ಶನಿವಾರ, ಫೆಬ್ರವರಿ 29, 2020
19 °C

ಹಿಮಾಚಲ ಪ್ರದೇಶ ಎದುರು ಬ್ಯಾಟಿಂಗ್ ಅಬ್ಬರ: ಸತತ 2ನೇ ತ್ರಿಶತಕದತ್ತ ಸರ್ಫರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮಶಾಲಾ: ಉತ್ತರ ಪ್ರದೇಶ ವಿರುದ್ಧ ಕಳೆದ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ್ದ ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್‌ ಖಾನ್‌, ಮತ್ತೊಮ್ಮೆ ಅಂತಹದೇ ಸಾಧನೆ ‍ಪುನರಾವರ್ತಿಸಲು ಹೊರಟಿದ್ದಾರೆ. ಹಿಮಾಚಲ ಪ್ರದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸಿರುವ ಸರ್ಫರಾಜ್‌ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮಂದ ಬೆಳಕಿನ ಕಾರಣ ಮೊದಲ ದಿನದಾಟವನ್ನು 75 ಓವರ್‌ಗಳಿಗೆ ನಿಲ್ಲಿಸಲಾಯಿತು. ಈ ವೇಳೆಗಾಗಲೇ 5 ವಿಕೆಟ್‌ ನಷ್ಟಕ್ಕೆ 372 ರನ್‌ ಕಲೆಹಾಕಿರುವ ಮುಂಬೈ ಬೃಹತ್‌ ಮೊತ್ತದತ್ತ ಹೆಚ್ಚೆ ಇಟ್ಟಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆದಿತ್ಯ ತಾರೆ ಪಡೆಗೆ, ಆತಿಥೇಯ ಹಿಮಾಚಲ ಪ್ರದೇಶ ಆಘಾತ ನೀಡಿತ್ತು. ಕೇವಲ 71 ರನ್‌ ಆಗುಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಉರುಳಿಸಿ ತವರಿನ ಅಂಗಳದಲ್ಲಿ ದರ್ಬಾರ್ ನಡೆಸುವ ಸೂಚನೆ ನೀಡಿತ್ತು. ಆದರೆ, ಅದಕ್ಕೆ ಸರ್ಫರಾಜ್‌ ಮತ್ತು ನಾಯಕ ತಾರೆ (62) ಅವಕಾಶ ನೀಡಲಿಲ್ಲ. ಈ ಜೋಡಿ ಐದನೇ ವಿಕೆಟ್‌ಗೆ 143 ರನ್‌ ಕೂಡಿಸಿತು.

ಇದನ್ನೂ ಓದಿ: ‘ಕೊಹ್ಲಿ ಫಿಟ್‌ನೆಸ್ ಸಲಹೆ ನೀಡಿದ್ದರು; ಆರ್‌ಸಿಬಿಯಿಂದ ಕೈಬಿಟ್ಟಾಗ ನೋವಾಗಿತ್ತು’

ತಾರೆ ನಿರ್ಗಮನದ ಬಳಿಕವೂ ತಡೆಯಿಲ್ಲದೆ ಬ್ಯಾಟ್‌ ಬೀಸಿದ ಸರ್ಫರಾಜ್‌, ಶುಭಂ ರಂಜನೆ ಜೊತೆಗೂಡಿ ಮುರಿಯದ ಆರನೇ ವಿಕೆಟ್‌ ಜೊತೆಯಾಟದಲ್ಲಿ 158 ರನ್ ಕೂಡಿಸಿದ್ದಾರೆ. ಇದರಲ್ಲಿ ರಂಜನೆ ಪಾಲು ಕೇವಲ 44 ಮಾತ್ರ. 213 ಎಸೆತಗಳಲ್ಲಿ 32 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ ಬರೋಬ್ಬರಿ 226 ರನ್‌ ಗಳಿಸಿರುವ ಸರ್ಫರಾಜ್‌ ಅಜೇಯರಾಗಿ ಉಳಿದಿದ್ದಾರೆ.

ಕಳೆದ ಪಂದ್ಯದಲ್ಲಿ ತ್ರಿಶತಕ
ಜನವರಿ 19 ರಿಂದ 22ರ ವರೆಗೆ ಉತ್ತರ ಪ್ರದೇಶ ತಂಡದ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸರ್ಫರಾಜ್‌ ಅಜೇಯ ತ್ರಿಶತಕ ಬಾರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ಪ್ರದೇಶ ಎಂಟು ವಿಕೆಟ್‌ ನಷ್ಟಕ್ಕೆ 625 ರನ್‌ ಗಳಿಸಿತ್ತು.

ಬಳಿಕ ಬ್ಯಾಟಿಂಗ್‌ ನಡೆಸಿದ ಮುಂಬೈ 124 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು, ಫಾಲೋಆನ್‌ ಭೀತಿಗೊಳಗಾಗಿತ್ತು. ಈ ವೇಳೆ ಕ್ರೀಸ್‌ಗಿಳಿದ ಸರ್ಫರಾಜ್‌ ಖಾನ್‌ ಕ್ರಮವಾಗಿ ಸಿದ್ದೇಶ್ ಲಾಡ್‌ (98), ಆದಿತ್ಯ ತಾರೆ (97) ಹಾಗೂ ಶ್ಯಾಮ್ಸ್‌ ಮಲಾನಿ (65) ಜೊತೆ ಸೇರಿ ಐದನೇ ವಿಕೆಟ್ ಜೊತೆಯಾಟದಲ್ಲಿ 210 ರನ್‌, ಆರನೇ ವಿಕೆಟ್ ಜೊತೆಯಾಟದಲ್ಲಿ 179 ರನ್‌ ಮತ್ತು ಏಳನೇ ವಿಕೆಟ್‌ ಜೊತೆಯಾಟದಲ್ಲಿ 150 ರನ್‌ ಕೂಡಿಸಿದ್ದರು.

ಹೀಗಾಗಿ ಮುಂಬೈ 7 ವಿಕೆಟ್‌ ನಷ್ಟಕ್ಕೆ 688 ರನ್‌ ಗಳಿಸಿ ಇನಿಂಗ್ಸ್‌ ಮುನ್ನಡೆ ಸಾಧಿಸಿ ಮೂರು ಅಂಕ ಸಂಪಾದಿಸಿತ್ತು.

ಒಟ್ಟು 391 ಎಸೆತಗಳನ್ನು ಎದುರಿದ ಸರ್ಫರಾಜ್‌, 30 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಹಿತ 301 ರನ್‌ ಗಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು