ಬುಧವಾರ, ನವೆಂಬರ್ 25, 2020
22 °C

ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಲಿ: ರಾಹುಲ್ ದ್ರಾವಿಡ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿ20 ಕ್ರಿಕೆಟ್‌ ಮುಂಬರುವ ಒಲಿಂಪಿಕ್ಸ್‌ನ ಭಾಗವಾಗಬೇಕು ಎಂಬ ವಿಚಾರಕ್ಕೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್‌ ಬೆಂಬಲ ಸೂಚಿಸಿದ್ದಾರೆ.

ಮನೋಜ್‌ ಬಾದಲ್‌ ಮತ್ತು ಸೈಮನ್‌ ಹ್ಯೂಸ್‌ ಅವರ ‘ಎ ನ್ಯೂ ಇನಿಂಗ್ಸ್‌’ ಪುಸ್ತಕವನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಬಳಿಕ ಈ ಕುರಿತು ಮಾತನಾಡಿದ ದ್ರಾವಿಡ್‌, ‘ಟಿ20 ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದರಿಂದ ಈ ಕ್ರೀಡೆಗೆ ಒಳಿತಾಗುತ್ತದೆ ಎಂದು ನನಗನಿಸುತ್ತದೆ. ಏಕೆಂದರೆ, 75 ದೇಶಗಳಲ್ಲಿ ಕ್ರಿಕೆಟ್‌ ಆಡಲಾಗುತ್ತದೆ. ಖಂಡಿತ ನಾನೂ ಟಿ20 ಮಾದರಿಯ ಬೆಳವಣಿಗೆಯ ಪರ ಇದ್ದೇನೆ’ ಎಂದಿದ್ದಾರೆ.

ಮುಂದುವರಿದು, ‘ಇದು (ಟಿ20 ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದು) ನಿಸ್ಸಂಶಯವಾಗಿ ಸಾಕಷ್ಟು ಸವಾಲುಗಳನ್ನು ಹೊಂದಿದೆ. ಇದು ಯಶಸ್ವಿಯಾಗಬೇಕಾದರೆ ಸಾಕಷ್ಟು ಸೌಲಭ್ಯಗಳ ಅಗತ್ಯವಿದೆ. ಒಲಿಂಪಿಕ್ಸ್‌‌ ಕ್ರೀಡಾಕೂಟವು ಕ್ರಿಕೆಟ್ ಆಡದ ದೇಶಗಳಲ್ಲಿಯೂ ನಡೆಯುತ್ತದೆ. ಆದರೆ, ಸೌಲಭ್ಯಗಳನ್ನು ಪಡೆದುಕೊಂಡರೆ ಮತ್ತು ವೇಳಾಪಟ್ಟಿ ಹೊಂದಾಣಿಕೆ ಮಾಡಲು ಸಾಧ್ಯವಾದರೆ ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ಗೆ ಸೇರಿಸುವ ಪ್ರಯತ್ನ ಮಾಡಬೇಕು. ಹೌದು ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ಏಕೆ ಸಾಧ್ಯವಾಗಬಾರದು’ ಎಂದಿದ್ದಾರೆ.

ಚುಟುಕು ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನ ಭಾಗವಾಗಿಸುವ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ (ಐಸಿಸಿ) 2018ರಲ್ಲಿ ಮಾತುಕತೆ, ಸಮೀಕ್ಷೆ ನಡೆಸಿತ್ತು. ಸಮೀಕ್ಷೆ ವೇಳೆ ಶೇ.87ರಷ್ಟು ಅಭಿಮಾನಿಗಳು ಕ್ರಿಕೆಟ್‌ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದನ್ನು ಬಯಸಿದ್ದರು. ಆದಾಗ್ಯೂ ಐಸಿಸಿಯ ಅತ್ಯಂತ ಶ್ರೀಮಂತ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಚಾರದಲ್ಲಿ ಅಷ್ಟೇನು ಉತ್ಸುಕವಾಗಿಲ್ಲ. 2010 ಮತ್ತು 2014ರ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಅನ್ನು ಸೇರಿಸಲಾಗಿತ್ತಾದರೂ, ಬಿಸಿಸಿಐ ತಂಡ ಕಳುಹಿಸಿರಲಿಲ್ಲ.

ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 164 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದು 13,288 ರನ್ ಗಳಿಸಿದ್ದಾರೆ. 344 ಏಕದಿನ ಪಂದ್ಯಗಳಿಂದ 10,889 ರನ್ ಹಾಗೂ ಆಡಿರುವ ಏಕೈಕ ಟಿ20 ಪಂದ್ಯದಲ್ಲಿ 38 ರನ್ ಕಲೆಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು