ಶನಿವಾರ, ಮಾರ್ಚ್ 6, 2021
24 °C
ಆಟದ ಮನೆ

PV Web Exclusive | ಬೌಲ್ಡ್ ಮಾಡುವ ಸುಖವು...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿ ಬೌಲಿಂಗ್ ಮಾಡುತ್ತಾ ಬೆವರು ಬಸಿದು, ‘ರೆಡ್‌ ಚೆರ್ರಿ’ ಎನಿಸಿಕೊಂಡ ಕೆಂಪು ಚೆಂಡಿನಿಂದ ಸ್ವಿಂಗ್ ಮಾಡುವ ಬೌಲರ್‌ಗಳಿಗೆ ವಿಕೆಟ್ ಹಾರಿದಾಗ ಆಗುವ ಸಂತಸ ಅಷ್ಟಿಷ್ಟಲ್ಲ. ಅಂತಹುದೇ ಮೋಡಿಯನ್ನು ಮೊನ್ನೆ ಬೂಮ್ರಾ ಮಾಡಿದರು. ಸ್ಮಿತ್ ಅಂದಾಜನ್ನು ಮೀರಿ ವಿಕೆಟ್ ಮೇಲಿನ ಬೇಲ್ಸನ್ನು ಮಾತ್ರ ಎಸೆತ ಹಾರಿಸಿದ್ದು ಬೆರಗಿನ ಕ್ಷಣ. ಸಮಕಾಲೀನ ವೇಗಿಗಳಲ್ಲಿ ಯಾವ್ಯಾವ ಬೌಲರ್‌ಗಳು ಎಷ್ಟೆಷ್ಟು ಟೆಸ್ಟ್‌ ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್‌ ಮಾಡಿದ್ದಾರೆ ಗೊತ್ತೆ?

***

ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಹಾಕಿದ ಎಸೆತವೊಂದನ್ನು ನೋಡಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವಾಕ್ಕಾದರು. ಆಫ್‌ಸ್ಟಂಪ್‌ನ ಭಾಗದಿಂದ ಸಾಕಷ್ಟು ಮುಂದಕ್ಕೆ ಕಾಲಿಟ್ಟು, ‘ಅಕ್ರಾಸ್’ ಆಡುವುದು ಸ್ಮಿತ್ ಜಾಯಮಾನ. ಆ ಶೈಲಿಯೇ ಅವರನ್ನು ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿ ಬೆಳೆಸಿದೆ. ವಿಕೆಟ್‌ಗಳು ಕಾಣುತ್ತಿವೆಯಲ್ಲ ಎಂದು ಬೌಲರ್ ಅವುಗಳತ್ತ ಗುರಿ ಮಾಡಿ ಫುಲ್ಲರ್ ಲೆಂಗ್ತ್ ಬೌಲ್ ಮಾಡಿದರೆ, ಸ್ಮಿತ್ ಸುಲಭವಾಗಿ ಫೈನ್‌ಲೆಗ್‌ನತ್ತ ಹೊಡೆಯುತ್ತಾರೆ. ಅವರ ಈ ಶೈಲಿಯನ್ನು ಬೂಮ್ರಾ ಅಧ್ಯಯನ ಮಾಡಿರಬೇಕು. ಎರಡನೇ ಇನಿಂಗ್ಸ್‌ನಲ್ಲಿ ಲೆಗ್‌ಸ್ಟಂಪ್‌ನಿಂದ ಸಾಕಷ್ಟು ಹೊರಕ್ಕೆ ಪುಟಿದ ಚೆಂಡು ಆಮೇಲೆ ತುಸುವೇ ಒಳನುಗ್ಗಿ, ಬರೀ ಬೇಲ್ಸ್‌ ಮಾತ್ರ ಹಾರಿಸಿಕೊಂಡು ಹೋಯಿತು. ಬ್ಯಾಟ್ಸ್‌ಮನ್‌ ಕಾಲುಗಳ ಹಿಂಬದಿಯಿಂದ ಚೆಂಡು ಈ ರೀತಿ ಮೋಡಿ ಮಾಡುವುದು ಎಂತಹ ಬೌಲರ್‌ಗೇ ಆಗಲಿ ಹೆಮ್ಮೆಯ ಕ್ಷಣ. ಶೇನ್ ವಾರ್ನ್ ಲೆಗ್‌ ಸ್ಪಿನ್‌ ಬೌಲಿಂಗ್‌ನಲ್ಲಿ ಈ ರೀತಿಯ ಎಷ್ಟೋ ಎಸೆತಗಳನ್ನು ಕಂಡಿದ್ದೇವೆ.

ಯಾವುದೇ ವೇಗದ ಬೌಲರ್‌ಗೆ ಎದುರಾಳಿಯನ್ನು ಬೌಲ್ಡ್ ಮಾಡಿದಾಗ ಆಗುವ ಸಂತೋಷ ಬಣ್ಣಿಸಲಸದಳ. ಅದರಲ್ಲೂ ಮೇಲಿನ ಕ್ರಮಾಂಕದ ನುರಿತ ಬ್ಯಾಟರ್‌ಗಳನ್ನು ಈ ರೀತಿ ಔಟ್ ಮಾಡಲು ಹೆಣೆಯುವ ಪ್ರತಿತಂತ್ರ ಒಂದು ಪ್ರಬಂಧಕ್ಕೇ ವಸ್ತುವಾದೀತು. ವಕಾರ್‌ ಯೂನಿಸ್ ಯಾರ್ಕರ್‌ಗಳು, ಗ್ಲೆನ್‌ ಮೆಕ್‌ಗ್ರಾ ಕರಾರುವಾಕ್ ಲೈನ್ ಅಂಡ್ ಲೆಂಗ್ತ್, ಡೇಲ್ ಸ್ಟೇನ್ ಹಾಕುವ ಮೋಹಕ ಸ್ವಿಂಗ್, ಟ್ರೆಂಟ್‌ ಬೌಲ್ಟ್ ಎಡಗೈ ವೇಗದ ಲೇಟ್‌ ಸ್ವಿಂಗ್‌ನ ಮೊನಚು ಇವೆಲ್ಲವೂ ಕೆಲವು ಆಸಕ್ತಿಕರ ನಮೂನೆಗಳು.

ಸಮಕಾಲೀನ ವೇಗಿಗಳ ಪೈಕಿ ತಮ್ಮ ಟೆಸ್ಟ್‌ ವೃತ್ತಿಬದುಕಿನಲ್ಲಿ ಅತಿ ಹೆಚ್ಚು ಸಲ ಬೌಲ್ಡ್‌ ಮಾಡಿರುವವರು ಯಾರು ಎನ್ನುವುದು ಕುತೂಹಲದ ವಿಷಯ. ಆ ಪಟ್ಟ ಇಂಗ್ಲೆಂಡ್‌ನ ಜೇಮ್ಸ್‌ ಆಂಡರ್‌ಸನ್ ಅವರದ್ದು. ಈ ವರ್ಷ ಮೇ ತಿಂಗಳವರೆಗಿನ ಅಂಕಿ-ಅಂಶ ಗಮನಿಸಿದರೆ ಅವರು 116 ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್‌ ಮಾಡಿರುವುದು ಗೊತ್ತಾಗುತ್ತದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗ ಆಡುತ್ತಿರುವ ಹಾಗೂ ನಿವೃತ್ತಿಯಾದ ಯಾವುದೇ ವೇಗದ ಬೌಲರ್‌ಗಳಿಗೆ ಹೋಲಿಸಿದರೂ ಆಂಡರ್‌ಸನ್‌ ಅತಿ ಹೆಚ್ಚು ಮಂದಿಯ ವಿಕೆಟ್‌ ಅನ್ನು ತಮ್ಮ ಎಸೆತಗಳಿಂದ ಅಕ್ಷರಶಃ ಉರುಳಿಸಿದ್ದಾರೆ. ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮಾತ್ರ ಅವರಿಗಿಂತ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್‌ ಮಾಡಿದ್ದಾರೆ. 2008ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದ ಇನಿಂಗ್ಸ್ ಒಂದರಲ್ಲಿ ಆಂಡರ್‌ಸನ್ 7 ವಿಕೆಟ್‌ಗಳನ್ನು ಪಡೆದಿದ್ದರು. ಆರಂಭಿಕ ಆಟಗಾರ ಆ್ಯರನ್ ರೆಡ್‌ಮಾಂಡ್‌ ಗುಡ್‌ ಲೆಂಗ್ತ್‌ನಲ್ಲಿ ಬಿದ್ದ ಚೆಂಡನ್ನು ನೋಡುತ್ತಿದ್ದರಷ್ಟೆ. ಅಲ್ಲಿನ ಬಿರುಕಿನ ಮೇಲೆ ಬಿದ್ದ ಚೆಂಡು ಮೈಕ್ರೋ ಸೆಕೆಂಡ್‌ನಲ್ಲಿ ಲೇಟ್‌ ಸ್ವಿಂಗ್ ಆಗಿ ವಿಕೆಟ್ ಹಾರಿಸಿತ್ತು. ಅಷ್ಟು ದೂರಕ್ಕೆ ಸ್ವಿಂಗ್ ಆಗಿದ್ದು ಹೇಗೆ ಎಂದು ರೆಡ್‌ಮಾಂಡ್‌ ನೆಲವನ್ನು ನೋಡುತ್ತಾ ಕೆಲಕ್ಷಣ ನಿಂತುಬಿಟ್ಟರು. ಆಂಡರ್‌ಸನ್ ಪಡೆದಿರುವ ವಿಕೆಟ್‌ಗಳಲ್ಲಿ ಶೇ 19.86ರಷ್ಟು ಬೌಲ್ಡ್‌ ಮೂಲಕವೇ ಸಂದಿವೆ.

ಶಾನ್ ಪೊಲಾಕ್, ಅಲನ್ ಡೊನಾಲ್ಡ್ ತರಹದ ದಿಗ್ಗಜರನ್ನು ವಿಕೆಟ್‌ ಗಳಿಕೆಯಲ್ಲಿ ಹಿಂದಿಕ್ಕಿ ಕಳೆದೊಂದು ದಶಕದ ಶ್ರೇಷ್ಠ ಟೆಸ್ಟ್‌ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡವರು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್. ಅವರ 439 ಟೆಸ್ಟ್‌ ವಿಕೆಟ್‌ಗಳ ಪೈಕಿ 90 ಬೌಲ್ಡ್‌ ಮಾಡಿದಂಥವು. ಇಂಗ್ಲೆಂಡ್‌ನ ಪಳಗಿದ ಬ್ಯಾಟ್ಸ್‌ಮನ್ ಆಗಿದ್ದ ಮಾರ್ಕಸ್ ಟ್ರೆಸ್ಕೋಥಿಕ್ ಅವರನ್ನು ತಾವು ಆಡಿದ ಮೊದಲ ಟೆಸ್ಟ್‌ನಲ್ಲೇ ಸ್ಟೇನ್ ಕ್ಲೀನ್ ಬೌಲ್ಡ್ ಮಾಡಿದ್ದರು. ಅದೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸೊಗಸಾದ ಸ್ವಿಂಗಿಂಗ್ ಎಸೆತದಿಂದ ಮೈಕಲ್ ವಾನ್ ವಿಕೆಟ್‌ ಅನ್ನೂ ಉರುಳಿಸಿದ್ದರು. ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಸ್ಟೇನ್ ಅವರಲ್ಲಿ ಈಗ ಮೊದಲಿನ ಕಸುವು ಇಲ್ಲ. ಆದರೆ, ಮಿಡ್ಲ್‌ ಅಂಡ್‌ ಲೆಗ್‌ ಸ್ಟಂಪ್‌ನತ್ತ ಸ್ವಿಂಗ್ ಆಗುತ್ತಿದ್ದ ಅವರ ಎಸೆತಗಳ ನೆನಪು ಕ್ರಿಕೆಟ್‌ ಪ್ರಿಯರಿಗೆ ಎಂದಿಗೂ ಆಪ್ಯಾಯಮಾನ.

ಏಕದಿನದ ಪಂದ್ಯದಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಯುವರಾಜ್ ಸಿಂಗ್ ಕಂಗೆಡಿಸಿದ್ದ ಬೌಲರ್ ಸ್ಟುವರ್ಟ್ ಬ್ರಾಡ್. ಅವರೂ ತಮ್ಮ ವೃತ್ತಿಬದುಕಿನ 86 ಟೆಸ್ಟ್ ವಿಕೆಟ್‌ಗಳನ್ನು ಬೌಲ್ಡ್‌ ಮಾಡುವ ಮೂಲಕ ಪಡೆದಿದ್ದಾರೆ. 2011ರಲ್ಲಿ ಭಾರತದ ವಿರುದ್ಧವೇ ಟೆಸ್ಟ್‌ ಪಂದ್ಯದ ಇನಿಂಗ್ಸ್‌ ಒಂದರಲ್ಲಿ ಹ್ಯಾಟ್ರಿಕ್ ಪಡೆದು, ಅವರು ಯುವರಾಜ್ ಕೊಟ್ಟಿದ್ದ ಕಹಿ ನೆನಪನ್ನು ಮರೆತಿದ್ದರು. ಆ ಹ್ಯಾಟ್ರಿಕ್‌ನಲ್ಲಿ ಪ್ರವೀಣ್ ಕುಮಾರ್ ಅವರನ್ನು ಮೂರನೇ ವಿಕೆಟ್‌ ರೂಪದಲ್ಲಿ ಬೌಲ್ಡ್‌ ಮಾಡಿದ್ದ ಎಸೆತ ಮನಮೋಹಕವಾಗಿತ್ತು. ಅದೂ ಗುಡ್‌ ಲೆಂಗ್ತ್‌ನಲ್ಲಿ ಹಾಕಿದ ಚೆಂಡು ಎನ್ನುವುದು ಮುಖ್ಯ. ಮೈಕಲ್ ಕ್ಲಾರ್ಕ್, ರಾಸ್ ಟೇಲರ್ ತರಹದ ಅನುಭವಿ ಆಸ್ಟ್ರೇಲಿಯನ್ನರನ್ನು ಪದೇ ಪದೇ ಬೌಲ್ಡ್‌ ಮಾಡಿರುವ ಶ್ರೇಯ ಬ್ರಾಡ್‌ ಅವರದ್ದು.

ಈಗ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುತ್ತಿರುವ ಮಿಚೆಲ್ ಸ್ಟಾರ್ಕ್ ತಮ್ಮ ಟೆಸ್ಟ್‌ ವಿಕೆಟ್‌ಗಳ ಪೈಕಿ ಶೇ 26ರಷ್ಟನ್ನು ಬೌಲ್ಡ್‌ ಮಾಡುವ ಮೂಲಕ ಪಡೆದಿದ್ದಾರೆ. ಈ ಸರಣಿಗೆ ಮೊದಲು 63 ವಿಕೆಟ್‌ಗಳನ್ನು ಅವರು ಬೌಲ್ಡ್‌ ಮಾಡಿ ಪಡೆದಿದ್ದರು. ಬೇರೆ ಯಾವುದೇ ಸಮಕಾಲೀನ ಬೌಲರ್‌ ಇಷ್ಟೊಂದು ಶೇಕಡಾವಾರು ವಿಕೆಟ್‌ಗಳನ್ನು ಬೌಲ್ಡ್‌ ಮಾಡುವ ಮೂಲಕ ಪಡೆದಿಲ್ಲವೆನ್ನುವುದು ಗಮನಾರ್ಹ. ಇಂಗ್ಲೆಂಡ್‌ನ ಜೇಮ್ಸ್‌ ವಿನ್ಸ್‌ 2019ರ ಆ್ಯಷಸ್‌ ಸರಣಿಯಲ್ಲಿ ಚೆಂಡು ಲೆಗ್‌ಸ್ಟಂಪ್‌ನಿಂದ ಆಚೆ ಹೋಗುತ್ತದೆ ಎಂದುಕೊಂಡು ಸುಮ್ಮನಾದರು. ಅದು ಕೊನೆಯ ಕ್ಷಣದಲ್ಲಿ ಒಳನುಗ್ಗಿ ವಿಕೆಟ್ ಹಾರಿಸಿತ್ತು. ಪ್ರತಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲ್ ಮಾಡುವ, ಪದೇ ಪದೇ ಯಾರ್ಕರ್‌ಗಳನ್ನು ಪ್ರಯೋಗಿಸುವ ಸ್ಟಾರ್ಕ್ ಸದಾ ವಿಕೆಟ್‌ಗಳನ್ನೇ ಗುರಿಯಾಗಿಸಿಕೊಳ್ಳುತ್ತಿರುತ್ತಾರೆ. 2015ರ ವಿಶ್ವಕಪ್ ಫೈನಲ್ಸ್‌ನಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಅವರನ್ನು ಬೌಲ್ಡ್‌ ಮಾಡಲು ಇದೇ ತಂತ್ರವನ್ನು ಅವರು ಅನುಸರಿಸಿದ್ದರು.

ಮತ್ತೆ ಟ್ರೆಂಟ್‌ ಬೌಲ್ಟ್‌ ಬೌಲ್ಡ್‌ ಮಾಡುವ ಬಗೆಯತ್ತ ಕಣ್ಣುಬೀರೋಣ. 2015ರಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್ ಟೆಸ್ಟ್‌ ಪಂದ್ಯದ ಇನಿಂಗ್ಸ್‌ನಲ್ಲಿ ಆಗಿನ್ನೂ ಚೆಂಡಿನ ಗತಿ ಅಂದಾಜು ಮಾಡುತ್ತಾ ಇದ್ದರು. ಬೌಲ್ಟ್‌ ಹಾಕಿದ ಎರಡನೇ ಓವರ್‌ನ ಯಾರ್ಕರ್ ಸ್ವಿಂಗ್ ಆಗಿ ಆಫ್‌ಸ್ಟಂಪ್‌ನ ಬುಡಕ್ಕೆ ಬಡಿಯಿತು. ಗೇಲ್ ಚೆಂಡು ನುಗ್ಗಿ, ಆಮೇಲೆ ತಿರುಗಿರಬಹುದಾದ ಪರಿಯನ್ನು ಅಂದಾಜು ಮಾಡುತ್ತಾ ಮೌನಕ್ಕೆ ಶರಣಾಗಿದ್ದರು.

ಬೂಮ್ರಾ ಇದುವರೆಗೆ ಟೆಸ್ಟ್‌ಗಳಲ್ಲಿ 76 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪೈಕಿ 16 ಬೌಲ್ಡ್‌ ಮಾಡಿದಂಥವು. ಮೊನ್ನೆ ಸ್ಮಿತ್‌ಗೆ ಹಾಕಿದ ಇನ್‌ಕಮಿಂಗ್ ಡಿಪ್ಪರ್ ವಿಕೆಟ್‌ಗಳ ಮೇಲಿದ್ದ ಬೇಲ್ಸ್‌ ಹಾರಿಸಿದ್ದು ಮೊದಲಿಗೆ ಬೂಮ್ರಾಗೂ ಗೊತ್ತಾಗಿರಲಿಲ್ಲ. ಆಮೇಲೆ ಆ ರೋಚಕ ಕ್ಷಣದ ಸಂಭ್ರಮದಲ್ಲಿ ಅವರು ಭಾಗಿಯಾದರು. ಬೌಲ್ಡ್‌ ಮಾಡುವುದರಲ್ಲಿ ಚಾಣಾಕ್ಷರಾಗಿರುವ ವೇಗದ ಬೌಲರ್‌ಗಳ ಮಧ್ಯೆ ಎಲ್‌ಬಿಡಬ್ಲ್ಯು ಬಲೆಗೆ ಕೆಡಹುವುದರಲ್ಲಿ ಬೂಮ್ರಾ ನಿಷ್ಣಾತರು. 21 ವಿಕೆಟ್‌ಗಳು ಆ ರೂಪದಲ್ಲಿ ಅವರಿಗೆ ಇದುವರೆಗೂ ಸಂದಿವೆ. ಈಗ ಮೊದಲಿನಷ್ಟು ಟೆಸ್ಟ್‌ ಪಂದ್ಯಗಳು ನಡೆಯುತ್ತಿಲ್ಲವಾದ್ದರಿಂದ ಆಂಡರ್‌ಸನ್ ಅಥವಾ ಸ್ಟೇನ್ ತರಹದ ಸಾಧನೆಯ ಹಾದಿಯಲ್ಲಿ ಬೂಮ್ರಾ ನಡೆಯಲು ಸಾಧ್ಯವೇ ಎಂಬ ಅನುಮಾನವಂತೂ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು