ಬುಧವಾರ, ಏಪ್ರಿಲ್ 1, 2020
19 °C
30 ಓವರ್‌ಗಳಲ್ಲಿ ಮಗುಚಿದ ರೈಲ್ವೇಸ್‌

ರಣಜಿ ಟ್ರೊಫಿ: ಮೋರೆ ಮನಮೋಹಕ ದಾಳಿ, ಕರ್ನಾಟಕಕ್ಕೆ 10 ವಿಕೆಟ್ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬುಧವಾರ ಸಂಜೆ ರೈಲ್ವೆ ತಂಡದ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯುವ ಮೊದಲೇ ಕರ್ನಾಟಕ ತಂಡ 9 ವಿಕೆಟ್‌ಗಳನ್ನು ಕಳೆದುಕೊಂಡು ಆತಂಕದಲ್ಲಿತ್ತು.

ಗುರುವಾರ ಮಧ್ಯಾಹ್ನ ಏಳು ಪಾಯಿಂಟ್ಸ್‌ ಗಳಿಸಿದ ಸಂಭ್ರಮದೊಡನೆ ಕರ್ನಾಟಕ ತಂಡ ಕರ್ನೇಲ್‌ ಸಿಂಗ್‌ ಕ್ರೀಡಾಂಗಣದಿಂದ ಹೊರನಡೆಯಿತು.

ರಣಜಿ ಟ್ರೋಫಿ ‘ಬಿ’ ಗುಂಪಿನ ಈ ಪಂದ್ಯವನ್ನು ಕರ್ನಾಟಕ 10 ವಿಕೆಟ್‌ ಗಳಿಂದ ಗೆದ್ದುಕೊಂಡಿತು. ಮೂರನೇ ದಿನ ಕರ್ನಾಟಕಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟ ಶ್ರೇಯಸ್ಸು ಶರತ್‌ ಶ್ರೀನಿವಾಸ್‌ಗೆ ಸಂದಿತ್ತು. ಅಂತಿಮ ದಿನ, ಬೋನಸ್‌ ಪಾಯಿಂಟ್‌ ಸಹಿತ ಗೆಲುವಿಗೆ ರೋನಿತ್‌ ಮೋರೆ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಾಯಿತು.

ಅಂಥ ಸತ್ವವೇನೂ ಇಲ್ಲದ ಪಿಚ್‌ನಲ್ಲಿ ಮೋರೆ 32 ರನ್ನಿಗೆ 6 ವಿಕೆಟ್ ಪಡೆದರು. ಇದು ಮೊದಲ ದರ್ಜೆ ಕ್ರಿಕೆಟ್‌ನಲ್ಲಿ ಅವರ ಜೀವನಶ್ರೇಷ್ಠ ಸಾಧನೆಯೆನಿಸಿತು.

ರೈಲ್ವೇಸ್‌ ತಂಡದ 182 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 211 ರನ್‌ ಗಳಿಸಿ 27 ರನ್‌ ಗಳ ಮುನ್ನಡೆ ಸಂಪಾದಿಸಿತು. ಆದರೆ ಎರಡನೇ ಸರದಿಯಲ್ಲಿ ರೈಲ್ವೇಸ್‌ ತಂಡ 30 ಓವರುಗಳಲ್ಲಿ ಕೇವಲ 79 ರನ್ನಿಗೆ ಕುಸಿಯಿತು.

ಗೆಲುವಿಗೆ ಅಗತ್ಯವಿದ್ದ 51 ರನ್‌ ಗಳನ್ನು ಕರ್ನಾಟಕ 9ನೇ ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ ಗಳಿಸಿತು. ರೋಹನ್‌ ಕದಂ (ಔಟಾಗದೇ 27, 31 ಎಸೆತ), ದೇವದತ್ತ ಪಡಿಕ್ಕಲ್‌ (ಔಟಾಗದೇ 24, 19 ಎಸೆತ) ಜೊತೆ ಕರ್ನಾಟಕವನ್ನು ಆರಾಮವಾಗಿ ಗೆಲುವಿನ ದಡ ತಲುಪಿಸಿದರು. ರೈಲ್ವೆ ಎರಡನೇ ಇನಿಂಗ್ಸ್‌ ವೇಳೆ ಸಮರ್ಥ್‌ ಗಾಯಾಳಾದ ಕಾರಣ ಕದಂ ಓಪನರ್‌ ಆಗಿ ಆಡಲಿಳಿದರು.

ಕರುಣ್‌ ನಾಯರ್‌ ಬಳಗ ಆರು ಪಂದ್ಯಗಳಿಂದ 24 ಪಾಯಿಂಟ್ಸ್‌ ಗಳಿಸಿದ್ದು, ಉಳಿದ ಎರಡು ಪಂದ್ಯಗಳನ್ನು ಹೆಚ್ಚು ಒತ್ತಡವಿಲ್ಲದೇ ಆಡಬಹುದಾಗಿದೆ. ಅದೂ ತವರಿನಲ್ಲಿ.

ಇದಕ್ಕೆ ಮೊದಲು, 9 ವಿಕೆಟ್‌ಗೆ 199 ರನ್‌ಗಳೊಡನೆ ಗುರುವಾರ ಅಂತಿಮ ದಿನದಾಟ ಮುಂದುವರಿಸಿದ ಕರ್ನಾಟಕ ಸುಮಾರು ಅರ್ಧ ಗಂಟೆಗಳ ನಂತರ ಆಲೌಟಾಯಿತು. ಶರತ್‌ ಶ್ರೀನಿವಾಸ್‌ ಮತ್ತು ಪ್ರತೀಕ್‌ ಜೈನ್‌ ನಡುವಣ ಕೊನೆಯ ವಿಕೆಟ್‌  ಜೊತೆಯಾಟದಲ್ಲಿ 34 ರನ್‌ ಸೇರಿಸಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ರೈಲ್ವೇಸ್‌ ತಂಡದಲ್ಲಿರುವ ಕನ್ನಡಿಗ ಟಿ.ಪ್ರದೀಪ್‌, ಏಕೈಕ ವಿಕೆಟ್‌ ರೂಪದಲ್ಲಿ ಶ್ರೀನಿವಾಸ್‌ ವಿಕೆಟ್‌ ಪಡೆದರು.

ಕರ್ನಾಟಕದ ಬೌಲರ್‌ಗಳು ಎರ ಡನೇ ಇನಿಂಗ್ಸ್‌ನಲ್ಲಿ ರೈಲ್ವೇಸ್‌ ತಂಡವನ್ನು ನಿಯಂತ್ರಿಸುವರೇ ಎಂಬ ಪ್ರಶ್ನೆಗೆ ಉತ್ತರ ಬಲು ಬೇಗನೇ ದೊರೆಯಿತು. ಆರಂಭ ಆಟಗಾರ ಆಶಿಷ್‌ ಸೆಹ್ರಾವತ್‌ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಪ್ರತೀಕ್‌ ಜೈನ್‌ಗೆ ಬಲಿಯಾದರು. ನಂತರ ಅಭಿಮನ್ಯು ಮಿಥುನ್‌ 14 ರನ್‌ಗಳ ಅಂತರದಲ್ಲಿ ಸೌರಭ್‌ ಸಿಂಗ್‌ ಮತ್ತು ಅರಿಂದಮ್‌ ಘೋಷ್‌ ಅವರ ವಿಕೆಟ್‌ಗಳನ್ನು ಪಡೆದರು.

ರೋನಿತ್‌ ಮೋರೆ ದಾಳಿಗಿಳಿದ ಮೇಲೆ ರೈಲ್ವೆ ತಂಡ ಸಂಪೂರ್ಣ ಹಳಿ ತಪ್ಪಿತು. ಅವರು ಹೆಚ್ಚು ಆಕ್ರಮಣಕಾರಿಯಂತೆ ಕಂಡರು. ನಿಖರ ಲೆಂಗ್ತ್‌ ಜೊತೆಗೆ ಜಾಣ್ಮೆಯಿಂದ ಬೌನ್ಸರ್‌ಗಳನ್ನು ಪ್ರಯೋಗಿಸಿದರು. ಮಹೇಶ್‌ ರಾವತ್‌ ಮತ್ತು ಹರ್ಷ್‌ ತ್ಯಾಗಿ ಇಂಥ ಎಸೆತಗಳಿಗೆ ನಿರ್ಗಮಿಸಬೇಕಾಯಿತು.  ಇನಿಂಗ್ಸ್‌ನ 28ನೇ ಓವರ್‌ನಲ್ಲಿ ರೋನಿತ್‌ ಮೂರು ವಿಕೆಟ್‌ಗಳನ್ನು (ದಿನೇಶ್‌ ಮೊರ್‌ ಮತ್ತು ಅವಿನಾಶ್‌ ಯಾದವ್‌ ಮತ್ತು ಪ್ರದೀಪ್‌) ಕಬಳಿಸಿ ರೈಲ್ವೆ ಪತನವನ್ನು ತ್ವರಿತಗೊಳಿಸಿದರು. ಆಗ ತಂಡದ ಮೊತ್ತ 63 ಆಗಿತ್ತು.

ರೈಲ್ವೇಸ್‌ನ ಓಪನರ್‌ ಮೃಣಾಲ್‌ ದೇವಧರ್‌ (38, 6 ಬೌಂಡರಿ) ಅವರ ವಿಕೆಟ್‌ ಮಿಥುನ್‌ ಪಾಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು