ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವನೆ: ಪೃಥ್ವಿ ಶಾ ಅಮಾನತು

Last Updated 30 ಜುಲೈ 2019, 16:24 IST
ಅಕ್ಷರ ಗಾತ್ರ

ನವದೆಹಲಿ: ಯುವ ಕ್ರಿಕೆಟಿಗ ಪೃಥ್ವಿ ಶಾ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದೆ. ಅದಕ್ಕಾಗಿ ಅವರಿಗೆ ನವೆಂಬರ್‌ವರೆಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಮಂಗಳವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಸಿಸಿಐ, ‘ಪೃಥ್ವಿಯ ಮೂತ್ರದ ಪರೀಕ್ಷೆಯಲ್ಲಿ ನಿಷೇಧಿತ ಮದ್ದಿನ ಅಂಶ ಟೆರ್ಬುಟಲೈನ್ ಇರುವುದು ಪತ್ತೆಯಾಗಿದೆ. ಈ ಮದ್ದಿನ ಅಂಶವು ಕೆಮ್ಮಿಗೆ ನೀಡುವ ಔಷಧಿಯಲ್ಲಿ ಇರುತ್ತದೆ’ ಎಂದು ಉಲ್ಲೇಖಿಸಿದೆ.

ಫೆಬ್ರುವರಿ ತಿಂಗಳಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿ ಸಂದರ್ಭದಲ್ಲಿ ಪೃಥ್ವಿಯ ಮೂತ್ರದ ಮಾದರಿಯನ್ನು ಉದ್ದೀಪನ ಮದ್ದು ಘಟಕದ ವೈದ್ಯರು ಸಂಗ್ರಹಿಸಿದ್ದರು. ಎಲ್ಲ ರೀತಿಯ ಪರೀಕ್ಷೆಗಳ ನಂತರ ಫಲಿತಾಂಶವನ್ನು ಬಹಿರಂಗಪಡಿಸಲಾಗಿದೆ. ಆದ್ದರಿಂದ ಅವರನ್ನು ಹೋದ ಮಾರ್ಚ್‌ 16 ರಿಂದ ಮುಂದಿನ ನವೆಂಬರ್‌ 15ರವರೆಗೆ ಅಮಾನತು ಮಾಡಲಾಗಿದೆ.

ಮುಂಬೈ ತಂಡದ ಆಟಗಾರ ಪೃಥ್ವಿ ಹೋದ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಒಂದು ಶತಕ ಮತ್ತು ಅರ್ಧಶತಕ ಬಾರಿಸಿದ್ದರು. 19 ವರ್ಷದ ಪೃಥ್ವಿ ಅವರು ನಿಷೇಧಿತ ಅಂಶವಿರುವ ಔಷಧಿಯನ್ನು ತಮ್ಮ ಅನಾರೋಗ್ಯಕ್ಕಾಗಿ ಸೇವಿಸಿದ್ದರೋ ಅಥವಾ ಸಾಮರ್ಥ್ಯ ವೃದ್ಧಿಗಾಗಿ ತೆಗೆದುಕೊಂಡಿದ್ದರೋ ಎಂಬುದು ಸ್ಪಷ್ಟವಾಗಿಲ್ಲ. ಬಿಸಿಸಿಐ ನಿಯಮದ ಪ್ರಕಾರ ಪೃಥ್ವಿ ಅವರು ಸೆಪ್ಟೆಂಬರ್‌ ತಿಂಗಳಲ್ಲಿ ಅಭ್ಯಾಸ ಆರಂಭಿಸಬಹುದಾಗಿದೆ.

ಪೃಥ್ವಿ ಅಲ್ಲದೇ ವಿದರ್ಭದ 23 ವರ್ಷದೊಳಗಿನ ತಂಡದ ಅಕ್ಷಯ್ ದುಲ್ಲಾವರ್ ಮತ್ತು ದಿವ್ಯಾ ಗಜರಾಜ್ ಅವರು ಕೂಡ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ. ಅವರು 2018–19ನೇ ಸಾಲಿನ ದೇಶಿ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಮೂತ್ರದ ಸ್ಯಾಂಪಲ್ ನೀಡಿದ್ದರು.

‘ಉಸಿರಾಟದ ತೊಂದರೆ ಮತ್ತು ಕೆಮ್ಮು ಇದ್ದ ಕಾರಣ ಚಿಕಿತ್ಸೆ ಪಡೆದಿದ್ದೆವು. ಬಳಕೆ ಮಾಡಿದ್ದ ಮದ್ದಿನಲ್ಲಿ ನಿಷೇಧಿತ ಅಂಶ ಇರುವುದು ಗೊತ್ತಿರಲಿಲ್ಲ’ ಎಂದು ಅವರಿಬ್ಬರೂ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT