ಬುಧವಾರ, ಫೆಬ್ರವರಿ 19, 2020
17 °C
ಐಪಿಎಲ್‌ 2020

ಸೋಲಿನಲ್ಲು ನೀವೆ, ಗೆಲುವಲ್ಲು ನೀವೆ: ಹೊಸ ಲೋಗೊ ಜೊತೆಗೆ ಆರ್‌ಸಿಬಿಯ ಕನ್ನಡಾಭಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಪಿಎಲ್‌ನಲ್ಲಿ ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ, ಪ್ರೇಮಿಗಳ ದಿನದಂದು ತನ್ನ ಹೊಸ ಲೋಗೊ ಅನಾವರಣಗೊಳಿಸಿದೆ. ಲೋಗೊ ಬಿಡುಗಡೆ ಜೊತೆಗೆ ಕನ್ನಡಾಭಿಮಾನವನ್ನೂ ಮೆರೆದಿದೆ.

ಆರ್‌ಸಿಬಿಯು ತನ್ನ ಅಧಿಕೃತ ಟ್ವಿಟರ್‌, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಖಾತೆಗಳಿಂದ ಹಳೆ ಲೋಗೊವನ್ನು ತೆಗೆದು ಹಾಕಿದ್ದು ಸಾಕಷ್ಟು ಸುದ್ದಿಯಾಗಿತ್ತು. ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಸದ್ಯ ಬಿಡುಗಡೆಯಾಗಿರುವ ಲೋಗೊದಲ್ಲಿ ಸಿಂಹದ ಆಕೃತಿಯನ್ನು ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಎಂದಿನಂತೆ ‘ಪ್ಲೇ ಬೋಲ್ಡ್‌’ ಘೋಷ ವಾಕ್ಯವಿದೆ. ಇದು ‘ದಿಟ್ಟ ಆಟ ಮತ್ತು ಎದೆಗಾರಿಕೆಯ ಪ್ರತೀಕವಾಗಿದೆ’ ಎಂದು ಆರ್‌ಸಿಬಿ ಫ್ರಾಂಚೈಸ್‌ ಹೇಳಿದೆ.

ಸಮಾರಂಭದಲ್ಲಿ ಮಾತನಾಡಿರುವ ಆರ್‌ಸಿಬಿ ತಂಡದ ಮುಖ್ಯಸ್ಥ ಸಂಜೀವ್‌ ಚುರಿವಾಲಾ, ‘ಅಭಿಮಾನಿಗಳನ್ನು ನಿರಂತರವಾಗಿ ರಂಜಿಸುವ ನಮ್ಮ ಬದ್ಧತೆಯು ಲೋಗೊದಲ್ಲಿರುವ ಒಂದಂಶವಾಗಿದೆ. ಅಭಿಮಾನಿಗಳೇ ನಮ್ಮ ತಂಡದ ನಿಜವಾದ ಶಕ್ತಿ. ಕ್ರೀಡೆಯ ಬಗೆಗಿನ ಒಲವು, ದೃಷ್ಠಿಕೋನ ಹಾಗೂ ದಿಟ್ಟ ಆಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಭ್ರಮಿಸಲು ಹೊಸ ರೀತಿಯಲ್ಲಿ ಗುರುತಿಸಿಕೊಳ್ಳಬೇಕಾದ ಅವಶ್ಯಕತೆ ಪ್ರಾಂಚೈಸ್‌ಗೆ ಖಂಡಿತವಾಗಿಯೂ ಇತ್ತು ಎಂದು ನಂಬಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಲೋಗೊ ಮಾತ್ರವಲ್ಲದೆ ಹಳೆಯ 12 ಟೂರ್ನಿಗಳನ್ನು ನೆನಪಿಸುವ ತುಣುಕುಗಳನ್ನೊಳಗೊಂಡ ವಿಡಿಯೊವನ್ನೂ ಹರಿಬಟ್ಟಿದೆ. ವಿಡಿಯೊದ ಜೊತೆಗೆ, ‘ಹೊಸ ದಶಕ, ಹೊಸ ಆರ್‌ಸಿಬಿ. ಹೊಸ ಅಧ್ಯಾಯ ಈಗ ಆರಂಭ’ ಎಂದು ಬರೆಯಲಾಗಿದೆ.

ಲೋಗೊ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕೊಹ್ಲಿ, ‘ನಮ್ಮ ಹೊಸ ಲೋಗೊ ನೋಡಲು ರೋಮಾಂಚನವಾಗುತ್ತದೆ. ಇದು ದಿಟ್ಟ ಆಟದ ಗುರುತಾಗಿದೆ ಮತ್ತು ನಮ್ಮ ಆಟಗಾರರಿಗೆ ಮೈದಾನದಲ್ಲಿ ಹೋರಾಟದ ಸ್ಫೂರ್ತಿಯನ್ನು ತುಂಬಲಿದೆ. 2020ರ ಐಪಿಎಲ್‌ಗಾಗಿ ಕಾಯಲಾರೆ. ಹೊಸ ದಶಕ ಮತ್ತು ಹೊಸ ಆರ್‌ಸಿಬಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹಿಂದಿ ಪ್ರಚಾರ ಮಾಡುತ್ತಿದ್ದೀರೋ? ಕ್ರಿಕೆಟ್ ಕಾಮೆಂಟರಿ ನೀಡುತ್ತಿದ್ದೀರೋ?: ಆಕ್ರೋಶ

ಕನ್ನಡದ ಕಂಪು
ತಂಡಕ್ಕೆ ಕನ್ನಡಿಗರೇ ನಿಜವಾದ ಸ್ಫೂರ್ತಿ ಎಂಬುದನ್ನು ಸಾರಿರುವ ಆರ್‌ಸಿಬಿ, ಈ ಸ್ಫೂರ್ತಿ ಹೀಗೆಯೇ ಇರಲಿ ಎಂದು ಟ್ವಿಟರ್‌ ಪುಟದಲ್ಲಿ ಕವಿತೆಯ ರೂಪದಲ್ಲಿ ಮನವಿ ಮಾಡಿದೆ.

ಹೆಸರಲ್ಲು ನೀವೆ
ಉಸಿರಲ್ಲು ನೀವೆ
ಎಲ್ಲೆಲ್ಲು ನೀವೆ ಸ್ಫೂರ್ತಿ

ಸೋಲಿನಲ್ಲು ನೀವೆ
ಗೆಲುವಲ್ಲು ನೀವೆ
ಎಂದೆಂದು ನೀವೆ ಸಾತಿ

ನಮ್ಮ ನೆನ್ನೆಗಳು ನೀವೆ
ನಾಳೆಗಳು ನೀವೆ
ಎಲ್ಲವೂ ನಿಮ್ಮ ಪ್ರೀತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು