ಮಂಗಳವಾರ, ಮಾರ್ಚ್ 31, 2020
19 °C

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಸೌರಾಷ್ಟ್ರಕ್ಕೆ ಬಂಗಾಳ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್: ಹದಿಮೂರು ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಬಂಗಾಳ ತಂಡವು ಸೋಮವಾರ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. 

ಹೋದ ವಾರ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಈಡನ್ ಗಾರ್ಡನ್‌ನಲ್ಲಿ ಕರ್ನಾಟಕ ತಂಡದ ವಿರುದ್ಧದ ಸೆಮಿಫೈನಲ್‌ನಲ್ಲಿ ಬಂಗಾಳ ತಂಡವು ಅಧಿಕಾರಯುತ ಜಯ ಸಾಧಿಸಿತ್ತು.

ಸೌರಾಷ್ಟ್ರವು ತನ್ನ ತವರಿನಂಗಳದಲ್ಲಿಯೇ ಗುಜರಾತ್ ವಿರುದ್ಧ ಸೆಮಿಯಲ್ಲಿ ಜಯಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿ ಬಂದಿರುವ ಚೇತೇಶ್ವರ್ ಪೂಜಾರ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ಸೌರಾಷ್ಟ್ರ ತಂಡದ ಆತ್ಮವಿಶ್ವಾಸ ಇಮ್ಮಡಿಯಾಗಿದೆ.

2012ರಿಂದ ಈಚೆಗೆ ಸೌರಾಷ್ಟ್ರ ತಂಡವು ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಹೋದ ವರ್ಷ ಕೂಡ ವಿದರ್ಭ ಎದುರು ಸೋತಿತ್ತು. ಆದರೆ ಈ ಸಲ ತನ್ನ ತವರಿನ ಅಂಗಳದಲ್ಲಿಯೇ ವಿಜಯೋತ್ಸವ ಆಚರಿಸುವ ಛಲದಲ್ಲಿದೆ.

ತಂಡದ ನಾಯಕ, ಎಡಗೈ ಮಧ್ಯ ಮವೇಗಿ ಜಯದೇವ್ ಉನದ್ಕತ್ ಈ ಟೂರ್ನಿಯಲ್ಲಿ ಒಟ್ಟು 65 ವಿಕೆಟ್‌ಗಳನ್ನು ಕಬಳಿಸಿ ಬ್ಯಾಟ್ಸ್‌ ಮನ್‌ಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಶೆಲ್ಡನ್ ಜಾಕ್ಸನ್ (783 ರನ್) ಮತ್ತು ಅರ್ಪಿತ್ ವಸ್ವಾಡಾ (654) ಅವರು ಪ್ರಮುಖ ಶಕ್ತಿಯಾಗಿದ್ದಾರೆ.  ಚೇತೇಶ್ವರ ಪೂಜಾರ ಕೂಡ ಐದು ಪಂದ್ಯಗಳಲ್ಲಿ ಆಡಿ 509 ರನ್‌ ಗಳಿಸಿದ್ದಾರೆ.

ಬಂಗಾಳ ತಂಡದಲ್ಲಿ ಮನೋಜ್ ತಿವಾರಿ (672 ) ಮತ್ತು ಅನುಸ್ಟುಪ್ ಮಜುಂದಾರ್ (641 ರನ್) ಅವರು ಗೆಲುವಿನ ರೂವಾರಿಗಳಾಗಿದ್ದಾರೆ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಮಜುಂದಾರ್ ಮಿಂಚಿದ್ದಾರೆ. ಅದರಲ್ಲೂ ಎಂಟರ ಘಟ್ಟ ಮತ್ತು ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ. ಸೌರಾಷ್ಟ್ರ ಬೌಲರ್‌ಗಳಿಗೆ ಇವರು ಪ್ರಮುಖ ಸವಾಲಾಗಲಿದ್ದಾರೆ.

ಬೌಲಿಂಗ್‌ನಲ್ಲಿ ಬಂಗಾಳ ತಂಡವು ಮಧ್ಯಮವೇಗಿ ಮುಕೇಶ್ ಕುಮಾರ್, ಅಕಾಶ್ ದೀಪ್ ಮತ್ತು ಶಾಮಾಜ್ ನದೀಂ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮೂವರು ತಲಾ ಮೂವತ್ತು ವಿಕೆಟ್‌ಗಳನ್ನು ಈ ಟೂರ್ನಿಯಲ್ಲಿ ಗಳಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಮಿಂಚಿದ್ದ ಇಶಾನ್ ಪೊರೇಲ್ (22 ವಿಕೆಟ್) ಕೂಡ ತಂಡಕ್ಕೆ ಗೆಲುವಿನ ಕಾಣಿಕೆ ನೀಡಬಲ್ಲರು.

ರಣಜಿ ಟ್ರೋಫಿ ಇತಿಹಾಸದಲ್ಲಿ ಬಂಗಾಳ ತಂಡವು ಎರಡು ಬಾರಿ ಚಾಂಪಿಯನ್ ಆಗಿದೆ. ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಛಲದಲ್ಲಿದೆ. ಇದರಿಂದಾಗಿ ಎರಡೂ ತಂಡಗಳ ನಡುವಣ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು