ಸೋಮವಾರ, ಜನವರಿ 18, 2021
26 °C

PV Web Exclusive| ಈ ಆಟಗಾರ್ತಿ ‘ಸಕಲ ಕಲಾ ವಲ್ಲಭೆ’

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಈ ಆಟಗಾರ್ತಿ ಕ್ರಿಕೆಟ್‌ ಅಂಗಳದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿ ರನ್‌ ಮಳೆ ಸುರಿಸಬಲ್ಲರು. ಕೈಗೆ ಚೆಂಡನ್ನಿತ್ತರೆ ಚಾಕಚಕ್ಯತೆಯಿಂದ ಎದುರಾಳಿಗಳ ವಿಕೆಟ್‌ ಉರುಳಿಸಬಲ್ಲರು. ಕ್ಷೇತ್ರ ರಕ್ಷಣೆಯಲ್ಲೂ ಚುರುಕಿನ ಸಾಮರ್ಥ್ಯ ತೋರಿ ಸೈ ಎನಿಸಿಕೊಳ್ಳುವ ಪ್ರತಿಭಾವಂತೆ. ಫುಟ್‌ಬಾಲ್‌ ಮೈದಾನಕ್ಕಿಳಿದರಂತೂ ಮುಗಿಯಿತು. ಪಾದರಸದಂತಹ ಚಲನೆಯ ಮೂಲಕ ಚೆಂಡನ್ನು ಸೊಗಸಾಗಿ ಡ್ರಿಬ್ಲಿಂಗ್‌ ಮಾಡುತ್ತಾ ಸಾಗುವುದಲ್ಲದೇ ಅದನ್ನು ಆಕರ್ಷಕ ರೀತಿಯಲ್ಲಿ ಗುರಿ ಸೇರಿಸಿ ಅಭಿಮಾನಿಗಳನ್ನು ಖುಷಿಯ ಕಡಲಲ್ಲಿ ತೇಲಿಸಬಲ್ಲರು.

ಹೀಗೆ ಸಕಲ ಕಲೆಗಳನ್ನೂ ಕರಗತಮಾಡಿಕೊಂಡಿರುವ ಆ ತಾರೆಯ ಹೆಸರು ಎಲಿಸೆ ಪೆರ‍್ರಿ.

16ನೇ ವಯಸ್ಸಿನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಅಡಿ ಇಟ್ಟ ಪೆರ‍್ರಿ, ಅದೇ ವರ್ಷ (2007) ರಾಷ್ಟ್ರೀಯ ಫುಟ್‌ಬಾಲ್‌ ತಂಡವನ್ನೂ ಪ್ರತಿನಿಧಿಸಿ ಬೆರಗು ಮೂಡಿಸಿದ್ದರು. ಫುಟ್‌ಬಾಲ್‌ ಮತ್ತು ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಡಿದ ಆಸ್ಟ್ರೇಲಿಯಾದ ಅಪರೂಪದ ಆಟಗಾರ್ತಿ ಎಂಬ ಹಿರಿಮೆಯೂ ಅವರದ್ದು.


ಎಲಿಸೆ ಪೆರ್ರಿ–ಇನ್‌ಸ್ಟಾಗ್ರಾಮ್ ಚಿತ್ರ

ಶಾಲಾ ದಿನಗಳಲ್ಲಿ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಪೆರ‍್ರಿಗೆ, ಕ್ರಿಕೆಟ್‌ ಹಾಗೂ ಕಾಲ್ಚೆಂಡಿನಾಟದ ಮೇಲೆ ವಿಶೇಷ ಪ್ರೀತಿ. ಎರಡರಲ್ಲೂ ಎತ್ತರದ ಸಾಧನೆ ಮಾಡುವ ಕನಸು ಕಂಡ ಅವರು ಅವಿರತ ಪರಿಶ್ರಮದಿಂದ ಅದನ್ನು ನನಸಾಗಿಸಿಕೊಂಡಿದ್ದಾರೆ.

ಸಾಗಿಬಂದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಪೆರ‍್ರಿ, ಈಗ ಮತ್ತೊಮ್ಮೆ ಕ್ರಿಕೆಟ್‌ ಇತಿಹಾಸದ ಪುಟದಲ್ಲಿ ತಮ್ಮ ಹೆಸರು ಸುವರ್ಣಾಕ್ಷರಗಳಲ್ಲಿ ಅಚ್ಚಾಗುವಂತೆ ಮಾಡಿದ್ದಾರೆ. 

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನೀಡುವ ‘ದಶಕದ ಕ್ರಿಕೆಟ್‌ ಆಟಗಾರ್ತಿ’, ‘ದಶಕದ ಏಕದಿನ ಆಟಗಾರ್ತಿ’ ಹಾಗೂ ‘ದಶಕದ ಟ್ವೆಂಟಿ–20 ಆಟಗಾರ್ತಿ’ ಗೌರವಗಳಿಗೆ ಭಾಜನರಾಗುವ ಮೂಲಕ ‘ಕ್ಲೀನ್‌ ಸ್ವೀಪ್‌’ ಸಾಧಿಸಿರುವ ಅವರು ‘ವಿಶ್ವ ಕ್ರಿಕೆಟ್‌ನ ರಾಣಿ’ ತಾವು ಎಂಬುದನ್ನು ನಿರೂಪಿಸಿದ್ದಾರೆ.

ಅಪ್ಪನ ಗರಡಿಯಲ್ಲಿ ಬೆಳೆದ ಪ್ರತಿಭೆ...

ಸಿಡ್ನಿಯ ವಹರೂಂಗಾದಲ್ಲಿ ಹುಟ್ಟಿ ಬೆಳೆದ ಪೆರ್ರಿಗೆ ಅಪ್ಪನೇ ಮೊದಲ ಗುರು. ಶಾಲಾ ದಿನಗಳಲ್ಲಿ ಪೆರ‍್ರಿ, ಫುಟ್‌ಬಾಲ್‌ ಮತ್ತು ಕ್ರಿಕೆಟ್‌ನ ಜೊತೆಗೆ ಟೆನಿಸ್‌, ಗಾಲ್ಫ್‌, ಟಚ್‌ ರಗ್ಬಿ ಹಾಗೂ ಅಥ್ಲೆಟಿಕ್ಸ್‌  ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಪಿಂಬಲ್‌ ಮಹಿಳಾ ಕಾಲೇಜಿನಲ್ಲಿ ಕಲಿತ ಅವರು ಕ್ರಿಕೆಟ್‌ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಕಾಲೇಜು ತಂಡದ ನಾಯಕಿಯಾಗಿದ್ದರು. ಅಂತರರಾಜ್ಯ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ನ್ಯೂ ಸೌತ್‌ ವೇಲ್ಸ್‌ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದ ಬೆನ್ನಲ್ಲೇ ಅವರಿಗೆ ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಆಡುವ ಅದೃಷ್ಟ ಒಲಿಯಿತು. 2007ರ ಜುಲೈ 22ರಂದು ಡಾರ್ವಿನ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯ ಪೆರ‍್ರಿ ಪಾಲಿಗೆ ಮೊದಲನೆಯದ್ದು. ಆಗ ಅವರ ವಯಸ್ಸು 16 ವರ್ಷ 8 ತಿಂಗಳು.


ಕಾರ್ಯಕ್ರಮವೊಂದರಲ್ಲಿ ಎಲಿಸೆ ಪೆರ್ರಿ–ಇನ್‌ಸ್ಟಾಗ್ರಾಮ್ ಚಿತ್ರ

ರಾಷ್ಟ್ರೀಯ ತಂಡಕ್ಕೆ ಅಡಿ ಇಟ್ಟ ಆಸ್ಟ್ರೇಲಿಯಾದ ಅತಿ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಅವರು, ಚೊಚ್ಚಲ ಪಂದ್ಯದಲ್ಲೇ ಎರಡು ವಿಕೆಟ್‌ ಕಬಳಿಸಿದ್ದರು. ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು 20 ಎಸೆತಗಳಲ್ಲಿ 19 ರನ್‌ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಅನಂತರ ಅವಕಾಶಗಳು ಅವರನ್ನು ಅರಸಿ ಬಂದವು.

2009ರಲ್ಲಿ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದ ಅವರು ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ ಆಲ್‌ರೌಂಡ್ ಸಾಮರ್ಥ್ಯ ತೋರಿ ಪಂದ್ಯ ಶ್ರೇಷ್ಠ ಪುರಸ್ಕಾರ ಪಡೆದಿದ್ದರು. ಅದೇ ವರ್ಷ ನಡೆದಿದ್ದ ಚೊಚ್ಚಲ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲೂ ಪಾಲ್ಗೊಳ್ಳುವ ಅವಕಾಶ ಅವರಿಗೆ ಒಲಿದಿತ್ತು. ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ನಂತರದ ಆರು ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದರು. ಈ ಪೈಕಿ ಐದು ಟೂರ್ನಿಗಳಲ್ಲಿ (2010, 2012, 2014, 2018, 2020) ಕಾಂಗರೂ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2013ರ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾ ತಂಡದಲ್ಲೂ ಪೆರ‍್ರಿ  ಆಡಿದ್ದರು.

ಅವರ ಈ ಎಲ್ಲಾ ಸಾಧನೆಗಳ ಹಿಂದಿನ ಶಕ್ತಿ, ಅವರ ತಂದೆ ಮಾರ್ಕ್‌. ನೆಟ್ಸ್‌ನಲ್ಲಿ ಅಂಡರ್‌ ಆರ್ಮ್‌ ಎಸೆತಗಳನ್ನು ಹಾಕಿ ಮಗಳಿಗೆ ಪುಲ್‌ ಹಾಗೂ ಕಟ್‌ ಶಾಟ್‌ಗಳನ್ನು ಹೇಳಿಕೊಡುತ್ತಿದ್ದ ಮಾರ್ಕ್‌, ಸಣ್ಣಪುಟ್ಟ ತಪ್ಪುಗಳನ್ನೂ ಗುರುತಿಸಿ ತಿದ್ದುತ್ತಿದ್ದರು. ಆ ಮೂಲಕ ಮಗಳನ್ನು ಪರಿಪೂರ್ಣ ಕ್ರಿಕೆಟಿಗಳನ್ನಾಗಿ ರೂಪಿಸಿದ್ದಾರೆ. ಹಲವು ಸಂದರ್ಶನಗಳಲ್ಲಿ ಮಗಳು ಕೂಡ ತಂದೆಯ ಸಹಕಾರ ಮತ್ತು ಬೆಂಬಲವನ್ನು ಸ್ಮರಿಸಿದ್ದಾರೆ.

ಫುಟ್‌ಬಾಲ್‌ ಪಯಣ..

2007ರಲ್ಲಿ 20 ವರ್ಷದೊಳಗಿನವರ ತಂಡದಲ್ಲಿ ಆಡುವ ಮೂಲಕ ಫುಟ್‌ಬಾಲ್‌ ಪಯಣ ಆರಂಭಿಸಿದ ಪೆರ‍್ರಿ, 2008ರಲ್ಲಿ ನಡೆದಿದ್ದ ಎಎಫ್‌ಸಿ ಮಹಿಳಾ ಏಷ್ಯಾಕಪ್‌ ಟೂರ್ನಿಯ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿ ಗಮನ ಸೆಳೆದಿದ್ದರು.

2011ರಲ್ಲಿ ಜರ್ಮನಿಯಲ್ಲಿ ಆಯೋಜನೆಯಾಗಿದ್ದ ಫಿಫಾ ವಿಶ್ವಕಪ್‌ನಲ್ಲೂ ಅವರು ಕಾಲ್ಚಳಕ ತೋರಿದ್ದರು. ಸ್ವೀಡನ್‌ ಎದುರಿನ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಪರ ಏಕೈಕ ಗೋಲು ಬಾರಿಸಿದ್ದರು. ಆ ಪಂದ್ಯದಲ್ಲಿ ಕಾಂಗರೂ ತಂಡವು 1–3 ಗೋಲುಗಳಿಂದ ಸೋತಿತ್ತು. 2007ರಿಂದ 2011ರ ಅವಧಿಯಲ್ಲಿ ಆಸ್ಟ್ರೇಲಿಯಾ ಪರ ಒಟ್ಟು 18 ಪಂದ್ಯಗಳನ್ನು ಆಡಿರುವ ಅವರು ಮೂರು ಗೋಲುಗಳನ್ನು ದಾಖಲಿಸಿದ್ದಾರೆ. 


ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯವೊಂದರ ವೇಳೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಪೆರ್ರಿ (ಎಡ)– ಟ್ವಿಟರ್‌ ಚಿತ್ರ

ನ್ಯೂ ಸೌತ್‌ ವೇಲ್ಸ್‌ ಸಪ್ಪಿರಸ್‌, ಸೆಂಟ್ರಲ್‌ ಕೋಸ್ಟ್‌ ಮರಿನರ್ಸ್‌, ಕ್ಯಾನ್‌ಬೆರಾ ಯುನೈಟೆಡ್‌, ಸಿಡ್ನಿ ಎಫ್‌ಸಿ ಕ್ಲಬ್‌ಗಳನ್ನೂ ಅವರು ಪ್ರತಿನಿಧಿಸಿದ್ದಾರೆ.

2013ರಲ್ಲಿ ನಡೆದಿದ್ದ ಪಂದ್ಯವೊಂದರ ವೇಳೆ ಮೆಲ್ಬರ್ನ್‌ ವಿಕ್ಟರಿ ತಂಡದ ಆಟಗಾರ್ತಿ ಲಿಸಾ ಡಿ ವನ್ನಾ ಅವರು ಚೆಂಡನ್ನು ಟ್ಯಾಕಲ್‌ ಮಾಡುವ ಭರದಲ್ಲಿ ಪೆರ‍್ರಿ ಅವರ ಕಾಲನ್ನು ಬಲವಾಗಿ ತುಳಿದಿದ್ದರು. ಇದರಿಂದ ಪೆರ್ರಿ ಅವರ ಕಾಲಿಗೆ ದೊಡ್ಡ ಗಾಯವಾಗಿತ್ತು. ಅದಕ್ಕಾಗಿ ಅವರು ಆರು ಹೊಲಿಗೆಗಳನ್ನು ಹಾಕಿಸಿಕೊಳ್ಳಬೇಕಾಯಿತು.

ಸಾಹಿತ್ಯದಲ್ಲೂ ಅಭಿರುಚಿ...

ಕ್ರಿಕೆಟ್‌ ಹಾಗೂ ಫುಟ್‌ಬಾಲ್‌ ಆಟದ ಕಲೆಗಳನ್ನು ಕರಗತ ಮಾಡಿಕೊಂಡಿರುವ ಪೆರ‍್ರಿ, ಸಾಹಿತ್ಯದಲ್ಲೂ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಲೇಖಕಿ ಶೆರಿಲ್‌ ಕ್ಲಾರ್ಕ್‌ ಜೊತೆಗೂಡಿ ಹಲವು ಮಕ್ಕಳ ಪುಸ್ತಗಳನ್ನೂ ಬರೆದಿದ್ದಾರೆ.

ಕ್ರೀಡಾ ಬದುಕಿನ ಆರಂಭದ ದಿನಗಳಲ್ಲಿ ಟಿ.ವಿ.ಕಾರ್ಯಕ್ರಮವೊಂದರ ನಿರೂಪಕಿಯಾಗಿಯೂ ಪೆರ‍್ರಿ ಕಾಣಿಸಿಕೊಂಡಿದ್ದರು. ಅವರ ಜನಪ್ರಿಯತೆಯ ಗ್ರಾಫ್‌ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಜಾಕಿ, ಹ್ಯುಬ್ಲೊ, ರೆಡ್‌ಬುಲ್‌, ಅಡಿಡಾಸ್‌ನಂತಹ ಪ್ರತಿಷ್ಠಿತ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲು ಮುಗಿಬಿದ್ದಿವೆ. ಇದರಿಂದ ಪೆರ‍್ರಿ ಅವರ ಬೊಕ್ಕಸಕ್ಕೆ ಹೇರಳ ಹಣ ಹರಿದುಬರುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು