U19 cricket | ಧವನ್ ದಾಖಲೆ ಮುರಿದ ಬಾವಾ; ಭಾರತಕ್ಕೆ 326 ರನ್ ಅಂತರದ ಜಯ

ತರೌಬಾ (ಟ್ರಿನಿಡಾಡ್): 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಉಗಾಂಡ ವಿರುದ್ಧ 326 ರನ್ ಅಂತರದ ಗೆಲುವು ದಾಖಲಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟರ್ ಅಂಗಕ್ರಿಷ್ ರಘುವಂಶಿ ಹಾಗೂ ಮಧ್ಯಮ ಕ್ರಮಾಂಕದ ರಾಜ್ ಬಾವಾ ಗಳಿಸಿದ ಅಮೋಘ ಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 405 ರನ್ ಕಲೆಹಾಕಿತ್ತು.
ರಘುವಂಶಿ 120 ಎಸೆತಗಳಲ್ಲಿ 22 ಫೋರ್ ಹಾಗೂ 4 ಸಿಕ್ಸರ್ ಸಹಿತ 144 ರನ್ ಗಳಿಸಿದರೆ, ರಾಜ್ 108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ ಅಜೇಯ 162 ರನ್ ಚಚ್ಚಿದರು. ಈ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 206 ರನ್ ಕಲೆಹಾಕಿತು. ಇದರ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ 400ರ ಗಡಿ ದಾಟಿತು. 2004ರಲ್ಲಿ 425 ರನ್ ಗಳಿಸಿತ್ತು.
ಬೃಹತ್ ಗುರಿ ಎದುರು ತಿಣುಕಾಡಿದ ಉಗಾಂಡ, ಕೇವಲ 79 ರನ್ ಗಳಿಸಿ ಆಲೌಟ್ ಆಯಿತು. ನಾಯಕ ಪಾಸ್ಕಲ್ ಮುರುಂಗಿ (34) ಮತ್ತು ಮಧ್ಯಮ ಕ್ರಮಾಂಕದ ರೊನಾಲ್ಡ್ ಒಪಿಒ (11) ಹೊರತುಪಡಿಸಿ ಉಳಿದ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ. ಐವರು ಸೊನ್ನೆ ಸುತ್ತಿದರೆ, ಉಳಿದ ಇಬ್ಬರು ತಲಾ ಐದು ರನ್ ಗಳಿಸಿದರು.
ಭಾರತ ಪರ ನಾಯಕ ನಿಶಾಂತ್ ಸಿಂಧು ನಾಲ್ಕು ವಿಕೆಟ್ ಗಳಿಸಿದರೆ, ರಾಜವರ್ಧನ್ ಹಂಗರಗೇಕರ್ 2 ಮತ್ತು ವಾಸು ವತ್ಸ್, ವಿಕ್ಕಿ ಓಸ್ವಾಲ್ ತಲಾ ಒಂದು ವಿಕೆಟ್ ಕಿತ್ತರು.
ಓದಿ... ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೇರಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ: ಅಖ್ತರ್
Innings Break!
Record-breaking 1⃣6⃣2⃣* for Raj Bawa 💪
1⃣4⃣4⃣ for Angkrish Raghuvanshi 👌India U19 set the stage on fire & post a mammoth 4⃣0⃣5⃣/5⃣ on the board against Uganda U19. 👏 👏 #BoysInBlue #U19CWC #INDvUGA
Scorecard ➡️ https://t.co/R2TlR1FKq8 pic.twitter.com/V1QDRg1mzy
— BCCI (@BCCI) January 22, 2022
ಧವನ್ ದಾಖಲೆ ಮುರಿದ ಬಾವಾ
ಈ ಪಂದ್ಯದಲ್ಲಿ ಅಜೇಯ 162 ರನ್ ಕಲೆಹಾಕಿದ ರಾಜ್ ಬಾವಾ, 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇನಿಂಗ್ಸ್‌ವೊಂದರಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು.
ಇದಕ್ಕೂ ಮೊದಲು ಈ ದಾಖಲೆ ಶಿಖರ್ ಧವನ್ ಅವರ ಹೆಸರಿನಲ್ಲಿತ್ತು. ಧವನ್, 2004ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ 155 ರನ್ ಬಾರಿಸಿದ್ದರು.
ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾ ಎದುರಾಳಿ
ಟೂರ್ನಿಯಲ್ಲಿ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಆಡಿರುವ ಮೂರೂ ಪಂದ್ಯಗಳಲ್ಲಿ ಜಯದ ನಗೆ ಬೀರಿ ಟೇಬಲ್ ಟಾಪರ್ ಆಗಿದೆ. ಅತ್ತ, 'ಎ' ಗುಂಪಿನಲ್ಲಿರುವ ಬಾಂಗ್ಲಾದೇಶ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಜಯ ಸಾಧಿಸಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.
ಈ ಎರಡೂ ತಂಡಗಳು ಜನವರಿ 29ರಂದು ನಡೆಯುವ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಮುಖಾಮುಖಿಯಾಗಲಿವೆ.
2020ರ ಟೂರ್ನಿಯಲ್ಲಿ ಪ್ರಿಯಂ ಗರ್ಗ್ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡವನ್ನು ಫೈನಲ್‌ನಲ್ಲಿ ಮಣಿಸಿದ್ದ ಬಾಂಗ್ಲಾ ತಂಡ, ಚಾಂಪಿಯನ್ ಆಗಿತ್ತು. ಹೀಗಾಗಿ ಕ್ವಾರ್ಟರ್‌ಫೈನಲ್ ಪಂದ್ಯ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದೆ.
ಭಾರತ ತಂಡದ ನಾಯಕ ಯಶ್ ಧುಳ್ ಸೇರಿದಂತೆ ಕೆಲ ಆಟಗಾರರಿಗೆ ಕೋವಿಡ್ ದೃಢಪಟ್ಟಿದೆ. ಆದಾಗ್ಯೂ ತಂಡದ ಇತರ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿಬರುತ್ತಿರುವುದು ಸಮಾಧಾನದ ಸಂಗತಿ. ಉಗಾಂಡ ವಿರುದ್ಧದ ಪಂದ್ಯದಲ್ಲಿ ಧುಳ್ ಬದಲು ನಿಶಾಂತ್ ಸಿಂಧು ತಂಡ ಮುನ್ನಡೆಸಿದ್ದರು.
ಭಾರತ ತಂಡ, 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ನಾಲ್ಕು ಬಾರಿ ಚಾಂಪಿಯನ್ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.