ಗುರುವಾರ , ಜನವರಿ 23, 2020
19 °C
ಕರ್ನಾಟಕಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ; ಆಸರೆಯಾದ ಸಮರ್ಥ್, ಶರತ್; ಮಿಥುನ್ ಬಿರುಗಾಳಿ

ರಣಜಿ ಕ್ರಿಕೆಟ್: ರೋಚಕ ಹಾದಿಯಲ್ಲಿ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸ್ವಲ್ಪವೇ ಅಂತರದಲ್ಲಿ ಶತಕ ತಪ್ಪಿಸಿಕೊಂಡ ಸಮರ್ಥ್ ಮತ್ತು ಅರ್ಧಶತಕದಂಚಿನಲ್ಲಿ ಔಟಾದ ಬಿ.ಆರ್. ಶರತ್ ಕರ್ನಾಟಕ ತಂಡಕ್ಕೆ ಮುಂಬೈ ಎದುರಿನ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು. ‘ಪೀಣ್ಯ ಎಕ್ಸ್‌ಪ್ರೆಸ್’ ಅಭಿಮನ್ಯು ಮಿಥುನ್ ಜಯದ ಭರವಸೆ ಮೂಡಿಸಿದರು.

ಶರದ್ ‍ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಬಿ ಗುಂಪಿನ ಪಂದ್ಯದ ಎರಡನೇ ದಿನವೂ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಸಾಂಪ್ರದಾಯಿಕ ಎದುರಾಳಿಗಳಾಗಿರುವ ಎರಡೂ ತಂಡಗಳು ಮೇಲುಗೈ ಸಾಧಿಸಲು ಹೋರಾಟ ಮಾಡಿದವು. ಇದರಲ್ಲಿ ಕರ್ನಾಟಕ 24 ರನ್‌ಗಳ ಅಲ್ಪ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಅಭಿಮನ್ಯು ಮಿಥುನ್ (52ಕ್ಕೆ3) ಬಿರುಗಾಳಿಗೆ ತತ್ತರಿಸಿದ ತಂಡಕ್ಕೆ ಸರ್ಫರಾಜ್ ಖಾನ್ (ಬ್ಯಾಟಿಂಗ್ 53) ಆಸರೆಯಾದರು. ರನ್‌ಔಟ್ ಅವಕಾಶದಲ್ಲಿ ಜೀವದಾನ ಪಡೆದ ಶಮ್ಸ್ ಮಲಾನಿ (31 ರನ್) ಉತ್ತಮ ಕಾಣಿಕೆ ನೀಡಿದರು. ಇದರಿಂದಾಗಿ ದಿನದಾಟದ ಕೊನೆಗೆ ಮುಂಬೈ ತಂಡವು 36 ಓವರ್‌ಗಳಲ್ಲಿ 5ಕ್ಕೆ109 ರನ್‌ ಗಳಿಸಿದೆ.  85 ರನ್‌ಗಳ ಮುನ್ನಡೆ ಸಾಧಿಸಿದೆ.

ಎರಡು ದಿನಗಳ ಆಟದಲ್ಲಿ ಒಟ್ಟು 25 ವಿಕೆಟ್‌ಗಳು ಪತನವಾಗಿರುವ ಪಂದ್ಯದಲ್ಲಿ 140–150 ರನ್‌ಗಳ ಗುರಿಯು ಕರ್ನಾಟಕಕ್ಕೆ ಕಠಿಣ ಸವಾಲಾಗ ಬಹುದು. ಆದ್ದರಿಂದ ಭಾನುವಾರದ ಬೆಳಗಿನ ಅವಧಿಯ ಆಟವೇ ಮುಖ್ಯವಾ ಗಲಿದೆ. ಈ ಹಂತದಲ್ಲಿ ಮೇಲುಗೈ ಸಾಧಿ ಸುವ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚು.

ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡವು 194 ರನ್‌ ಗಳಿಸಿತ್ತು. ಸಂಜೆಯ ವೇಳೆಗೆ ಕರ್ನಾಟಕ ತಂಡವು ಮೂರು ವಿಕೆಟ್‌ಗಳಿಗೆ 79 ರನ್‌ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಆರ್ ಸಮರ್ಥ್ ಮತ್ತು ಕರುಣ್ ನಾಯರ್ ಎರಡನೇ ದಿನ  ಆಟ ಮುಂದುವರಿಸಿದರು. ಕರುಣ್ ಮೊದಲ ಓವರ್‌ನಲ್ಲಿ ಔಟಾದರು. ಅವರು ಖಾತೆ ತೆರೆಯಲೇ ಇಲ್ಲ.

ತಾಳ್ಮೆಯಿಂದ ಆಡುತ್ತಿದ್ದ ಸಮರ್ಥ್ ಜೊತೆಗೂಡಿದ ಶ್ರೇಯಸ್ ಗೋಪಾಲ್ (31; 85ಎಸೆತ, 3ಬೌಂಡರಿ) ಐದನೇ ವಿಕೆಟ್ ಜೊತೆಯಾಟದಲ್ಲಿ 78 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಮುನ್ನಡೆಯತ್ತ ಸಾಗಿತ್ತು. ಆದರೆ 49ನೇ ಓವರ್‌ನಲ್ಲಿ ಶಶಾಂಕ್ ಎಸೆತದಲ್ಲಿ ಶ್ರೇಯಸ್ ಔಟಾದ ಮೇಲೆ ಆತಂತ ಎದುರಾಯಿತು. ನಂತರದ ಓವರ್‌ನಲ್ಲಿ ಸಮರ್ಥ್ (86;139ಎ, 13ಬೌಂ) ಕೂಡ ಔಟಾದರು. ಇದರಿಂದಾಗಿ ಕರ್ನಾಟಕಕ್ಕೆ ಆತಂಕ ಎದುರಾಯಿತು.

ಕ್ರೀಸ್‌ಗೆ ಬಂದ ಶರತ್ ನಿಧಾನವಾಗಿ ಆಡುವತ್ತ ಚಿತ್ತ ನೆಟ್ಟರು. ಆದರೆ, ಮಿಥುನ್ ಮತ್ತು ರೋನಿತ್ ಮೋರೆ ಔಟಾಗಿ ಮರಳಿದಾಗ ತಂಡದ ಮೊತ್ತವು 171 ರನ್‌ ಆಗಿತ್ತು. ಆಗಲೂ ದೃತಿಗೆಡದ ಶರತ್ ಜೊತೆಗೂಡಿದ ಕೌಶಿಕ್ (4;35ಎಸೆತ) ತಂಡದ ಆತಂಕ ದೂರ ಮಾಡಿದರು. 194 ರನ್‌ ದಾಟಿದ ನಂತರ ಶರತ್ ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ಇದರಿಂದಾಗಿ ರನ್‌ ಗಳಿಕೆ ವೇಗವಾಯಿತು. ಇನ್ನೂರರ ಗಡಿ ದಾಟಿತು. 65ನೇ ಓವರ್‌ನಲ್ಲಿ ಶರತ್ ಔಟಾದರು. ನಾಲ್ಕು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು.

ಮಿಥುನ್ ಮಿಂಚು; ಸರ್ಫರಾಜ್ ಅಬ್ಬರ: ಗಾಯಗೊಂಡಿದ್ದ ಪೃಥ್ವಿ ಶಾ  ಬ್ಯಾಟಿಂಗ್‌ಗೆ ಬರಲಿಲ್ಲ. ಇದರಿಂದಾಗಿ ಒತ್ತಡದಲ್ಲಿದ್ದ ಮುಂಬೈ ತಂಡಕ್ಕೆ ಮಿಥುನ್ ಪೆಟ್ಟುಕೊಟ್ಟರು. ಅವರ ಬೌಲಿಂಗ್‌ ದಾಳಿಯಿಂದಾಗಿ ಮುಂಬೈ ತಂಡವು 12 ರನ್‌ ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 77 ರನ್ ಗಳಿಸಿದ್ದ ಸೂರ್ಯ, ಅಜಿಂಕ್ಯ ರಹಾನೆ ಮತ್ತು ಸಿದ್ಧೇಶ್ ಲಾಡ್ ವಿಕೆಟ್‌ಗಳನ್ನು ಮಿಥುನ್ ಕಬಳಿಸಿದರು. ಆದಿತ್ಯ ತಾರೆಗೆ ಕೌಶಿಕ್ ಪೆವಿಲಿಯನ್ ದಾರಿ ತೋರಿಸಿದರು. ಆದರೆ ಕರ್ನಾಟಕದ ಸಂತಸಕ್ಕೆ ಸರ್ಫರಾಜ್ ಖಾನ್  ಅಡ್ಡಿಯಾದರು. ಅವರು ಮತ್ತು ಶಮ್ಸ್‌ ಮಲಾನಿ ಐದನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ದಿನದ ಕೊನೆಯ ಎಸೆತದಲ್ಲಿ ಮಲಾನಿ ಔಟಾದರು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಪೃಥ್ವಿ‌

ಎಡಭುಜದ ನೋವಿನಿಂದ ಬಳಲುತ್ತಿರುವ ಮುಂಬೈನ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರು ಶನಿವಾರ ಕಣಕ್ಕಿಳಿಯಲಿಲ್ಲ. ಇದರಿಂದಾಗಿ ಮುಂಬೈ  ತಂಡವು ಕೇವಲ ಹತ್ತು ಬ್ಯಾಟ್ಸ್‌ಮನ್‌ ಗಳೊಂದಿಗೆ ಆಡಬೇಕಾಯಿತು. ಚಿಕಿತ್ಸೆಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ತೆರಳಲಿದ್ದಾರೆ. ಮುಂದಿನ ವಾರ ನಡೆಯಲಿರುವ ನ್ಯೂಜಿಲೆಂಡ್ ಎ ವಿರುದ್ಧದ ಪಂದ್ಯದಲ್ಲಿ ಅವರು ಭಾರತ ಎ ತಂಡದಲ್ಲಿ ಆಡಲಿದ್ದಾರೆ.

‘ಅವರು ಎನ್‌ಸಿಎಗೆ ತೆರಳಿದ್ದಾರೆ. ಅವರಿಗೆ ಕೈ ಎತ್ತಲು ಕಷ್ಟವಾಗುತ್ತಿದೆ. ಆದ್ದರಿಂದ ಅವರು ಬ್ಯಾಟಿಂಗ್‌ಗೆ ಬರಲಿಲ್ಲ. ಗಾಯದಿಂದ ಅವರು ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕೆಂಬ ಬಗ್ಗೆ ಮಾಹಿತಿಯಿಲ್ಲ’ ಎಂದು ಮುಂಬೈ ತಂಡದ ಮ್ಯಾನೇಜರ್ ಅಜಿಂಕ್ಯ ನಾಯಕ್ ಹೇಳಿದ್ಧಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು