ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ಛಲಕ್ಕೆ ಒಲಿದ ಜಯ

ರಣಜಿ ಟ್ರೋಫಿ ಕ್ರಿಕೆಟ್: ತಮಿಳುನಾಡು ತಂಡಕ್ಕೆ ಮತ್ತೆ ಸೋಲಿನ ಕಹಿ; ಕೊನೆಯ ಓವರ್‌ನಲ್ಲಿ ಕರ್ನಾಟಕದ ಸಂಭ್ರಮ
Last Updated 12 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ದಿಂಡಿಗಲ್: ಒಂದೇ ದಿನ ಎಂಟು ಬ್ಯಾಟ್ಸ್‌ಮನ್‌ಗಳ ಹೆಡೆಮುರಿ ಕಟ್ಟಿದ ಗೌತಮ್ ಕೃಷ್ಣಪ್ಪ ಕರ್ನಾಟಕ ತಂಡಕ್ಕೆ ಜಯದ ಕಾಣಿಕೆ ಕೊಟ್ಟರು.

ಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ನಾಲ್ಕನೇ ದಿನವಾದ ಗುರುವಾರ ಬೆಳಿಗ್ಗೆ 180 ರನ್‌ಗಳ ಜಯದ ಗುರಿಯನ್ನು ತಮಿಳುನಾಡು ಬೆನ್ನತ್ತಿದಾಗ ಕರ್ನಾಟಕ ಕೈಯಿಂದ ಗೆಲುವು ಕೈಜಾರಿದಂತೆ ಭಾಸವಾಗಿತ್ತು. ಆದರೆ ಎರಡನೇ ಇನಿಂಗ್ಸ್‌ನ ಕೊನೆಯ ಓವರ್‌ನವರೆಗೂ ಹೋರಾಡಿದ ಛಲದಂಕಮಲ್ಲ ಗೌತಮ್ (30.3–11–60–8) ಗೆಲುವಿನ ಕುದುರೆಯನ್ನು ತಮ್ಮ ಹಾದಿಗೆ ತಂದರು. ಇದರಿಂದಾಗಿ ಕರ್ನಾಟಕ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿ ತಂಡವು 336 ರನ್‌ಗಳಿಸಲು ಗೌತಮ್ ಕಾರಣರಾಗಿದ್ದರು. ಅದೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ 29 ರನ್‌ಗಳ ಅಲ್ಪ ಮುನ್ನಡೆ ಕೊಡಿಸಿದ್ದೂ ಅವರೇ. ಎರಡನೇ ಇನಿಂಗ್ಸ್‌ನಲ್ಲಿಯೂ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದಾಗ, 22 (33ಎಸೆತ, 2ಸಿಕ್ಸರ್) ರನ್ ಗಳಿಸಿ ಬಲ ತುಂಬಿದ್ದರು. ಆದರೂ ತಂಡವು 65.4 ಓವರ್‌ಗಳಲ್ಲಿ 151 ರನ್‌ಗಳಿಗೆ ಆಲೌಟ್ ಆಯಿತು. ಬುಧವಾರ ದಿನದಾಟದ ಕೊನೆಗೆ ಕ್ರೀಸ್‌ನಲ್ಲಿದ್ದ ದೇವದತ್ತ ಪಡಿಕ್ಕಲ್ (39; 134ಎ,2ಬೌ,) ಮತ್ತು ಬಿ.ಆರ್. ಶರತ್ (28; 42ಎ, 3ಬೌಂ) ತಮ್ಮ ಕಾಣಿಕೆಯನ್ನು ಕೊಟ್ಟರು. ಶರತ್ ಮತ್ತು ದೇವದತ್ತ ಔಟಾದ ನಂತರ ಡೆವಿಡ್ ಮಥಾಯಿಸ್ (22;86ಎಸೆತ 3ಬೌಂಡರಿ) ತಾಳ್ಮೆಯ ಬ್ಯಾಟಿಂಗ್ ಮಾಡಿ ಬೌಲರ್‌ಗಳನ್ನು ಕಾಡಿದರು. ಜೊತೆಗೆ ಸಮಯವನ್ನು ದೂಡಿದರು.

ಮೇಲ್ನೋಟಕ್ಕೆ ಸಾಧಾರಣ ಗುರಿ ಎಂಬಂತೆ ಕಂಡ ಮೊತ್ತವನ್ನು ಆತಿಥೇಯ ತಂಡವು ಉತ್ಸಾಹದಿಂದಲೇ ಬೆನ್ನಟ್ಟಿತು. ಮೊದಲ ಐದು ಓವರ್‌ಗಳಲ್ಲಿ 40 ರನ್‌ಗಳು ಸೇರಿದಾಗ ಕರ್ನಾಟಕ ಸೋಲಿನ ಹಾದಿ ಹಿಡಿದ ಆತಂಕ ಮೂಡಿತು. ಆದರೆ ಗೌತಮ್ ಬೌಲಿಂಗ್ ಮಾಡಿದ ಹತ್ತನೇ ಓವರ್‌ನಲ್ಲಿ ಬದಲೀ ಫೀಲ್ಡರ್‌ ಮಾಡಿದ ನೇರ ಥ್ರೋಗೆ ಮುರಳಿ ವಿಜಯ್ (15 ರನ್) ರನ್‌ಔಟ್ ಆದರು. ಅದೇ ಓವರ್‌ನ ಮೂರನೇ ಎಸೆತದಲ್ಲಿ ಬಾಬಾ ಅಪರಾಜಿತ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಆಫ್‌ಸ್ಪಿನ್ನರ್ ವಿಕೆಟ್ ಬೇಟೆ ಆರಂಭಿಸಿದರು.

ಕ್ರಮಾಂಕ ಬದಲಿಸಿ ಬಂದ ಆರ್. ಅಶ್ವಿನ್ (2) ಅವರಿಗೂ ಎಲ್‌ಬಿ ಬಲೆ ಬೀಸಿದ ಗೌತಮ್ ಕೇಕೆ ಹಾಕಿದರು. ಎರಡು ವಾರಗಳ ಹಿಂದೆ ಸೂರತ್‌ನಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡಿನ ವಿರುದ್ಧ ನಡೆದಿದ್ದ ಫೈನಲ್‌ನ ಕೊನೆಯ ಓವರ್‌ನಲ್ಲಿ ಮೋಡಿ ಮಾಡಿದ್ದ ಗೌತಮ್ ಇಲ್ಲಿಯೂ ತಮ್ಮ ಸಾಮರ್ಥ್ಯ ಮೆರೆದರು. ಅವರ ಚಾಣಾಕ್ಷ ದಾಳಿಗೆ ತಮಿಳುನಾಡು ತಂಡದ ಮೊತ್ತವು 100 ರನ್‌ಗಳಿಗೆ ತಲುಪುವಷ್ಟರಲ್ಲಿ 7 ವಿಕೆಟ್‌ಗಳು ಪತನವಾಗಿದ್ದವು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ದಿನೇಶ್ ಕಾರ್ತಿಕ್, ನಾಯಕ ವಿಜಯಶಂಕರ್ ಅವರ ವಿಕೆಟ್‌ ಅನ್ನು ಗೌತಮ್ ಕಬಳಿಸಿದರು.

ಈ ಹಂತದಿಂದ ತಮಿಳುನಾಡು ತಂಡವು ಜಯದ ಆಸೆ ಬಿಟ್ಟು ಡ್ರಾ ಮಾಡಿಕೊಳ್ಳುವತ್ತ ವಾಲಿತು. ಇದರಿಂದಾಗಿ ತಾಳ್ಮೆಯ ಆಟಕ್ಕೆ ಮೊರೆಹೋಯಿತು. ಎನ್‌. ಜಗದೀಶನ್ ಅವರನ್ನು ಮಧ್ಯಮವೇಗಿ ವಿ.ಕೌಶಿಕ್ ಎಲ್‌ಬಿ ಡಬ್ಲ್ಯು ಮಾಡಿದರು.

ಆದರೆ, ತಮ್ಮ ತಂಡದ ಸೋಲು ತಪ್ಪಿಸಲು ಮುರುಗನ್ ಅಶ್ವಿನ್ ಮತ್ತು ರವಿಶ್ರೀನಿವಾಸನ್ ಸಾಯಿಕಿಶೋರ್ ನೆಲಕಚ್ಚಿ ಆಡಿದರು. 77 ಎಸೆತಗಳನ್ನು ಎದುರಿಸಿದ ಅಶ್ವಿನ್ ಗಳಿಸಿದ್ದು 23 ರನ್‌ಗಳನ್ನು ಮಾತ್ರ. ಸಾಯಿಕಿಶೋರ್ 41 ಎಸೆತ ಆಡಿ ಆರು ರನ್‌ ಮಾತ್ರ ಗಳಿಸಿದ್ದರು. ಈ ಜೊತೆಯಾಟವನ್ನು 48ನೇ ಓವರ್‌ನಲ್ಲಿ ಗೌತಮ್ ಅವರೇ ಮುರಿದರು. ಸಾಯಿಕಿಶೋರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಆಗ ಕ್ರೀಸ್‌ಗೆ ಬಂದ ಮಣಿಮಾರನ್ ಸಿದ್ಧಾರ್ಥ್ ಅವರು ಅಶ್ವಿನ್ ಜೊತೆಗೂಡಿ ಇನಿಂಗ್ಸ್‌ ಅನ್ನು ಮತ್ತಷ್ಟು ಎಳೆದರು. 62ನೇ ಓವರ್‌ನಲ್ಲಿ ಸಿದ್ಧಾರ್ಥ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಗೌತಮ್ ಸಂಭ್ರಮಿಸಿದರು. ಶ್ರೇಯಸ್ ಗೋಪಾಲ್ ಎಸೆತಗಳನ್ನು ಯಶಸ್ವಿಯಾಗಿ ಎದುರಿಸಿದ ತಮಿಳುನಾಡು ಜೋಡಿ ನಿಟ್ಟುಸಿರು ಬಿಟ್ಟಿತ್ತು. ಆದರೆ ಕೊನೆಯ ಓವರ್‌ಗೆ ಚೆಂಡು ಕೈಗೆತ್ತಿಕೊಂಡ ಗೌತಮ್ ಮೂರನೇ ಎಸೆತದಲ್ಲಿಯೇ ವಿಘ್ನೇಷ್‌ಗೆ ಪೆವಿಲಿಯನ್ ದಾರಿ ತೋರಿಸಿದರು.

ಹೋದ ಮೂರು ತಿಂಗಳಲ್ಲಿ ತಮಿಳುನಾಡು ತಂಡವು ಕರ್ನಾಟಕದ ಎದುರು ಸೋಲುತ್ತಿರುವ ನಾಲ್ಕನೇ ಪಂದ್ಯ ಇದಾಗಿದೆ. ವಿಜಯ್ ಹಜಾರೆ ಟ್ರೋಫಿಯ ಫೈನಲ್, ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಮತ್ತು ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: ಮೊದಲ ಇನಿಂಗ್ಸ್; ಕರ್ನಾಟಕ: 336, ತಮಿಳುನಾಡು: 302, ಎರಡನೇ ಇನಿಂಗ್ಸ್‌: ಕರ್ನಾಟಕ: 65.4 ಓವರ್‌ಗಳಲ್ಲಿ 151 (ದೇವದತ್ತ ಪಡಿಕ್ಕಲ್ 39, ಬಿ.ಆರ್. ಶರತ್ 28, ಡೇವಿಡ್ ಮಥಾಯಿಸ್ 22, ಗೌತಮ್ ಕೃಷ್ಣಪ್ಪ 22, ಕೆ. ವಿಘ್ನೇಷ್ 31ಕ್ಕೆ3, ಆರ್. ಅಶ್ವಿನ್ 46ಕ್ಕೆ4, ಸಾಯಿಕಿಶೋರ್ 13ಕ್ಕೆ1, ಸಿದ್ಧಾರ್ಥ್ 38ಕ್ಕೆ1), ತಮಿಳುನಾಡು: 63.3 ಓವರ್‌ಗಳಲ್ಲಿ 154 (ಅಭಿನವ್ ಮುಕುಂದ್ 42, ಮುರಳಿ ವಿಜಯ್ 15, ದಿನೇಶ್ ಕಾರ್ತಿಕ್ 17, ಮುರುಗನ್ ಅಶ್ವಿನ್ 23, ಎಂ. ಸಿದ್ಧಾರ್ಥ್ 20, ಗೌತಮ್ ಕೃಷ್ಣಪ್ಪ 60ಕ್ಕೆ8, ವಿ. ಕೌಶಿಕ್ 23ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 26 ರನ್‌ಗಳ ಜಯ ಮತ್ತು 6 ಪಾಯಿಂಟ್ಸ್‌.

ಕಾರ್ತಿಕ್ –ಕರುಣ್ ಮಾತಿನ ಜಟಾಪಟಿ

ಪಂದ್ಯದ ನಂತರ ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಕರ್ನಾಟಕದ ನಾಯಕ ಕರುಣ್ ನಾಯರ್ ಬಳಿ ವಾಗ್ವಾದ ನಡೆಸಿದರು. ಅಂಪೈರ್‌ಗಳು ಕಾರ್ತಿಕ್ ಅವರನ್ನು ಸಮಾಧಾನಪಡಿಸಿದರು. ಆದರೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ದಿನೇಶ್ ಮತ್ತೆ ಜಗಳಕ್ಕೆ ಮುಂದಾದರು. ಕರ್ನಾಟಕದ ಕೋಚ್‌ಗಳಾದ ಎಸ್.ಅರವಿಂದ ಮತ್ತು ಯರೇಗೌಡ ಸಮಾಧಾನಪಡಿಸಿದರು. ವಿಕೆಟ್‌ಗಳಿಗಾಗಿ ಪದೇ ಪದೇ ಮನವಿ ಮಾಡಿದ್ದಕ್ಕೆ ದಿನೇಶ್ ಬೇಸರಗೊಂಡಿದ್ದರು ಎನ್ನಲಾಗಿದೆ.

‘ಕರ್ನಾಟಕದ ಆಟಗಾರರು ಅಂಗಣದಲ್ಲಿ ವರ್ತಿಸಿದ ರೀತಿ ಇರಿಸು ಮುರುಸು ಉಂಟುಮಾಡುವಂತಿತ್ತು. ಹಿರಿಯ ಆಟಗಾರನಾದ ದಿನೇಶ್‌ ಕಾರ್ತಿಕ್‌ಗೆ ಇದರಿಂದ ಬೇಸರವಾಗಿರಬೇಕು’ ಎಂದು ತಮಿಳುನಾಡು ನಾಯಕ ವಿಜಯಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT