ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿದ್ರೂ ಮರೆತಿಲ್ಲ ಫಿಟ್‌ನೆಸ್‌

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ಕಾರ್ಮೋಡ ದಟ್ಟೈಸುತ್ತಿರುವುದರಿಂದ ಕೇಂದ್ರ ಸರ್ಕಾರವು ದೇಶದಾದ್ಯಂತ ‘ಲಾಕ್‌ಡೌನ್‌’ ಜಾರಿಗೊಳಿಸಿದೆ. ಇದರಿಂದ ಅಗತ್ಯ ಸೇವೆಗಳನ್ನು ಬಿಟ್ಟು ಉಳಿದೆಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇತರರಂತೆ ಕ್ರೀಡಾಪಟುಗಳೂ ಸ್ವಯಂ ಪ್ರತ್ಯೇಕ ವಾಸದ ಮೊರೆ ಹೋಗಿದ್ದಾರೆ.

ಜಿಮ್‌ಗಳು ಹಾಗೂ ತರಬೇತಿ ಕೇಂದ್ರಗಳಿಗೆ ಬೀಗ ಹಾಕಿದ್ದರೂ ‘ಕ್ರೀಡಾಕಲಿ’ಗಳು ಫಿಟ್‌ನೆಸ್‌ ಮಂತ್ರ ಮರೆತಿಲ್ಲ. ಮನೆಯಲ್ಲಿಯೇ ದೇಹ ದಂಡಿಸುತ್ತಾ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಯಾರ್ಯಾರು ಏನೇನು ಮಾಡುತ್ತಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕ್ರಿಕೆಟಿಗರ ಫಿಟ್‌ನೆಸ್‌ ಮಂತ್ರ

ಶಸ್ತ್ರ ಚಿಕಿತ್ಸೆಯ ಕಾರಣ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಾರ್ದಿಕ್‌ ಪಾಂಡ್ಯ, ಈಗಭಾರತ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಅವರ ‘ಕಮ್‌ಬ್ಯಾಕ್‌’ಗೆ ಕೊರೊನಾ ಅಡ್ಡಿಯಾಗಿದೆ. ಲಾಕ್‌ಡೌನ್‌ನಿಂದಾಗಿ ಸಿಕ್ಕಿರುವ ‘ಬಲವಂತದ ರಜೆ’ಯನ್ನು ಖುಷಿಯಿಂದ ಕಳೆಯುತ್ತಿರುವ ಅವರು ಫಿಟ್‌ನೆಸ್‌ನತ್ತಲೂ ಚಿತ್ತ ಹರಿಸಿದ್ದಾರೆ.

ಮನೆಯಲ್ಲಿರುವ ಡಂಬೆಲ್‌ಗಳ ನೆರವಿನಿಂದ ಸ್ಕ್ವಾಟ್ಸ್‌, ಡೆಡ್‌ ಲಿಫ್ಟ್‌, ಲಂಚಸ್‌ ಹಾಗೂ ಪುಶಪ್ಸ್‌ ಮಾಡುತ್ತಿದ್ದಾರೆ. ‘ಕ್ವಾರಂಟೈನ್‌ ಟ್ರೈನಿಂಗ್‌’ ಎಂಬ ಅಡಿಬರಹದೊಂದಿಗೆ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ವಿಡಿಯೊ ಎಲ್ಲರ ಮನಗೆದ್ದಿತ್ತು.

ಕನ್ನಡಿಗ ಕೆ.ಎಲ್‌.ರಾಹುಲ್‌ ಕೂಡ ಮನೆಯಲ್ಲೇ ದೇಹ ದಂಡಿಸುತ್ತಿದ್ದಾರೆ. ಮನೆಯ ತಾರಸಿಯೇ ಅವರ ಪಾಲಿಗೆ ಜಿಮ್‌ ಆಗಿದೆ. ಕಬ್ಬಿಣದ ಬಾರ್‌ನ ಸಹಾಯದಿಂದ ‘ವೇಟ್‌ ಟ್ರೈನಿಂಗ್‌’ ಮಾಡಿ ಮಾಂಸ ಖಂಡಗಳನ್ನು ಬಲಪಡಿಸಿಕೊಳ್ಳುತ್ತಿರುವ ಅವರು ಬೆಂಟ್‌ ಓವರ್‌ ರೋ, ಶೋಲ್ಡರ್‌ ಪ್ರೆಸ್‌, ಡೆಡ್‌ ಲಿಫ್ಟ್‌ ನಂತಹ ವ್ಯಾಯಾಮಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನಿತ್ಯವೂ ‘ಟ್ರೆಡ್‌ಮಿಲ್‌’ನಲ್ಲಿ ಓಡುತ್ತಿರುವ ಅವರು ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗದಂತೆ ಎಚ್ಚರ ವಹಿಸುತ್ತಿದ್ದಾರೆ.

ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜ ಅವರೂ ಕಾರ್ಡಿಯೊ ವ್ಯಾಯಾಮಗಳ ಮೊರೆ ಹೋಗಿದ್ದಾರೆ. ‘ರನ್ನಿಂಗ್‌ ಈಸ್‌ ಮೈ ಸ್ಟ್ರೆಂತ್‌. ಪರ್ಫೆಕ್ಟ್‌ ಟೈಮ್‌ ಟು ರಿಪೇರ್‌ ಮೈ ಬಾಡಿ’ ಎಂಬ ಅಡಿಬರಹದೊಂದಿಗೆಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವ ವಿಡಿಯೊವನ್ನು ಜಡೇಜ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಶಿಖರ್‌ ಧವನ್‌ ಅವರು ತಮ್ಮ ಮನೆಯ ಸಮೀಪದ ಉದ್ಯಾನದಲ್ಲಿ ಮರಕ್ಕೆ ರೆಸಿಸ್ಟೆಂಟ್‌ ಬ್ಯಾಂಡ್‌ ಕಟ್ಟಿಕೊಂಡು ಅದರ ಸಹಾಯದಿಂದ ಬೈಸೆಪ್ಸ್‌ ಮತ್ತು ಓವರ್‌ ಹೆಡ್‌ ಟ್ರೈಸೆಪ್ಸ್‌ ಎಕ್ಸ್‌ಟೆನ್ಷನ್‌, ಸ್ಟ್ಯಾಂಡಿಂಗ್‌ ಚೆಸ್ಟ್‌ ಪ್ರೆಸ್‌ ವ್ಯಾಯಾಮಗಳನ್ನು ಮಾಡಿದ್ದರು. ಮರದ ಕೊಂಬೆಗಳನ್ನು ಹಿಡಿದು ಪುಲ್‌ಅಪ್ಸ್‌ ಕೂಡ ಮಾಡಿ ಗಮನ ಸೆಳೆದಿದ್ದರು.

ಫುಟ್‌ಬಾಲ್‌ ಆಟಗಾರರೂ ಹಿಂದೆ ಬಿದ್ದಿಲ್ಲ

ಫಿಟ್‌ನೆಸ್‌ ವಿಚಾರದಲ್ಲಿ ಫುಟ್‌ಬಾಲ್‌ ಆಟಗಾರರು ಇತರ ಕ್ರೀಡಾಪಟುಗಳಿಗಿಂತ ಒಂದು ಹೆಜ್ಜೆ ಮುಂದಿ ರುತ್ತಾರೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಈ ವಿಷಯದಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಮನೆಯಲ್ಲೇ ಜಿಮ್‌ ಹೊಂದಿರುವ ಅವರು ಲೆಗ್‌ಪ್ರೆಸ್‌, ಲೆಗ್‌ ಎಕ್ಸ್‌ಟೆನ್ಷನ್‌, ಕ್ರಂಚಸ್‌ ಸೇರಿದಂತೆ ಅನೇಕ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಇಟಲಿಯ ಮರಿಯೊ ಬಲೋಟೆಲಿ ಅವರು ಆ್ಯಬ್ಸ್‌ಗೆ (ಹೊಟ್ಟೆ ಕರಗಿಸಲು) ಸಂಬಂಧಿಸಿದ ಬಟರ್‌ಪ್ಲೈ ಕ್ರಂಚಸ್‌, ಸಿಟ್‌–ಅಪ್‌, ಜಾಕ್‌ನೈಫ್‌ ಸಿಟ್‌–ಅಪ್‌ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಬೆಲ್ಜಿಯಂ ತಂಡದ ಆಟಗಾರ ಮಿಕಿ ಬತಸುವಯೀ ಅವರು ಸ್ಕಿಪ್ಪಿಂಗ್‌ ಹಾಗೂ ಬಾಕ್ಸಿಂಗ್‌, ಬ್ರೆಜಿಲ್‌ನ ಮಾರ್ಷೆಲೊ ಅವರು ಕ್ರಾಸ್‌ ಟ್ರೈನರ್‌ನಲ್ಲಿ ತೊಡಗಿಕೊಂಡು ಅಂಗ ಸೌಷ್ಠವ ಕಾಪಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT