ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ತಂಡದ ಆಸ್ತಿ, ಮಯಂಕ್ ಜೊತೆ ಇನಿಂಗ್ಸ್ ಆರಂಭಿಸಲಿ: ಗೌತಮ್ ಗಂಭೀರ್

Last Updated 5 ಫೆಬ್ರುವರಿ 2020, 12:28 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡಿಗ ಕೆ.ಎಲ್‌.ರಾಹುಲ್‌ ಏಕದಿನ ತಂಡದಲ್ಲಿ ವಿಕೆಟ್‌ ಕೀಪಿಂಗ್ ಜವಬ್ದಾರಿ ನಿಭಾಯಿಸುತ್ತಿರುವುದರ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್‌ ಗಂಭೀರ್‌ ಬೇಸರ ವ್ಯಕ್ತಪಡಿಸಿದ್ದಾರೆ. ರಾಹುಲ್‌ ತಂಡದ ಆಸ್ತಿಯಾಗಿದ್ದು, ಅವರಿಗೆ ವಿಕೆಟ್‌ ಕೀಪಿಂಗ್‌ನಿಂದ ಹೊರೆಯಾಗಬಾರದು ಎಂದು ಅಭಿಪ್ರಾಪಟ್ಟಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಆರಂಭಿಕರಾದ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಅಲಭ್ಯರಾಗಿರುವುದರಿಂದ ಯುವ ಪ್ರತಿಭೆ ಪೃಥ್ವಿ ಶಾ ಮತ್ತು ಮಯಂಕ್‌ ಅಗರವಾಲ್‌ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಗಂಭೀರ್‌, ‘ಕೆ.ಎಲ್‌. ರಾಹುಲ್‌ ಅವರನ್ನು ಅಗ್ರ ಕ್ರಮಾಂಕದಿಂದ ತೆಗೆದಿರುವುದು ಉತ್ತಮ ನಿರ್ಧಾರವೆಂದು ನನಗನಿಸದು. ಭಾರತದ ಆರಂಭಿಕ ಜೋಡಿಯಾಗಿ ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಕಣಕ್ಕಿಳಿಯಬೇಕು’ ಎಂದು ಸಲಹೆ ನೀಡಿದ್ದಾರೆ.

ತಂಡದಲ್ಲಿ ರಾಹುಲ್‌ಜವಬ್ದಾರಿ ಕುರಿತು ಮಂಗಳವಾರ ಮಾತನಾಡಿದ್ದ ಕೊಹ್ಲಿ, ‘ರಾಹುಲ್‌ವಿಕೆಟ್‌ ಕೀಪಿಂಗ್ ಮುಂದುವರಿಸಲಿದ್ದಾರೆ ಹಾಗೂ ಐದನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆತ (ರಾಹುಲ್‌) ಮಧ್ಯಮ ಕ್ರಮಾಂಕಕ್ಕೆ ಒಗ್ಗಿಕೊಳ್ಳಬೇಕಿದೆ’ ಎಂದು ಹೇಳಿದ್ದರು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗಂಭೀರ್‌, ‘ವಿಕೆಟ್ ಕೀಪಿಂಗ್‌ಗೆ ರಿಷಭ್ ಪಂತ್‌ ಉಳಿಸಿಕೊಳ್ಳಬಹುದಿತ್ತು. ರಾಹುಲ್‌ ತಂಡದ ಆಸ್ತಿ. ಹೌದು, ರಾಹುಲ್‌ ವಿಕೆಟ್‌ ಹಿಂದೆಯೂ ಉತ್ತಮ ನಿರ್ವಹಣೆ ತೋರಿರಬಹುದು. ಆದರೆ, 50 ಓವರ್‌ಗಳ ವರೆಗೆ ಅವರಿಂದ ವಿಕೆಟ್‌ ಕೀಪಿಂಗ್ ನಿರೀಕ್ಷಿಸುವುದು ಉತ್ತಮ ನಿರ್ಧಾರವೆಂದು ನನಗನಿಸದು’ ಎಂದು ಬರೆದಿದ್ದಾರೆ.

ಇಂದು ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ವಿಕೆಟ್‌ ಜಯ ಸಾಧಿಸಿತು.ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 347 ರನ್ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕಿವೀಸ್‌ ಪಡೆ 48.1ನೇ ಓವರ್‌ನಲ್ಲಿ ಗುರಿ ಮುಟ್ಟಿತು. ಭಾರತ ಪರ ಶ್ರೇಯಸ್‌ ಅಯ್ಯರ್‌ (103) ಹಾಗೂ ನ್ಯೂಜಿಲೆಂಡ್‌ ಪರ ರಾಸ್‌ ಟೇಲರ್‌ (107) ಶತಕ ಬಾರಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರಾಹುಲ್‌ ಅಜೇಯ 88 ರನ್‌ ಗಳಿಸಿದರು.

ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್‌ನಲ್ಲಿ ಮತ್ತು ಮೂರನೇ ಪಂದ್ಯ ಮೌಂಟ್‌ ಮಾಂಗನೂಯಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT