ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವಿರಾಟ್ ಕೊಹ್ಲಿ ಪಿತೃತ್ವ ರಜೆಯ ನೆಪದಲ್ಲಿ...

ಆಟದ ಮನೆ
Last Updated 6 ಜನವರಿ 2021, 10:36 IST
ಅಕ್ಷರ ಗಾತ್ರ

ವಿರಾಟ್ ಕೊಹ್ಲಿ ಪ್ರಮುಖ ಕ್ರಿಕೆಟ್ ಟೆಸ್ಟ್ ಟೂರ್ನಿಯ ಸಂದರ್ಭದಲ್ಲಿ ಪ್ರಸವದ ದಿನ ಎದುರುನೋಡುತ್ತಿರುವ ಪತ್ನಿಯ ಬಗಲಲ್ಲಿ ಹೋಗಿ ಕುಳಿತಿರುವುದರ ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಆದರೀಗ ಕಾಲ ಬದಲಾಗಿದೆ. ಪಿತೃತ್ವ ರಜೆ ಪಡೆದು, ತಂದೆಯಾಗುವ ಸುಖ ಅನುಭವಿಸುವ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರಸವದ ಸಮಯದಲ್ಲಿ ಆದ ಸಂಕೀರ್ಣ ಸಮಸ್ಯೆಯಿಂದಾಗಿ ಉದರದ ಸ್ನಾಯುಗಳ ಭಾಗದಲ್ಲಿ ಸ್ಟೆಂಟ್‌ ಹಾಕಿಸಿಕೊಂಡು, ಕಂದಮ್ಮನಿಗೆ ಜನ್ಮ ನೀಡಿದ್ದರು ಸೆರೆನಾ ವಿಲಿಯಮ್ಸ್, ಅಮೆರಿಕದ ಈ ಟೆನಿಸ್ ತಾರೆ ಆಮೇಲೆ ದೇಹಸ್ಥಿತಿ ಸುಧಾರಿಸಿದ್ದೇ, ಹೊರತೆಗೆದ ಆ ಸ್ಟೆಂಟ್‌ ಅನ್ನು ಅಡುಗೆಮನೆಯ ಶೆಲ್ಫ್ ಮೇಲೆ ಇಟ್ಟುಕೊಂಡಿದ್ದರು. ಪದೇ ಪದೇ ಅದನ್ನು ನೋಡಿದರೆ ಅವರಿಗೆ ಹುಮ್ಮಸ್ಸು ಮರಳುತ್ತಿತ್ತಂತೆ. ಮನೆಗೆ ಹೊಂದಿಕೊಂಡ ದೊಡ್ಡ ಆವರಣದಲ್ಲಿನ ಟೆನಿಸ್‌ ಕೋರ್ಟ್‌ಗೆ ಇಳಿದು, ಅದರ ಮೇಲೆ ಬಿದ್ದಿರುತ್ತಿದ್ದ ಎಲೆಗಳನ್ನು ತಾವೇ ಗುಡಿಸಿ, ಗುಡ್ಡೆ ಮಾಡುವುದನ್ನೇ ವಾರ್ಮ್ಅಪ್ ಆಗಿ ಪರಿವರ್ತಿಸಿಕೊಂಡಿದ್ದರು. ಹೀಗೆ ಸ್ಟೆಂಟ್ ಕಡೆ ನೋಡುತ್ತಾ, ತಮ್ಮ ಉದರದ ಸ್ನಾಯುಗಳನ್ನೆಲ್ಲ ಮೊದಲಿನಂತೆ ಸಲೀಸು ಮಾಡಿಕೊಂಡು, ಮುಗುಳ್ನಗುತ್ತಿದ್ದ ಕಂದನ ಕಡೆಗೆ ಕಣ್ಣಾಡಿಸಿ, ಮತ್ತೆ ಟೆನಿಸ್ ರ‍್ಯಾಕೆಟ್ ಹಿಡಿದು ಅಭ್ಯಾಸ ಮಾಡಿ, ಗ್ರ್ಯಾಂಡ್‌ ಸ್ಲ್ಯಾಮ್‌ಗೆ ಮರುಪ್ರವೇಶ ಮಾಡಿದ್ದರು.

ಕ್ರೀಡಾಪಟುವಿಗೆ ತಾಯಿಯಾಗುವುದು ಸಂಭ್ರಮವಷ್ಟೇ ಅಲ್ಲ; ಬಾಲ್ಯದಿಂದ ಉತ್ಕಟತೆಯಿಂದ ಆಡಿಕೊಂಡು ಬಂದಿರುವ ಆಟದ ಪ್ರೀತಿಯನ್ನೂ ಉಳಿಸಿಕೊಂಡು ಅದಕ್ಕೆ ಮತ್ತೆ ಸಜ್ಜಾಗುವ ಸವಾಲು ಕೂಡ ಹೌದು. ಕಿಮ್ ಕ್ಲೈಸ್ಟರ್ಸ್ ಅವರೂ ಅಮ್ಮನಾದ ಮೇಲೆ ಹೀಗೆಯೇ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿ ಬೆರಗು ಮೂಡಿಸಿದ್ದರು.

ಈಗ ಅಪ್ಪನಾಗುವ ಬೆರಗಿನ ಸುದ್ದಿ ಗಾಳಿಯಲ್ಲಿ ತೇಲಾಡುತ್ತಿದೆ. ಅದರ ಸುತ್ತ ನಿಮಿಷಗಟ್ಟಲೆ ಚರ್ಚೆಗಳೂ ನಡೆಯುತ್ತಿವೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪನಾಗುವ ಸಂಭ್ರಮದಲ್ಲಿದ್ದಾರೆ. ಅದನ್ನು ಅವರು ತಿಂಗಳುಗಳ ಮೊದಲಿನಿಂದಲೇ ಆಸ್ವಾದಿಸಲಾರಂಭಿಸಿರುವುದು ಸಹಜವಾಗಿಯೇ ದೊಡ್ಡ ಸುದ್ದಿ. ಕೆಲವರು ಇದನ್ನು ಮುಂದುಮಾಡಿ, ಟೀಕಾಪ್ರಹಾರವನ್ನೂ ಮಾಡುತ್ತಿದ್ದಾರೆ. ಕೊಹ್ಲಿ ಎನ್ನುವ ‘ಬ್ರ್ಯಾಂಡ್ ವ್ಯಾಲ್ಯೂ’ ಹೀಗೆಲ್ಲ ಮಾತನಾಡಲು ಕಾರಣವಾಗಿದೆ.

ಸುನಿಲ್ ಗಾವಸ್ಕರ್
ಸುನಿಲ್ ಗಾವಸ್ಕರ್

ಸುನಿಲ್ ಗಾವಸ್ಕರ್ 1976ರಲ್ಲಿ ಅಪ್ಪನಾಗಿದ್ದರು. ನ್ಯೂಜಿಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ಪ್ರವಾಸಗಳಿಗೆ ಆಗ ಅವರು ಹೋಗಿದ್ದರು. ಸುನಿಲ್ ಪತ್ನಿ ಮಾರ್ಷ್‌ನೀಲ್ ಗಾವಸ್ಕರ್ ಅವರಿಗೂ ತಮ್ಮ ಪತಿ ದೇಶಕ್ಕಾಗಿ ಕ್ರಿಕೆಟ್ ಆಡುವುದೇ ಮುಖ್ಯವೆನಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳು ನಡೆದ ಸಂದರ್ಭದಲ್ಲಿ ಗಾವಸ್ಕರ್ ಗಾಯಾಳುವಾದರು. ಆಗ ಮೂರು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ವೆಸ್ಟ್‌ಇಂಡೀಸ್ ವಿರುದ್ದದ ಟೆಸ್ಟ್‌ ಶುರುವಾಗಲು ಸಮಯವಿತ್ತು. ಆ ‘ಸೈಕಲ್ ಗ್ಯಾಪ್’ನಲ್ಲೇ ಹೋಗಿ, ಮಡದಿಯ ಪಕ್ಕ ಕುಳಿತು ಅಪ್ಪನಾಗುವ ಸುಖ ಕಂಡುಬರೋಣ ಎಂದು ಗಾವಸ್ಕರ್ ಅವರಿಗೆ ಅನಿಸಿತು. ಆಗ ತಂಡದ ವ್ಯವಸ್ಥಾಪಕರಾಗಿದ್ದ ಪಾಲಿ ಉಮ್ರೀಗರ್ ಅವರ ಬಳಿ ತಮ್ಮ ವಿನಂತಿಯನ್ನು ಹೇಳಿಕೊಂಡರು. ತಮ್ಮದೇ ಖರ್ಚಿನಲ್ಲಿ ಹೋಗಿ ಬರುವುದಾಗಿ ತುಸು ಬಲವಾದ ಮಾತಿನ ಅರ್ಜಿಯನ್ನೇ ಗುಜರಾಯಿಸಿದ್ದರು. ಆಗ ಕಾಲ ಈಗಿನಂತೆ ಇರಲಿಲ್ಲ. ಉಮ್ರೀಗರ್ ಕರಗಲಿಲ್ಲ. ತಮ್ಮ ಮಗ ರೋಹನ್ ಹುಟ್ಟಿದ ಎರಡೂವರೆ ತಿಂಗಳುಗಳಾದ ಮೇಲೆ ಗಾವಸ್ಕರ್ ಅವನ ಮುಖ ನೋಡಲು ಸಾಧ್ಯವಾಗಿದ್ದು.

ಈಗ ಕೋವಿಡ್ ಕಾಲ. ಕ್ವಾರಂಟೈನ್‌ಗೆ ಇಷ್ಟು ದಿನಗಳೆಂದು ಮೀಸಲಿಡುವುದು ಅನಿವಾರ್ಯ. ಹೀಗಾಗಿ ಬೇರೆ ಸಂದರ್ಭಗಳಲ್ಲಿ ಕ್ರಿಕೆಟಿಗರಿಗೆ ಸಿಗುವ ಪಿತೃತ್ವ ರಜೆಗಿಂತ ಹೆಚ್ಚು ದಿನಗಳು ವಿರಾಟ್ ಕೊಹ್ಲಿ ಅವರಿಗೆ ಸಿಕ್ಕಿವೆ.

ಕಪಿಲ್ ದೇವ್ ಇತ್ತೀಚೆಗೆ ಈ ಬೆಳವಣಿಗೆಯ ಕುರಿತು ಮನಬಿಚ್ಚಿ ಹೀಗೆ ಮಾತನಾಡಿದರು: ‘ನಮ್ಮ ಕಾಲದಲ್ಲಿ ಬೇರೆ ಬೇರೆ ದೇಶಗಳಿಗೆ ವಿಮಾನಯಾನ ಈಗಿನಷ್ಟು ಸಲೀಸಾಗಿ ಇರಲಿಲ್ಲ. ಕ್ರಿಕೆಟ್ ಮಂಡಳಿ ಕೂಡ ದೊಡ್ಡ ಕನಸನ್ನು ಕಾಣುತ್ತಿರಲಿಲ್ಲ. ಆಟಗಾರರಿಗೆ ಸಿಕ್ಕ ಪಂದ್ಯಗಳಲ್ಲೆಲ್ಲ ಉತ್ತಮವಾಗಿ ಆಡಿ ಸ್ಥಾನ ಉಳಿಸಿಕೊಳ್ಳಬೇಕೆಂಬ ಹಸಿವು. ಹೀಗಿದ್ದಾಗ ತಂದೆಯಾಗುವ ಸಂದರ್ಭದಲ್ಲೂ ಎಷ್ಟೋ ಜನರು ಆಡುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ನನ್ನ ಮನಃಸ್ಥಿತಿಯೂ ಹಾಗೆಯೇ ಇತ್ತು. ಸುನಿಲ್ ಗಾವಸ್ಕರ್ ಕೂಡ ಅದೇ ಕಾರಣದಿಂದಾಗಿ ತಮ್ಮ ಮಗನನ್ನು ಎರಡೂವರೆ ತಿಂಗಳುಗಳಾದ ಮೇಲೆ ನೋಡಲು ಆದದ್ದು. ಈಗ ಕಾಲ ಬದಲಾಗಿದೆ. ವಿರಾಟ್ ಕೊಹ್ಲಿ ಕೂಡ ತಮ್ಮ ತಂದೆ ಮೃತಪಟ್ಟ ಸಂದರ್ಭದಲ್ಲಿ ಆಟಕ್ಕೇ ಆದ್ಯತೆ ನೀಡಿದ್ದರು. ಈಗ ಅವರೇ ತಂದೆಯಾಗುವ ಸಂದರ್ಭವನ್ನು ಸುಖಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಈಗ ವಿಮಾನಯಾನಕ್ಕೆಂದು ದೊಡ್ಡ ಮೊತ್ತ ಖರ್ಚು ಮಾಡುವಷ್ಟು ಶ್ರೀಮಂತಿಕೆ ಕ್ರಿಕೆಟಿಗರಿಗೂ ಇದೆ, ನಮ್ಮ ಮಂಡಳಿಗಳಿಗೂ ಇದೆ’.

2015ರ ವಿಶ್ವಕಪ್ ಶುರುವಾಗುವ ಮುಂಚೆ ಆಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಳ್ಳಕೂಡದು ಎಂದು ಮಹೇಂದ್ರ ಸಿಂಗ್ ಧೋನಿ ಪಿತೃತ್ವ ರಜೆ ಪಡೆದಿರಲಿಲ್ಲ. ಆಗ ಅವರ ಪತ್ನಿ ಸಾಕ್ಷಿ ಮಗಳಿಗೆ ಜನ್ಮ ನೀಡಿದ್ದರು. ಸೌರವ್ ಗಂಗೂಲಿ ಕೂಡ ಪಿತೃತ್ವ ರಜೆ ಪಡೆದವರಲ್ಲ. ವೀಕ್ಷಕ ವಿವರಣೆಕಾರರಾದ ಹರ್ಷ ಭೋಗ್ಲೆ ಹಾಗೂ ರವಿಶಾಸ್ತ್ರಿ ಈ ವಿಷಯವನ್ನು ಪ್ರಸ್ತಾಪಿಸಿ, ‘ಪ್ರಮುಖ ಆಟಗಾರರು ಪಿತೃತ್ವ ರಜೆ ಪಡೆಯುವುದು ಒಳ್ಳೆಯದೇ. ಆಗ ಬೇರೆ ಪ್ರತಿಭಾವಂತರಿಗೆ ತಮ್ಮ ಆಟ ಗಟ್ಟಿಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಎಷ್ಟೇ ಆದರೂ ಕ್ರಿಕೆಟ್ ಸಾಂಘಿಕ ಆಟವಲ್ಲವೇ?’ ಎಂದಿದ್ದರು.

ಕೋವಿಡ್ ಬಂದಮೇಲೆ, ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ಕ್ರಿಕೆಟ್ ನಾಯಕ ಜೋ ರೂಟ್ ತಂದೆಯಾಗುವ ಸುಖ ಅನುಭವಿಸಲು ಪಿತೃತ್ವ ರಜೆ ಪಡೆದಿದ್ದರು. ವೆಸ್ಟ್ಇಂಡೀಸ್ ಎದುರಿನ ಮೊದಲ ಟೆಸ್ಟ್‌ ಪಂದ್ಯ ಆಡದೆ, ಎರಡನೇ ಪಂದ್ಯಕ್ಕೆ ಮರಳಿದ್ದರು. 2018ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಪಿತೃತ್ವ ರಜೆ ಪಡೆದುಕೊಂಡೇ ಭಾರತದ ರೋಹಿತ್ ಶರ್ಮ ತಮ್ಮ ಪತ್ನಿಯ ತಲೆ ನೇವರಿಸಿ ಬಂದಿದ್ದರು. ಅದು ವಿರಾಟ್ ಕೊಹ್ಲಿ ರಜೆಯಷ್ಟು ದೊಡ್ಡ ಸುದ್ದಿ ಆಗಿರಲಿಲ್ಲ.

2019ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್‌ ಆಟಗಾರ ಜೋ ಡೆನ್ಲಿಗೆ ಪಿತೃತ್ವ ರಜೆ ಸಿಕ್ಕಿತ್ತು. ಪ್ರಸವದ ಕ್ಷಣಗಳನ್ನು ನೋಡಿದ ಅವರು, ಮರುದಿನ ಮತ್ತೆ ತಮ್ಮ ತಂಡ ಸೆರಿಸಿಕೊಂಡಿದ್ದರು, ನ್ಯೂಜಿಲೆಂಡ್‌ ಕ್ರಿಕೆಟ್ ತಂಡದ ಸಮರ್ಥ ನಾಯಕ ಕೇನ್ ವಿಲಿಮಯ್ಸನ್ ಇತ್ತೀಚೆಗಷ್ಟೇ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್‌ ಪಂದ್ಯವೊಂದರಲ್ಲಿ ಆಡದೆ, ಪಿತೃತ್ವ ರಜೆ ಪಡೆದುಕೊಂಡಿದ್ದರು.

79 ದೇಶಗಳಲ್ಲಿ ಕ್ರೀಡಾಪಟುಗಳಿಗೆ ಪಿತೃತ್ವ ರಜೆ ಕೊಡುತ್ತಾರೆ. ಟ್ಯುನಿಷಿಯಾದಲ್ಲಿ ಒಂದೇ ದಿನ. ಐಸ್‌ಲ್ಯಾಂಡ್‌ನಲ್ಲಿ 90 ದಿನ. ಸ್ಲೊವೇನಿಯಾ ಹಾಗೂ ಫಿನ್‌ಲೆಂಡ್‌ನಲ್ಲಿ 54 ದಿನಗಳ ಅವಧಿಗೆ ಸಂಬಳ ಸಹಿತ ರಜೆ ಎಲ್ಲರಿಗೂ ಸಿಗುತ್ತದೆ. ಕೆಲವು ದೇಶಗಳಲ್ಲಿ ಸಂಬಳರಹಿತ ಪಿತೃತ್ವ ರಜೆಯ ಸೌಕರ್ಯವೂ ಇದೆ.

ಬಡವರಾದರೇನು, ಶ್ರೀಮಂತರಾದರೇನು; ತಂದೆಯಾಗುವ ಸುಖ ಕಾಣುವುದರಲ್ಲಿ ತಪ್ಪೇನು? ಎನ್ನುವ ಸಾರ್ವತ್ರಿಕ ವಾದವನ್ನು ಯಾರೇ ಆದರೂ ಒಪ್ಪಬೇಕು. ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ತಮ್ಮ ಪತ್ನಿಯ ಮೊದಲ ಹೆರಿಯ ದಿನಾಂಕವನ್ನೇ ನಿರ್ಧರಿಸಿದ್ದರು. ಸಿಜೇರಿಯನ್ ಮಾಡಿಸಿ, ಅದಾಗಿ ಎರಡೇ ದಿನಗಳಲ್ಲಿ ಪಿಜಿಎ ಟೂರ್‌ನಲ್ಲಿ ಆಡಲು ಅವರು ಕ್ಯಾಲೆಂಡರ್ ಸಿದ್ಧಪಡಿಸಿದ್ದರು.

ಈಗ ವಿರಾಟ್ ಕೊಹ್ಲಿ ಕ್ರಿಕೆಟ್‌ ಕಣ್ಮಣಿಯಷ್ಟೇ ಅಲ್ಲ, ಕುಟುಂಬ ಪ್ರೀತಿಸುವ ವ್ಯಕ್ತಿಯೂ ಆಗಿ ಸುದ್ದಿಯಲ್ಲಿದ್ದಾರೆ. ಹೀಗಾಗಿಯೇ ಅವರ ಪತ್ನಿ ಅನುಷ್ಕಾ ಶರ್ಮ ಅವರಿಗೆ ತಾಯ್ತನದ ವಿಶೇಷ ಸುಖ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT