ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ತಿಂಗಳು ರಣಜಿ ಟ್ರೋಫಿ ಕ್ರಿಕೆಟ್

ಎರಡು ಹಂತಗಳಲ್ಲಿ ಟೂರ್ನಿ ಆಯೋಜನೆಗೆ ಬಿಸಿಸಿಐ ನಿರ್ಧಾರ
Last Updated 28 ಜನವರಿ 2022, 16:25 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳ ಎರಡನೇ ವಾರದಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಬಾರಿ ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ನಿರ್ಧರಿಸಿದೆ.

‘ದೇಶಿ ಕ್ರಿಕೆಟ್‌ನ ರಾಜ’ ರಣಜಿ ಟೂರ್ನಿಯನ್ನು ಹೋದ ವರ್ಷ ಕೋವಿಡ್ ಕಾರಣಕ್ಕಾಗಿ ರದ್ದು ಮಾಡಲಾಗಿತ್ತು. ಈ ವರ್ಷದ ಟೂರ್ನಿಯನ್ನು ಜನವರಿ 13ರಂದು ಆರಂಭಿಸಬೇಕಿತ್ತು. ಆದರೆ, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ಮುಂದೂಡಲಾಯಿತು.

’ರಣಜಿ ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸಲು ಮಂಡಳಿಯು ನಿರ್ಧರಿಸಿದೆ. ಫೆಬ್ರುವರಿ ಎರಡನೇ ವಾರದಲ್ಲಿ ಮೊದಲ ಹಂತ ಶುರುವಾಗುವುದು. ಇದರಲ್ಲಿ ಎಲ್ಲ ಲೀಗ್ ಪಂದ್ಯಗಳನ್ನು ಮುಗಿಸಲಾಗುವುದು. ಜೂನ್‌ನಲ್ಲಿ ಎರಡನೇ ಹಂತ ಆಯೋಜಿಸಿ ನಾಕೌಟ್‌ ಪಂದ್ಯಗಳನ್ನು ನಡೆಸಲಾಗುವುದು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

‘ಟೂರ್ನಿಯ ಸಂದರ್ಭದಲ್ಲಿ ಆಟಗಾರರು, ಸಿಬ್ಬಂದಿ ಮತ್ತು ಅಧಿಕಾರವರ್ಗದವರಿಗೆ ಕೋವಿಡ್ ಸಾಂಕ್ರಾಮಿಕದಿಂದ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದಕ್ಕಾಗಿ ನಮ್ಮ ತಂಡವು ಕಾರ್ಯನಿರ್ವಹಿಸುತ್ತಿದೆ. ಎಲ್ಲ ಸವಾಲುಗಳ ನಡುವೆಯೂ ಉತ್ತಮವಾದ ಟೂರ್ನಿಯನ್ನು ಆಯೋಜಿಸಲಾಗುವುದು’ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ 27ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿಗದಿಯಾಗಿದೆ. ಆದ್ದರಿಂದ ಐಪಿಎಲ್ ಆರಂಭಕ್ಕೂ ಮುನ್ನ ಒಂದು ಹಂತ ಮತ್ತು ನಂತರ ಎರಡನೇ ಹಂತದ ರಣಜಿ ಟೂರ್ನಿ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಂಡಳಿಯ ಖಜಾಂಚಿ ಅರುಣ ಧುಮಾಲ್ ಗುರುವಾರ ಹೇಳಿದ್ದರು.

ಟೂರ್ನಿಯಲ್ಲಿ 38 ತಂಡಗಳು ಕಣಕ್ಕಿಳಿಯಲಿವೆ. ಎರಡು ವರ್ಷಗಳ ನಂತರ ಟೂರ್ನಿಯನ್ನು ಆಯೋಜಿಸುತ್ತಿರುವುದಕ್ಕೆ ದೇಶಿ ಕ್ರಿಕೆಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರರೂ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT