ಸೋಮವಾರ, ಅಕ್ಟೋಬರ್ 26, 2020
28 °C

PV Web Exclusive | ಶೂ ಕೊಳ್ಳಲೂ ಕಾಸಿಲ್ಲದಿದ್ದ ಕ್ರಿಕೆಟಿಗ ಈಗ ಕೋಟ್ಯಧಿಪತಿ!

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಜೀವನವೇ ಹಾಗೆ. ಅದು ವಿಸ್ಮಯಗಳ ಮೂಟೆ. ಇಲ್ಲಿ ನಾವಂದುಕೊಂಡಂತೆ ಏನೂ ನಡೆಯೊಲ್ಲ. ಬಡತನವನ್ನು ಶಾಪವೆಂದು ಭಾವಿಸಿದರೆ ಕಥೆ ಮುಗಿದಂತೆಯೇ. ಅದನ್ನೇ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಹೀಗೆ ಅವಿರತ ಪರಿಶ್ರಮದಿಂದಲೇ ಸಾಧನೆಯ ಶಿಖರವನ್ನೇರಿದ ಹಲವರು ನಮ್ಮ ನಡುವೆಯೇ ಇದ್ದಾರೆ. ಅವರ ಯಶೋಗಾಥೆಗಳನ್ನು ನೀವೂ ಕೇಳಿರುತ್ತೀರಿ. ಅಂತಹವರ ಸಾಲಿಗೆ ಸೇರುವವರು ತಂಗರಸು ನಟರಾಜನ್‌.

ಕ್ರಿಕೆಟ್‌ ವಲಯದಲ್ಲಿ ‘ಯಾರ್ಕರ್‌ ಕಿಂಗ್‌’ ಎಂದೇ ಖ್ಯಾತರಾಗಿರುವ ಟಿ.ನಟರಾಜನ್,‌ ಅಪ್ಪಟ ದೇಶಿ ಪ್ರತಿಭೆ. ಬಡತನದ ಕುಲುಮೆಯಲ್ಲಿ ಬೆಂದು ಅರಳಿದವರು. ಕಲ್ಲು ಮುಳ್ಳುಗಳ ಹಾದಿಯಲ್ಲಿ ಸಾಗಿಯೇ ಬಂಗಾರದ ಬದುಕು ಕಟ್ಟಿಕೊಂಡವರು. ತಮ್ಮ ಸಾಧನೆಯ ಮೂಲಕ ಇಂದು ಅದೆಷ್ಟೊ ಮಂದಿಗೆ ಸ್ಫೂರ್ತಿಯ ಚಿಲುಮೆಯೂ ಆಗಿದ್ದಾರೆ.

ಎಡಗೈ ವೇಗಿ ನಟರಾಜನ್‌ ಜನಿಸಿದ್ದು ತಮಿಳುನಾಡಿನ ಸೇಲಂ ಬಳಿಯ ಚಿನ್ನಪ್ಪಾಂಪಟ್ಟಿ ಗ್ರಾಮದಲ್ಲಿ. ಅವರ ತಂದೆ ವಿದ್ಯುತ್‌ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು. ಕೋಳಿ ಅಂಗಡಿ (ಚಿಕನ್‌ ಸೆಂಟರ್‌) ನಡೆಸುತ್ತಾ ಬದುಕಿನ ಬಂಡಿಯ ನೊಗಕ್ಕೆ ತಾಯಿ ಹೆಗಲು ಕೊಟ್ಟಿದ್ದರು. ಈ ದಂಪತಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು. ಇವರ ಪೈಕಿ ನಟರಾಜನ್‌ ಎಲ್ಲರಿಗಿಂತಲೂ ಹಿರಿಯ.  

ನಟರಾಜನ್‌, ಬಾಲ್ಯದಿಂದಲೇ ಕಷ್ಟವನ್ನು ನೋಡುತ್ತಾ ಬೆಳೆದವರು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಪೆನ್ಸಿಲ್‌ ಹಾಗೂ ನೋಟ್‌ಬುಕ್‌ ಕೊಳ್ಳಲೂ ಅವರ ಬಳಿ ದುಡ್ಡಿರಲಿಲ್ಲವಂತೆ. ಇತ್ತೀಚೆಗೆ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದರು.

ಬದುಕು ಬದಲಿಸಿದ ಕ್ರಿಕೆಟ್‌..

ಎಲ್ಲರ ಹಾಗೆ ನಟರಾಜನ್‌ಗೂ ಕ್ರಿಕೆಟ್‌ ಎಂದರೆ ಬಲು ಪ್ರೀತಿ. ಐದನೇ ತರಗತಿಯಲ್ಲಿದ್ದಾಗ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಲು ಶುರುಮಾಡಿದ ಅವರು ಕ್ರಮೇಣ ಅದರಲ್ಲೇ ಪಳಗಿದರು. ಅವರು ಇತರರ ಹಾಗೆ 16, 19, 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಿದವರೇನಲ್ಲ. 

2010–11ನೇ ಸಾಲಿನಲ್ಲಿ ನಡೆದಿದ್ದ ನಾಲ್ಕನೇ ಡಿವಿಷನ್‌ ಕ್ರಿಕೆಟ್‌ ಲೀಗ್‌ನಲ್ಲಿ ಬಿಎಸ್‌ಎನ್‌ಎಲ್‌ ತಂಡವನ್ನು ಪ್ರತಿನಿಧಿಸಿದ್ದ ಅವರು ಪರಿಣಾಮಕಾರಿ ಯಾರ್ಕರ್‌ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದರು. 2012–13ನೇ ಸಾಲಿನಲ್ಲಿ ನಡೆದಿದ್ದ ಮೊದಲ ಡಿವಿಷನ್‌ ಲೀಗ್‌ನಲ್ಲಿ ವಿಜಯ ಕ್ಲಬ್‌ ಪರ ಆಡಿ ಗಮನಸೆಳೆದಿದ್ದರು. 

ಹೀಗಾಗಿ ಅವರಿಗೆ ತಮಿಳುನಾಡು ರಣಜಿ ತಂಡದಲ್ಲಿ ಅವಕಾಶದ ಬಾಗಿಲು ತೆರೆದಿತ್ತು. 2015ರಲ್ಲಿ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಬಂಗಾಳ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟಿದ್ದರು. ಆ ಪಂದ್ಯದಲ್ಲೇ ದೊಡ್ಡ ಆಘಾತವೂ ಎದುರಾಗಿತ್ತು. ‘ಅನುಮಾನಾಸ್ಪದ ಬೌಲಿಂಗ್‌‌’ ಕಾರಣ ಅವರನ್ನು ಟೂರ್ನಿಯಿಂದಲೇ ಹೊರಹಾಕಲಾಗಿತ್ತು. ನಂತರ ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. 

ಜಾಲಿ ರೋವರ್ಸ್‌ ಕ್ಲಬ್‌ನ ಭರತ್‌ ರೆಡ್ಡಿ, ಜಯಕುಮಾರ್ ಹೀಗೆ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಹಗಲಿರುಳೆನ್ನದೇ ಕಷ್ಟಪಟ್ಟು ಬೌಲಿಂಗ್‌ ಶೈಲಿಯಲ್ಲಿ ಮಾರ್ಪಾಡು ಮಾಡಿಕೊಂಡರು. 

ಕೋಟ್ಯಧಿಪತಿಯಾದ ಕಥೆ..

ಆ ಅಜ್ಞಾತವಾಸ ಅನುಭವಿಸಿ ಬಂದ ನಂತರ ನಟರಾಜನ್‌ ಬದುಕಲ್ಲಿ ಹೊಸ ಬೆಳಕು ಮೂಡಿತು. ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ (ಟಿಎನ್‌ಪಿಎಲ್‌) ಮೋಡಿ ಮಾಡಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಫ್ರಾಂಚೈಸ್‌ಗಳ ಗಮನ ಸೆಳೆದರು.

2017ರ ಆಟಗಾರರ ಹರಾಜಿನಲ್ಲಿ ನಟರಾಜನ್‌ ಹೆಸರು ಪ್ರಸ್ತಾಪವಾದೊಡನೆಯೇ ಅವರನ್ನು ಸೆಳೆದುಕೊಳ್ಳಲು ಫ್ರಾಂಚೈಸ್‌ಗಳು ಮುಗಿಬಿದ್ದವು. ಹೀಗಾಗಿ ಅವರ ಬೆಲೆಯೂ ಏರುತ್ತಲೇ ಹೋಯಿತು. ಅಂತಿಮವಾಗಿ ಅವರು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಪಾಲಾದರು. ₹10 ಲಕ್ಷ ಮೂಲ ಬೆಲೆ ಹೊಂದಿದ್ದ ನಟರಾಜನ್‌ಗೆ ಸಿಕ್ಕಿದ್ದು ₹3 ಕೋಟಿ!

‘ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ’ ಎಂದು ಆಗ ಅವರು ಪ್ರತಿಕ್ರಿಯಿಸಿದ್ದರು.

ಆ ಆವೃತ್ತಿಯಲ್ಲಿ ನಿರೀಕ್ಷಿತ ಸಾಮರ್ಥ್ಯ ಮೂಡಿಬರಲಿಲ್ಲ. ಹೀಗಾಗಿ ಅವರನ್ನು ಕಿಂಗ್ಸ್‌ ಇಲೆವನ್‌ ತಂಡದಿಂದ ಹೊರದಬ್ಬಲಾಯಿತು. ನಂತರ ಅವರ ಕೈ ಹಿಡಿದಿದ್ದು ಸನ್‌ರೈಸರ್ಸ್‌ ಹೈದರಾಬಾದ್‌. 2018ರ ಐಪಿಎಲ್‌ ಹರಾಜಿನಲ್ಲಿ ಸನ್‌ರೈಸರ್ಸ್‌ ಪಾಲಾದ ನಟರಾಜನ್‌ ನಂತರದ ಎರಡು ಆವೃತ್ತಿಯಲ್ಲಿ ‘ಬೆಂಚ್‌ ಕಾಯುವುದಕ್ಕೆ’ ಸೀಮಿತರಾಗಿದ್ದರು. ಇದರಿಂದ ಹತಾಶರಾಗಿದ್ದ ಅವರಲ್ಲಿ ಉತ್ಸಾಹ ತುಂಬಿದವರು ವಿವಿಎಸ್‌ ಲಕ್ಷ್ಮಣ್‌, ಮುತ್ತಯ್ಯ ಮುರಳೀಧರನ್‌ ಹಾಗೂ ಭುವನೇಶ್ವರ್‌ ಕುಮಾರ್‌. ಇವರ ಗರಡಿಯಲ್ಲಿ ಪಳಗಿದ ನಟರಾಜನ್‌ ಈ ಸಲದ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಕೆಟ್‌ ಉರುಳಿಸಿ ಸಂಭ್ರಮಿಸಿದ್ದಾರೆ. 

ಇಂದು ನಟರಾಜನ್‌ ಬಳಿ ಬೇಕಾದಷ್ಟು ದುಡ್ಡಿದೆ. ತಾರಾ ವರ್ಚಸ್ಸು ಲಭಿಸಿದೆ. ಆದರೆ, ಹತ್ತು ವರ್ಷಗಳ ಹಿಂದೆ ಇದ್ದ ಪ‍ರಿಸ್ಥಿತಿಯೇ ಬೇರೆ. ಆಗ ಅವರ ಹತ್ತಿರ ಒಂದು ಜೊತೆ ಶೂ ಕೊಂಡುಕೊಳ್ಳುವುದಕ್ಕೂ ಕಾಸಿರಲಿಲ್ಲ.

‘ಶೂ, ಜೆರ್ಸಿ ಹಾಗೂ ಇತರೆ ಕ್ರಿಕೆಟ್‌ ಪರಿಕರಗಳನ್ನು ಖರೀದಿಸಲು ನನ್ನ ಬಳಿ ದುಡ್ಡೇ ಇರಲಿಲ್ಲ. ಯಾವುದಾದರೂ ಟೂರ್ನಿಯಲ್ಲಿ ಆಡಲು ಮತ್ತೊಂದು ಊರಿಗೆ ಹೋಗಬೇಕೆಂದರೂ ಕೈಯಲ್ಲಿ ಕಾಸಿರುತ್ತಿರಲಿಲ್ಲ. ಅದಕ್ಕಾಗಿಯೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಯೋಜನೆಯಾಗುತ್ತಿದ್ದ ವಿವಿಧ ಟೂರ್ನಿಗಳಲ್ಲಿ ಆಡುತ್ತಿದ್ದೆ. ಅಲ್ಲಿ ಸಿಕ್ಕ ಹಣವನ್ನು ಕೂಡಿಟ್ಟುಕೊಳ್ಳುತ್ತಿದ್ದೆ. ನಾನು ಪ್ರತಿನಿಧಿಸುವ ತಂಡದವರು ಒಂದು ಜೊತೆ ಶೂ ಕೊಡುತ್ತಿದ್ದರು. ಅದನ್ನು ಜತನದಿಂದ ಕಾಪಾಡಿಕೊಂಡು ಆ ವರ್ಷ  ನಡೆಯುವ ಎಲ್ಲಾ ಟೂರ್ನಿಗಳಲ್ಲೂ ಪಾಲ್ಗೊಳ್ಳುತ್ತಿದ್ದೆ’ ಎಂದು ಸನ್‌ರೈಸರ್ಸ್‌ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ನಟರಾಜನ್‌ ಹೇಳಿದ್ದರು.

ನಟರಾಜನ್‌ ಪಾಲಿನ ‘ಗಾಡ್‌ ಫಾದರ್‌’..

ಅಂದ ಹಾಗೆ ನಟರಾಜನ್‌ ಇಷ್ಟು ಎತ್ತರಕ್ಕೆ ಬೆಳೆಯುವುದರ ಹಿಂದೆ ಅವರ ಪರಿಶ್ರಮದ ಜೊತೆಗೆ ‘ಗಾಡ್‌ ಫಾದರ್‌’ ಕಾಣಿಕೆಯೂ ಬಹಳ ದೊಡ್ಡದಿದೆ. ಆ ‘ಗಾಡ್‌ ಫಾದರ್‌’‌ ಹೆಸರು ಜಯಪ್ರಕಾಶ್‌. ನಟರಾಜನ್‌‌ ಪ್ರತಿಭೆಯನ್ನು ಗುರುತಿಸಿ ಪೋಷಿಸಿದವರು ಅವರು. ಈ ಕಾರಣಕ್ಕಾಗಿಯೇ ಜಯಪ್ರಕಾಶ್‌ ಮೇಲೆ ನಟರಾಜನ್‌ಗೆ ವಿಶೇಷ ಗೌರವ. ಅದಕ್ಕಾಗಿಯೇ ಈ ಬಾರಿಯ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ‘ಜೆಪಿ ನಟ್ಟು’ ಎಂಬ ಹಿಂಬರಹ ಹೊಂದಿದ್ದ ಜೆರ್ಸಿ ತೊಟ್ಟಿದ್ದರು. ಅದಷ್ಟೇ ಅಲ್ಲ, ತಮ್ಮ ಎಡಗೈ ಮೇಲೆ ಜೆಪಿ ಎಂದು ಹಚ್ಚೆ ಕೂಡಾ ಹಾಕಿಸಿಕೊಂಡಿದ್ದಾರೆ. 

ಊರಲ್ಲಿ ತಲೆ ಎತ್ತಿದ ಅಕಾಡೆಮಿ..

ತಾನು ಬೆಳೆದರೆ ಸಾಲದು ತನ್ನೂರಿನ ಹಾಗೂ ಅಕ್ಕಪಕ್ಕದ ಹಳ್ಳಿಗಳ ಹುಡುಗರೂ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡಬೇಕು ಎಂಬುದು ನಟರಾಜನ್‌ ಕನಸು. ಅದಕ್ಕಾಗಿ ಊರಲ್ಲೇ ಕ್ರಿಕೆಟ್‌ ಅಕಾಡೆಮಿ ಕೂಡ ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ಜೆಪಿ ಕೂಡ ಕೈಜೋಡಿಸಿದ್ದಾರೆ. ಅಕಾಡೆಮಿಯಲ್ಲಿ 50–60 ಹುಡುಗರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.

ಈ ಅಕಾಡೆಮಿಯಲ್ಲಿ ಕಲಿತವರು ಚೆನ್ನೈ ಲೀಗ್‌ನಲ್ಲಿ ಮಿಂಚುತ್ತಿದ್ದಾರೆ. ಹೋದ ವರ್ಷದ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಗರ್ಜಿಸಿದ್ದ ಪೆರಿಯಸಾಮಿ ಕೂಡ ಇದೇ ಅಕಾಡೆಮಿಯ ಪ್ರತಿಭೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು