ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB v DC | ಬೌಂಡರಿ ಗೆರೆ ಬಳಿ ಅಮೋಘ ಕ್ಷೇತ್ರರಕ್ಷಣೆ: ವಿಲಿಯರ್ಸ್ ನೆನಪಿಸಿದ ವೇರಂ

Published 1 ಮಾರ್ಚ್ 2024, 3:24 IST
Last Updated 1 ಮಾರ್ಚ್ 2024, 3:24 IST
ಅಕ್ಷರ ಗಾತ್ರ

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಅಮೋಘ ಕ್ಷೇತ್ರರಕ್ಷಣೆ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಜಾರ್ಜಿಯಾ ವೇರಂ, ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌ ಅವರನ್ನು ನೆನಪಿಸಿದರು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 194 ರನ್ ಕಲೆಹಾಕಿತು. ಶೆಫಾಲಿ ವರ್ಮಾ (50), ಅಲೈಸ್‌ ಕ್ಯಾಪ್ಸಿ (46), ಮರೈಝಾನ್ ಕಾಪ್‌ (32), ಜೆಸ್‌ ಯೊನಾಸನ್ (ಅಜೇಯ 36) ಅವರು ಆರ್‌ಸಿಬಿ ಬೌಲರ್‌ಗಳೆದುರು ಅಬ್ಬರಿಸಿದರು.

ಗುರಿ ಬೆನ್ನಟ್ಟಿದ ಆರ್‌ಸಿಬಿ, 9 ವಿಕೆಟ್‌ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಸ್ಮೃತಿ ಮಂದಾನ 43 ಎಸೆತಗಳಲ್ಲಿ 74 ರನ್‌ ಗಳಿಸಿದರೂ, ತಂಡಕ್ಕೆ ಗೆಲುವು ದಕ್ಕಲಿಲ್ಲ. ಇದರೊಂದಿಗೆ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಎದುರು 25 ರನ್‌ ಅಂತರದ ಸೋಲೊಪ್ಪಿಕೊಂಡಿತು.

ವೇರಂ ಅದ್ಭುತ ಕ್ಷೇತ್ರರಕ್ಷಣೆ
ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್‌ ಎನಿಸಿರುವ ಆಸ್ಟ್ರೇಲಿಯಾದ ಜಾರ್ಜಿಯಾ ವೇರಂ, ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಗಮನ ಸೆಳೆದರು. ಆ ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌ ಅವರನ್ನು ನೆನಪಿಸಿದರು.

ಡೆಲ್ಲಿ ತಂಡ 10 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 84 ರನ್ ಗಳಿಸಿತ್ತು. ಶೆಫಾಲಿ ವರ್ಮಾ ಹಾಗೂ ಅಲೈಸ್‌ ಕ್ಯಾಪ್ಸಿ ಕ್ರೀಸ್‌ನಲ್ಲಿದ್ದರು. ನಾದಿನ್ ಡಿ ಕ್ಲಾರ್ಕ್ ಎಸೆದ 11ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಕ್ಯಾಪ್ಸಿ, 2ನೇ ಎಸೆತದಲ್ಲಿ ಒಂಟಿ ರನ್‌ ಕದ್ದರು.

ನಂತರದ ಎಸೆತವನ್ನು ಶೆಫಾಲಿ ವರ್ಮಾ ಡೀಪ್‌ ಮಿಡ್‌ವಿಕೆಟ್‌ನತ್ತ ಬಲವಾಗಿ ಬಾರಿಸಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವೇರಂ, ಮೇಲಕ್ಕೆ ಜಿಗಿದು ಎಡಗೈನಿಂದ ಚೆಂಡನ್ನು ಹಿಡಿದರು. ಆದರೆ, ದೇಹ ನಿಯಂತ್ರಣಕ್ಕೆ ಸಿಗಲಿಲ್ಲ. ಹೀಗಾಗಿ, ಸಿಕ್ಸರ್‌ ಹೋಗುವುದನ್ನು ತಪ್ಪಿಸಲು ತಾವು ಗಾಳಿಯಲ್ಲಿದ್ದಾಗಲೇ ಚೆಂಡನ್ನು ಮೈದಾನದತ್ತ ಎಸೆದು ಬೌಂಡರಿ ಗೆರೆಯಾಚೆ ಬಿದ್ದರು. ಇದರಿಂದಾಗಿ ಆರ್‌ಸಿಬಿಗೆ 4 ರನ್‌ ಉಳಿತಾಯವಾಯಿತು.

2018ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಯ ವಿಲಿಯರ್ಸ್‌ ಅವರೂ ಇದೇ ರೀತಿ ಕ್ಷೇತ್ರರಕ್ಷಣೆ ಮಾಡಿ ತಂಡದ ಜಯಕ್ಕೆ ಕಾರಣರಾಗಿದ್ದರು.

ಬೆಂಗಳೂರಿನಲ್ಲೇ ನಡೆದಿದ್ದ ಆ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 216 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ರೈಸರ್ಸ್‌, 7 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 60 ರನ್‌ ಬಾರಿಸಿತ್ತು. ಕ್ರೀಸ್‌ನಲ್ಲಿದ್ದ ಅಲೆಕ್ಸ್‌ ಹೇಲ್ಸ್‌ (37) ಬೀಸಾಟದ ಮೂಲಕ ಆರ್‌ಸಿಬಿ ಪಾಳಯದಲ್ಲಿ ಭೀತಿ ಹುಟ್ಟಿಸಿದ್ದರು.

ಮೋಯಿನ್ ಅಲಿ ಹಾಕಿದ 8ನೇ ಓವರ್‌ನ ಕೊನೇ ಎಸೆತವನ್ನು ಅಲೆಕ್ಸ್‌, ಮುನ್ನುಗ್ಗಿ ಡೀಪ್‌ ಮಿಡ್‌ವಿಕೆಟ್‌ನತ್ತ ಬಾರಿಸಿದರು. ಲಾಂಗ್ ಆನ್‌ ಬಳಿ ಇದ್ದ ವಿಲಿಯರ್ಸ್‌ ಓಡಿ ಬಂದು, ಜಿಗಿದು ಚೆಂಡನ್ನು ಒಂದೇ ಕೈಯಲ್ಲಿ ಹಿಡಿದಿದ್ದರು. ತಾವು ಬೌಂಡರಿ ಗೆರೆ ಬಳಿ ಇರುವುದನ್ನು ತಕ್ಷಣವೇ ಅರಿತ ಅವರು, ಬಲಗಾಲನ್ನು ಗೆರೆಗೆ ತಾಗದಂತೆ ಇಳಿದು ಸಂಭ್ರಮಾಚರಿಸಿದರು.

ಹೇಲ್ಸ್‌ ಔಟಾದ ಬಳಿಕ ಕೇನ್‌ ವಿಲಿಯಮ್ಸನ್‌ (81) ಮತ್ತು ಮನೀಷ್‌ ಪಾಂಡೆ (62) ಬಿರುಸಾಗಿ ರನ್‌ ಗಳಿಸಿದರೂ, ರೈಸರ್ಸ್‌ ಪಡೆ 204 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ವಿಲಿಯರ್ಸ್‌ (39 ಎಸೆತಗಳಲ್ಲಿ 69 ರನ್‌) ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿದ್ದರು.

ಇದೀಗ ಅಭಿಮಾನಿಗಳು ವೇರಂ ಅವರನ್ನು ವಿಲಿಯರ್ಸ್‌ಗೆ ಹೋಲಿಸಿ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT