ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್ ಟೂರ್ನಿ: ಕುತೂಹಲ ಘಟ್ಟದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹಣಾಹಣಿ

ರಣಜಿ ಕ್ರಿಕೆಟ್ ಟೂರ್ನಿ: ದಿನೇಶ್ ಕಾರ್ತಿಕ್ ಶತಕ; ಗೌತಮ್ ಕೈಚಳಕ; ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಅಲ್ಪ ಮುನ್ನಡೆ
Last Updated 11 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ದಿಂಡಿಗಲ್: ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಏನು ಸ್ವಾರಸ್ಯ ಉಳಿದಿದೆ ಎಂದು ಹಲವು ವರ್ಷಗಳಿಂದ ಕೆಲವು ಕ್ರಿಕೆಟ್ ಪಂಡಿತರು ಕೇಳುವ ಪ್ರಶ್ನೆಗೆ ಇಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ತಮಿಳುನಾಡು ಪಂದ್ಯದಲ್ಲಿ ಉತ್ತರ ಇದೆ. ದಿನವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್‌ ಪ್ರೇಮಿಗಳ ಚರ್ಚೆಯ ಕೇಂದ್ರಬಿಂದುವಾಯಿತು ಪಂದ್ಯದ ಮೂರನೇ ದಿನದಾಟ.

ಹತ್ತಾರು ನಾಟಕೀಯ ತಿರುವುಗಳನ್ನು ಕಂಡ ದಿನ ಇದು. ಗೌತಮ್ ಕೃಷ್ಣಪ್ಪ (110ಕ್ಕೆ6) ಛಲದ ಬೌಲಿಂಗ್‌ನಿಂದಾಗಿ ಮೊದಲ ಇನಿಂಗ್ಸ್‌ 29 ರನ್‌ಗಳ ಅಲ್ಪ ಮುನ್ನಡೆಯನ್ನು ಕರ್ನಾಟಕ ಗಳಿಸಿತು. ಆದರೆ, ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್(113;235ಎಸೆತ 16ಬೌಂಡರಿ) ಅವರ ಶತಕವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವಂತಹ ಛಲದ ಆಟವನ್ನು ತಮಿಳುನಾಡು ಆಡಿತು. ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕದ ನೆಮ್ಮದಿಯನ್ನು ಕೆಡಿಸುವಲ್ಲಿ ಆತಿಥೇಯ ಬೌಲರ್‌ಗಳು ಯಶಸ್ವಿಯಾದರು. ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 89 ರನ್‌ ಗಳಿಸಿತು. ತಂಡವು ಸದ್ಯ 118 ರನ್‌ಗಳ ಮುನ್ನಡೆ ಗಳಿಸಿದೆ.

ದೇಶಿ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಉಭಯ ತಂಡಗಳಿಗೂ ಈಗ ನಾಲ್ಕನೇ ದಿನವಾದ ಗುರುವಾರದ ಮೊದಲ ಅವಧಿಯ ಆಟವು ಮಹತ್ವದ್ದಾಗಿದೆ. ಊಟದ ವಿರಾಮದವರೆಗೂ ಕರ್ನಾಟಕದ ಬ್ಯಾಟಿಂಗ್ ನಡೆದರೆ ತಮಿಳುನಾಡಿಗೆ ಜಯ ಕಷ್ಟವಾಗಬಹುದು. ಕ್ರೀಸ್‌ನಲ್ಲಿರುವ ಭರವಸೆಯ ಯುವಪ್ರತಿಭೆ ದೇವದತ್ತ ಪಡಿಕ್ಕಲ್ (ಬ್ಯಾಟಿಂಗ್ 29; 106ಎಸೆತ, 2ಬೌಂಡರಿ) ಮತ್ತು ಬಿ.ಆರ್. ಶರತ್ (ಬ್ಯಾಟಿಂಗ್ 25; 40ಎ, 3ಬೌಂ) ಅವರಿಬ್ಬರೂ ತಂಡವು ಇವತ್ತೇ ಕುಸಿಯದಂತೆ ತಡೆದಿದ್ದಾರೆ. ಕೊನೆಯ ದಿನವೂ ಆಸರೆಯಾಗುವ ಸವಾಲು ಇವರಿಬ್ಬರ
ಮುಂದಿದೆ.

ಕರ್ನಾಟಕದ ಆರಂಭಿಕ ಜೊಡಿ ಮಯಂಕ್ ಅಗರವಾಲ್(8), ಡೇಗಾ ನಿಶ್ವಲ್ ಮತ್ತು ನಾಯಕ ಕರುಣ್ ನಾಯರ್ (5) ಅವರು ಬೇಗನೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ನಿಶ್ಚಲ್ ಮತ್ತು ಕೆಳಕ್ರಮಾಂಕದಲ್ಲಿ ಆಲ್‌ರೌಂಡರ್ ಶ್ರೇಯಸ್‌ ಗೋಪಾಲ್ ಸೊನ್ನೆ ಸುತ್ತಿದ್ದು ಪ್ರವಾಸಿ ತಂಡದ ಮೇಲೆ ಒತ್ತಡ ಹೆಚ್ಚಿಸಿತು.ಇವರಿಬ್ಬರನ್ನು ಬಿಟ್ಟರೆ ಪವನ್ ದೇಶಪಾಂಡೆ (20;50ಎ) ಅವರು ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.

ದಿನೇಶ್ ಶತಕದ ಬಲ: ದಿನೇಶ್ ಕಾರ್ತಿಕ್ ಅವರ ಉತ್ತಮ ಬ್ಯಾಟಿಂಗ್ ಫಲವಾಗಿ ತಮಿಳುನಾಡು ತಂಡವು ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯುವತ್ತ ದಾಪುಗಾಲಿಟ್ಟಿತ್ತು. ಅವರೊಂದಿಗೆ ಕ್ರೀಸ್‌ನಲ್ಲಿದ್ದ ಜಗದೀಶನ್ (29;66ಎ) ವಿಕೆಟ್‌ ಗಳಿಸಿದ ಗೌತಮ್ ಜೊತೆಯಾಟವನ್ನು ಮುರಿದರು. ಆದರೆ ದಿನೇಶ್ ಮತ್ತು ಅಶ್ವಿನ್ ತಾಳ್ಮೆಯ ಆಟದಿಂದ ಇನಿಂಗ್ಸ್‌ ಕಟ್ಟಲು ಯತ್ನಿಸಿದರು.

ಆದರೆ, ಹೊಸಚೆಂಡಿನಲ್ಲಿ ಬೌಲಿಂಗ್ ಮಾಡಿದ ಮಧ್ಯಮವೇಗಿ ಕೌಶಿಕ್ ವಾಸುಕಿ ಅವರು ಆರ್. ಅಶ್ವಿನ್ ವಿಕೆಟ್ ಕಬಳಿಸಿದರು. ರೋನಿತ್ ಮೋರೆ ಎಸೆತದಲ್ಲಿ ಮುರುಗನ್ ಅಶ್ವಿನ್ ಅವರು ವಿಕೆಟ್‌ಕೀಪರ್ ಶರತ್‌ಗೆ ಕ್ಯಾಚಿತ್ತರು. ಡೈವ್ ಮಾಡಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದ ಶರತ್ ತಮ್ಮ ಸಹಆಟಗಾರರ ಮೆಚ್ಚುಗೆಗೆ ಪಾತ್ರರಾದರು.

ಆದರೆ, ಕರ್ನಾಟಕಕ್ಕೆ ತಲೆನೋವಾಗಿದ್ದು ದಿನೇಶ್ ಆಟ. ಅವರು 47 ರನ್‌ ಗಳಿಸಿದ್ದಾಗೊಮ್ಮೆ ಸ್ಟಂಪಿಂಗ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಇದರ ಲಾಭ ಪಡೆದ ಅವರು 340 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು.

ಈ ನಡುವೆ ಸಾಯಿಕಿಶೋರ್ (3) ವಿಕೆಟ್‌ ಕಿತ್ತ ಗೌತಮ್ ಐದು ವಿಕೆಟ್‌ಗಳ ಗುಚ್ಛವನ್ನು ಜೇಬಿಗೆ ಹಾಕಿಕೊಂಡರು. 110ನೇ ಓವರ್‌ನಲ್ಲಿ ದಿನೇಶ್ ವಿಕೆಟ್‌ ಅನ್ನೂ ಗೌತಮ್ ಗಳಿಸಿ ಇನಿಂಗ್ಸ್‌ಗೆ ಅಂತ್ಯ ಹಾಡಿದರು. ಮೂರು ದಿನಗಳ ಆಟದಲ್ಲಿ ಹಲವಾರು ನಾಟಕೀಯ ತಿರುವುಗಳನ್ನು ಕಂಡಿರುವ ಪಂದ್ಯದ ಕೊನೆಯ ದಿನದಾಟವು ರೋಚಕವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ 336, ತಮಿಳುನಾಡು:109.3 ಓವರ್‌ಗಳಲ್ಲಿ 307 (ದಿನೇಶ್ ಕಾರ್ತಿಕ್ 113, ಎನ್. ಜಗದೀಶನ್ 29, ರೋನಿತ್ ಮೋರೆ 67ಕ್ಕೆ2, ವಿ. ಕೌಶಿಕ್ 36ಕ್ಕೆ1, ಗೌತಮ್ ಕೃಷ್ಣಪ್ಪ 110ಕ್ಕೆ6), ಎರಡನೇ ಇನಿಂಗ್ಸ್: ಕರ್ನಾಟಕ:40 ಓವರ್‌ಗಳಲ್ಲಿ 5ಕ್ಕೆ89 (ಮಯಂಕ್ ಅಗರವಾಲ್ 8, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 29, ಪವನ್ ದೇಶಪಾಂಡೆ 20, ಬಿ.ಆರ್. ಶರತ್ ಬ್ಯಾಟಿಂಗ್ 25, ಕೆ. ವಿಘ್ನೇಶ್ 11ಕ್ಕೆ2, ರವಿಚಂದ್ರನ್ ಅಶ್ವಿನ್ 30ಕ್ಕೆ2)

–ಕರ್ನಾಟಕದ ಗೌತಮ್ ಕೃಷ್ಣಪ್ಪಗೆ ಆರು ವಿಕೆಟ್‌ಗಳು

-340 ನಿಮಿಷ ಕ್ರೀಸ್‌ನಲ್ಲಿದ್ದ ದಿನೇಶ್ ಕಾರ್ತಿಕ್ ‌

-ದೇವದತ್ತ–ಬಿ.ಆರ್. ಶರತ್ ತಾಳ್ಮೆಯ ಆಟ

‌ಗಣೇಶ್ ಸತೀಶ್ ದ್ವಿಶತಕ

ಮುಳಪಾಡು/ವಡೋದರಾ: ವಿದರ್ಭ ತಂಡದಲ್ಲಿ ಆಡುವ ದಾವಣಗೆರೆ ಹುಡುಗ ಗಣೇಶ್ ಸತೀಶ್ (237 ರನ್)ಬುಧವಾರ ಮುಳಪಾಡಿನಲ್ಲಿ ನಡೆಯುತ್ತಿರುವ ಆಂಧ್ರದ ಎದುರಿನ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದರು.

ವಡೋದರಾದಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಮುಂಬೈನ ಪೃಥ್ವಿ ಶಾ (202 ರನ್) ಅವರು ಬರೋಡಾ ತಂಡದ ಎದುರು ದ್ವಿಶತಕದ ಸಾಧನೆ ಮಾಡಿದರು.

ಮುಳಪಾಡು: ಮೊದಲ ಇನಿಂಗ್ಸ್: ಆಂಧ್ರ: 211, ವಿದರ್ಭ: 147.3 ಓವರ್‌ಗಳಲ್ಲಿ 441 (ಗಣೇಶ್ ಸತೀಶ್ 237, ಮೋಹಿತ್ ಕಾಳೆ 82, ಅಕ್ಷಯ್ ವಾಡಕರ್ 19, ಲಲಿತ್ ಯಾದವ್ 18, ಸ್ಟೀಫನ್ 110ಕ್ಕೆ5, ಪೃಥ್ವಿರಾಜ್ 55ಕ್ಕೆ2), ಎರಡನೇ ಇನಿಂಗ್ಸ್: ಆಂಧ್ರ: 37 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 100 (ಜ್ಞಾನೇಶ್ವರ್ ಬ್ಯಾಟಿಂಗ್ 42, ಹನುಮವಿಹಾರಿ 27, ಲಲಿತ್ ಯಾದವ್ 12ಕ್ಕೆ1).

ಮೀರತ್: ಮೊದಲ ಇನಿಂಗ್ಸ್: ರೈಲ್ವೆಸ್: 253; ಉತ್ತರಪ್ರದೇಶ: 53.1 ಓವರ್‌ಗಳಲ್ಲಿ 175 (ಆಲ್ಮಸ್ ಶೌಕತ್ ಔಟಾಗದೆ 92, ಸೌರಭ್ ಕುಮಾರ್ 21, ಯಶ್ ದಯಾಳ್ 19, ಅಮಿತ್ ಮಿಶ್ರಾ 52ಕ್ಕೆ4, ಹಿಮಾಂಶು ಸಂಗ್ವಾನ್ 71ಕ್ಕೆ4), ಎರಡನೇ ಇನಿಂಗ್ಸ್: ರೈಲ್ವೆಸ್: 76.5 ಓವರ್‌ಗಳಲ್ಲಿ 270 (ದಿನೇಶ್ ಮೋರ್ 102, ಕರ್ಣ ಶರ್ಮಾ 26, ಅಮಿತ್ ಮಿಶ್ರಾ ಔಟಾಗದೆ 43, ಹಿಮಾಂಶು ಸಂಗ್ವಾನ್ 20, ಅಂಕಿತ್ ರಜಪೂತ್ 95ಕ್ಕೆ2, ಯಶ್ ದಯಾಳ್ 73ಕ್ಕೆ4, ಶಿವಂ ಮಾವಿ 19ಕ್ಕೆ4), ಉತ್ತರಪ್ರದೇಶ: 4.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 23 (ಆಲ್ಮಸ್ ಶೌಕತ್ ಔಟಾಗದೆ 10, ಆರ್ಯನ್ ಜುಯಾಲ್ ಔಟಾಗದೆ 13) ವಡೋದರಾ: ಮೊದಲ ಇನಿಂಗ್ಸ್: ಮುಂಬೈ: 106.4 ಓವರ್‌ಗಳಲ್ಲಿ 431, ಬರೋಡಾ: 70.1 ಓವರ್‌ಗಳಲ್ಲಿ 307, ಎರಡನೇ ಇನಿಂಗ್ಸ್: ಮುಂಬೈ: 66.2 ಓವರ್‌ಗಳಲ್ಲಿ 409 ಡಿಕ್ಲೆರ್ಡ್ (ಪೃಥ್ವಿ ಶಾ 202, ಜೈ ಬಿಷ್ಠಾ 68, ಸೂರ್ಯಕುಮಾರ್ ಯಾದವ್ ಔಟಾಗದೆ 102, ಸೊಪಾರಿಯಾ 35ಕ್ಕೆ2), ಬರೋಡಾ: 16.4 ಓವರ್‌ಗಳಲ್ಲಿ 3ಕ್ಕೆ74 ( ವಿ.ಎಸ್. ಭೋಸ್ಲೆ 41, ಶಮ್ಸ್‌ ಮಲಾನಿ 28ಕ್ಕೆ2) ಪೊರ್ವರಿಂ: ಮೊದಲ ಇನಿಂಗ್ಸ್: ಸಿಕ್ಕಿಂ: 136, ಗೋವಾ: 436 (ಸ್ನೇಹಲ್ ಕೌತಣಕರ್ 134, ಸುಯಶ್ ಪ್ರಭುದೇಸಾಯಿ 91, ಈಶ್ವರ್ ಚೌಧರಿ 96ಕ್ಕೆ2), ಎರಡನೇ ಇನಿಂಗ್ಸ್: ಸಿಕ್ಕಿಂ: 98 ಓವರ್‌ಗಳಲ್ಲಿ 8ಕ್ಕೆ331 (ನೀಲೇಶ್ ಲಮಿಚಾನೆ 22, ಯಶಪಾಲ್ 84, ಲೀ ಯಾಂಗ್ ಲೆಪ್ಚಾ 29, ಇಕ್ಬಾಲ್ ಅಬ್ದುಲ್ಲಾ ಔಟಾಗದೆ 99, ಪೈಜಾರ್ ಔಟಾಗದೆ 32, ದರ್ಶನ್ ಮಿಸಾಳ 96ಕ್ಕೆ3, ಫೆಲಿಕ್ಸ್ ಅಲೆಮಾವ್ 63ಕ್ಕೆ3)

ಜೈಪುರ: ಮೊದಲ ಇನಿಂಗ್ಸ್‌: ರಾಜಸ್ಥಾನ: 257, ಪಂಜಾಬ್: 98.5 ಓವರ್‌ಗಳಲ್ಲಿ 358 (ಗುರುಕೀರತ್ ಮಾನ್ 68, ಮನದೀಪ್ ಸಿಂಗ್ 122, ಅನ್ಮೋಲ್ ಮಲ್ಹೋತ್ರಾ 76, ಮಯಂಕ್ ಮಾರ್ಕಂಡೆ 34, ಬಲ್ತೇಜ್ ಸಿಂಗ್ 19, ತಮೀಮ್ ಹಕ್ 94ಕ್ಕೆ2, ಅಹಮದ್ 83ಕ್ಕೆ3, ಎಸ್‌.ಕೆ. ಶರ್ಮಾ 82ಕ್ಕೆ4) ಎರಡನೇ ಇನಿಂಗ್ಸ್: ರಾಜಸ್ಥಾನ: 70 ಓವರ್‌ಗಳಲ್ಲಿ 8ಕ್ಕೆ157 (ಚೇತನ್ ಬಿಷ್ಠ್ 25, ಲೊಮ್ರೊರ್ 43, ಅಶೋಕ್ ಮನೇರಿಯಾ 26, ಸನ್ವೀರ್ ಸಿಂಗ್ 28ಕ್ಕೆ3, ಗುರುಕೀರತ್ ಸಿಂಗ್ ಮಾನ್ 9ಕ್ಕೆ2)

***

ಇಲ್ಲಿಯ ಪಿಚ್ ಉತ್ತಮವಾಗಿದೆ. ಅವರನ್ನು (ಕರ್ನಾಟಕ) ಬೇಗನೇ ಆಲೌಟ್ ಮಾಡುತ್ತೇವೆ. ಜಯಿಸಲು ಪ್ರಯತ್ನಿಸುತ್ತೇವೆ.

– ದಿನೇಶ್ ಕಾರ್ತಿಕ್, ತಮಿಳುನಾಡು ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT