟ್ ಬೀಳುವ ಹೊತ್ತಿಗೆ ನಸುಕಿನಲ್ಲಿ ಹಾಲು ಮಾರಾಟದ ಹುಡುಗ ಬಂದಿರುತ್ತಾನೆ’ ಎಂದು ಪತ್ರಿಕೆಯು ವ್ಯಂಗ್ಯ ಮಾಡಿತ್ತು.

ಆದರೆ ಇದಾಗಿ 67 ವರ್ಷಗಳ ನಂತರ ಕ್ರಿಕೆಟ್ ಲೋಕ ಅಗಾಧವಾಗಿ ಬೆಳೆಯಿತು. ಟೆಸ್ಟ್ ಪಂದ್ಯಗಳು ಐದು ದಿನಗಳಿಗೆ (ದಿನವೊಂದಿಕ್ಕೆ 90 ಓವರ್ ಗರಿಷ್ಠ) ಸೀಮಿತವಾದವು. ಏಕದಿನ, ಟ್ವೆಂಟಿ –20 ಮಾದರಿಗಳು ಜನಪ್ರಿಯವಾದವು. 1979ರಲ್ಲಿಯೇ ಏಕದಿನ ಪಂದ್ಯವನ್ನು ಮೊದಲ ಬಾರಿ ಹೊನಲು ಬೆಳಕಿನಲ್ಲಿ ಆಡಿಸಲಾಯಿತು. ಆದರೂ ಮೊದಲ ಹೊನಲು ಬೆಳಕಿನ ಟೆಸ್ಟ್ ನೋಡಲು 2015ರವರೆಗೂ ಕಾಯಬೇಕಾಯಿತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಬಾರಿ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಡಿದ್ದವು.

ಅದರ ನಂತರ 14 ಹಗಲು ರಾತ್ರಿ ಪಂದ್ಯಗಳು ಇತಿಹಾಸದ ಪುಟ ಸೇರಿದವು. ಆಸ್ಟ್ರೇಲಿಯಾ, ಪಾಕಿಸ್ತಾನ (ತಟಸ್ಥ ತಾಣದಲ್ಲಿ), ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್ ದೇಶಗಳು ಆತಿಥ್ಯ ವಹಿಸಿದವು. ಆದರೆ, ವಿಶ್ವ ಕ್ರಿಕೆಟ್‌ನ ದೊಡ್ಡಣ್ಣನೇ ಆಗಿರುವ ಭಾರತ ಮಾತ್ರ ಅದರ ಗೋಜಿಗೆ ಹೋಗಲಿಲ್ಲ.

ಟೆಸ್ಟ್‌ ಕ್ರಿಕೆಟ್‌ ನೋಡಲು ಕ್ರೀಡಾಂಗಣಕ್ಕೆ ಬರುವ ಜನರನ್ನು ಆಕರ್ಷಿಸಲು ಇಂತಹ ಪ್ರಯೋಗ ಅಗತ್ಯ ಎಂಬ ಚರ್ಚೆಗಳು ಕಳೆದ ಒಂದು ದಶಕದಿಂದ ನಡೆಯುತ್ತಿದೆ. ಟಿ20 ಅಬ್ಬರದಲ್ಲಿ ಟೆಸ್ಟ್ ಕ್ರಿಕೆಟ್ ಸೊಬಗು ಮರೆಯಾಗುವುದನ್ನು ತಪ್ಪಿಸಲು ಹಗಲು–ರಾತ್ರಿ ಪಂದ್ಯಗಳು ಅಗತ್ಯ ಎಂದು ಹಲವು ಹಿರಿಯ ಕ್ರಿಕೆಟಿಗರು ಹೇಳಿದ್ದಾರೆ. ಆದರೆ ವಿಪರ್ಯಾಸ ನೋಡಿ ಈಗ ಕೊರೊನಾ ಕಾಲದಲ್ಲಿ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ಕೊಡುವ ಕುರಿತು ಯೋಚಿಸಲಾಗುತ್ತಿದೆ. ಅಡಿಲೇಡ್ ಟೆಸ್ಟ್‌ಗೆ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯದ ಶೇ 50ರಷ್ಟು ಜನಕ್ಕೆ ಮಾತ್ರ ಅವಕಾಶ ಕೊಡುವ ಸಾಧ್ಯತೆ ಇದೆ. ಈಚೆಗೆ ನಡೆದ ಸೀಮಿತ ಓವರ್‌ಗಳ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅನುವು ಮಾಡಿಕೊಡಲಾಗಿತ್ತು. ಅದೇನೆ ಇರಲಿ; ಈ ಪಂದ್ಯದಲ್ಲಿ ಜಯಿಸಿದರೆ ಭಾರತ ತಂಡದ ಪ್ರತಿಷ್ಠೆ ಮತ್ತು ಗೌರವಗಳು ಮತ್ತಷ್ಟು ಉತ್ತುಂಗಕ್ಕೆ ಏರುವುದರಲ್ಲಿ ಅನುಮಾನವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT