ಭಾನುವಾರ, ಅಕ್ಟೋಬರ್ 25, 2020
28 °C

ಜೀವ ಸುರಕ್ಷಾ ನಿಯಮ ಉಲ್ಲಂಘನೆ: ತಂಡಗಳಿಗೆ ದೊಡ್ಡ ಮೊತ್ತದ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೊರೊನಾ ಪ್ರಸರಣ ತಡೆಗೆ ರೂಪಿಸಲಾಗಿರುವ ಜೀವ ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿದರೆ ಸುಮಾರು ಒಂದು ಕೋಟಿ ರೂಪಾಯಿ ದಂಡವನ್ನು ತಂಡಗಳು ತೆರಬೇಕಾಗಬಹುದು. ಅಷ್ಟೇ ಅಲ್ಲ ಪಾಯಿಂಟ್ಸ್‌ಗಳನ್ನು ಕಳೆದುಕೊಂಡು ಪ್ರಶಸ್ತಿ ಪೈಪೋಟಿಯಿಂದ ಹೊರಬೀಳುವ ಸಾಧ್ಯತೆಯೂ ಇದೆ.

ಯುಎಇಗೆ ಬರುವ ಆಟಗಾರರು  ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು ಎಂದು ಬಿಸಿಸಿಐ ಎಲ್ಲ ತಂಡಗಳಿಗೆ ಸೂಚಿಸಿದೆ. ಅದೇ ರೀತಿ ಜೀವ ಸುರಕ್ಷಾ ವಾತಾವರಣದಿಂದ ಹೊರಗೆ ಹೋಗಿ ಬರುವ ಆಟಗಾರರಿಗೂ ಈ ನಿಯಮ ಅನ್ವಯವಾಗುತ್ತದೆ.

ಮೊದಲ ಸಲದ ತಪ್ಪಿಗೆ  ಆಟಗಾರರಿಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗುವುದು. ಎರಡನೇ ಮತ್ತು ಮೂರನೇ ಬಾರಿ ತಪ್ಪೆಸಗಿದರೆ ಟೂರ್ನಿಯಿಂದಲೇ ಹೊರಹೋಗಬೇಕಾಗುತ್ತದೆ. ತಂಡಕ್ಕೆ ಆ ಆಟಗಾರನ ಬದಲಿಗೆ ಯಾರನ್ನೂ ತೆಗೆದುಕೊಳ್ಳಲು ಅನುಮತಿಯಿಲ್ಲ.

ಪ್ರತಿದಿನ ಪ್ರತಿ ಆಟಗಾರನೂ ತಮ್ಮ ಆರೋಗ್ಯ ಪಾಸ್‌ಪೋರ್ಟ್‌ ಗೆ ಮಾಹಿತಿ ನೀಡಬೇಕು. ಜಿಪಿಎಸ್ ಟ್ರ್ಯಾಕರ್ ಅನ್ನು ತಪ್ಪದೇ ಧರಿಸಬೇಕು. ನಿಗದಿತ ಸಮಯಕ್ಕೆ ಕೋವಿಡ್ –19 ಪರೀಕ್ಷೆಗಳಗಾಗಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ ₹ 60 ಸಾವಿರ ದಂಡ ವಿಧಿಸಲಾಗುತ್ತದೆ.

 ಐದು ದಿನಕ್ಕೊಮ್ಮೆ ಆಟಗಾರರು, ನೆರವು ಸಿಬ್ಬಂದಿಯನ್ನು ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳುವುದು ಕಡ್ಡಾಯ.

‘ಹೊರಗಿನ ವ್ಯಕ್ತಿಯನ್ನು ತಮ್ಮ ತಂಡದ ಆಟಗಾರರು ಅಥವಾ ಸಿಬ್ಬಂದಿಯೊಂದಿಗೆ ಭೇಟಿಯಾಗಲು ಜೀವ ಸುರಕ್ಷಾ ವಲಯದೊಳಗೆ ಅನುಮತಿ ನೀಡುವ ಫ್ರ್ಯಾಂಚೈಸಿಯು ಒಂದು ಕೋಟಿ ರೂಪಾಯಿ ದಂಡ ತೆರಬೇಕಾಗುತ್ತದೆ. ಇದು ಮೊದಲ ಸಲದ ತಪ್ಪಿಗಾಗಿ ವಿಧಿಸಲಾಗುವ ಶಿಕ್ಷೆ. ಎರಡನೇ ಬಾರಿ ತಪ್ಪು ಮರುಕಳಿಸಿದರೆ ತಂಡದ ಖಾತೆಯಲ್ಲಿರುವ ಅಂಕಗಳಲ್ಲಿ ಒಂದು ಪಾಯಿಂಟ್ ಕಡಿತಗೊಳಿಸಲಾಗುತ್ತದೆ. ಮೂರನೇ ಸಲ ತಪ್ಪು ಮಾಡಿದರೆ,  ಎರಡು ಪಾಯಿಂಟ್ಸ್‌ (ಒಂದು ಪಂದ್ಯದ ಜಯಕ್ಕೆ ಸಮ) ಕಡಿತ ಮಾಡಲಾಗುತ್ತದೆ.

ನಿಯಮ ಉಲ್ಲಂಘನೆಯನ್ನು ಪದೇ ಪದೇ ಮಾಡಿದರೆ ತಂಡಗಳನ್ನು ಬಿಸಿಸಿಐ ವಿಚಾರಣೆಗೊಳಪಡಿಸಲಿದೆ. ಟೂರ್ನಿ ಆರಂಭಕ್ಕೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಇಬ್ಬರು ಆಟಗಾರರೂ ಸೇರಿದಂತೆ 13 ಮಂದಿಗೆ ಕೋವಿಡ್ ದೃಢಪಟ್ಟಿತ್ತು. ನಂತರ ಅವರೆಲ್ಲರೂ ಗುಣಮುಖರಾಗಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು