ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಪೋಲ್‌ವಾಲ್ಟ್‌: ಡುಪ್ಲಾಂಟಿಸ್ ವಿಶ್ವದಾಖಲೆ

ಚಿನ್ನದ ಪದಕ ಉಳಿಸಿಕೊಂಡ ಸ್ವೀಡನ್‌ನ ಅಥ್ಲೀಟ್‌
Published 6 ಆಗಸ್ಟ್ 2024, 22:19 IST
Last Updated 6 ಆಗಸ್ಟ್ 2024, 22:19 IST
ಅಕ್ಷರ ಗಾತ್ರ

ಪ್ಯಾರಿಸ್‌ : ಸ್ವೀಡನ್‌ನ ಅರ್ಮಾಂಡ್ ಡುಪ್ಲಾಂಟಿಸ್ ಅವರು ಒಲಿಂಪಿಕ್ಸ್‌ನ ಪುರುಷರ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕವನ್ನು ಉಳಿಸಿಕೊಂಡರು.

ಸೋಮವಾರ ತಡರಾತ್ರಿ ನಡೆದ ಫೈನಲ್‌ ಸ್ಪರ್ಧೆಯಲ್ಲಿ 69 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ  24 ವರ್ಷ ವಯಸ್ಸಿನ ಡುಪ್ಲಾಂಟಿಸ್ 6.25 ಮೀಟರ್‌ ಎತ್ತರ ಜಿಗಿದು ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

ಟೋಕಿಯೊ ಒಲಿಂಪಿಕ್ಸ್‌ನ ಚಾಂಪಿಯನ್‌ ಡುಪ್ಲಾಂಟಿಸ್, ಏಪ್ರಿಲ್‌ನಲ್ಲಿ ಚೀನಾದ ಕ್ಸಿಯಾಮೆನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ 6.24 ಮೀಟರ್‌ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದರು. ಇದೀಗ ಅದಕ್ಕಿಂತ ಒಂದು ಸೆಂಟಿ ಮೀಟರ್‌ ಎತ್ತರಕ್ಕೆ ಜಿಗಿದ ಅಮೆರಿಕ ಮೂಲದ ಅಥ್ಲೀಟ್‌, ಸತತ ಒಂಬತ್ತನೇ ಬಾರಿ ದಾಖಲೆಯನ್ನು ಬಲಪಡಿಸಿಕೊಂಡರು.

ಈ ಸ್ಪರ್ಧೆಯಲ್ಲಿ ಅಮೆರಿಕದ ಸ್ಯಾಮ್ ಕೆಂಡ್ರಿಕ್ಸ್ (5.95 ಮೀಟರ್‌) ಮತ್ತು ಗ್ರೀಸ್‌ನ ಎಮ್ಯಾನೌಯಿಲ್ ಕರಾಲಿಸ್ (5.90) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

ಅಮೆರಿಕದ ರಿಕನ್ ಬಾಬ್ ರಿಚರ್ಡ್ಸ್ ನಂತರ ಪೋಲ್‌ ವಾಲ್ಟ್ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಮೊದಲ ಅಥ್ಲೀಟ್‌ ಎಂಬ ಹಿರಿಮೆಗೂ ಡುಪ್ಲಾಂಟಿಸ್ ಪಾತ್ರವಾದರು. ರಿಚರ್ಡ್ಸ್ ಅವರು 1952 ಮತ್ತು 1956ರಲ್ಲಿ ಚಿನ್ನ ಗೆದ್ದಿದ್ದರು.

ಫಲಿತಾಂಶಗಳು: ಪುರುಷರು: ಪೋಲ್‌ ವಾಲ್ಟ್‌: ಅರ್ಮಾಂಡ್ ಡುಪ್ಲಾಂಟಿಸ್ (ಸ್ವೀಡನ್‌, 6.25 ಮೀಟರ್‌)–1; ಸ್ಯಾಮ್ ಕೆಂಡ್ರಿಕ್ಸ್ (ಅಮೆರಿಕ, 5.95 ಮೀ)–2; ಮ್ಯಾನೌಯಿಲ್ ಕರಾಲಿಸ್ (ಗ್ರೀಸ್‌, 5.90 ಮೀ)–3.

ಮಹಿಳೆಯರು: 800 ಮೀಟರ್‌ ಓಟ: ಕೀಲಿ ಹಾಡ್ಗ್‌ಕಿನ್ಸನ್ (ಗ್ರೇಟ್‌ ಬ್ರಿಟನ್‌, 1 ನಿ.56.71 ಸೆ)– 1; ತ್ಸಿಗೆ ಡುಗುಮಾ (ಇಥಿಯೋಪಿಯಾ, 1:57.15)–2;  ಮೇರಿ ಮೊರಾ (ಕೆನ್ಯಾ, 1:57.42)– 3.

5000 ಮೀಟರ್‌ ಓಟ: ಬೀಟ್ರಿಸ್ ಚೆಬೆಟ್ (ಕೆನ್ಯಾ, 14 ನಿ. 28.56 ಸೆ)– 1; ಫೈತ್‌  ಕಿಪಿಗೊನ್ (ಕೆನ್ಯಾ, 14:29.60)–2; ಸಿಫಾನ್ ಹಸನ್‌ (ನೆದರ್ಲೆಂಡ್ಸ್‌, 14:30.61)–3. ಡಿಸ್ಕಸ್‌ ಥ್ರೋ: ವಲೇರಿ ಅಲೆನ್‌ (ಅಮೆರಿಕ, 69.50 ಮೀ)– 1; ಬಿನ್ ಫೆಂಗ್ (ಚೀನಾ, 67.51)–2; ಸಾಂಡ್ರಾ ಎಲ್ಕಾಸೆವಿಕ್ (ಕ್ರೊವೇಷ್ಯಾ, 67.51)–3.

ಮಹಿಳೆಯರ 800 ಮೀಟರ್‌ ಓಟದಲ್ಲಿ ಗುರಿಯತ್ತ ಮುನ್ನುಗ್ಗುತ್ತಿರುವ ಗ್ರೇಟ್‌ ಬ್ರಿಟನ್‌ನ ಕೀಲಿ ಹಾಡ್ಗ್‌ಕಿನ್ಸನ್ (ಚಿನ್ನ– ಬಲಗಡೆ) ಇಥಿಯೋಪಿಯಾದ ತ್ಸಿಗೆ ಡುಗುಮಾ (ಬೆಳ್ಳಿ– ಬಲದಿಂದ ಎರಡನೆಯವರು) ಮತ್ತು ಕೆನ್ಯಾದ ಮೇರಿ ಮೊರಾ (ಕಂಚು; ಬಲದಿಂದ ಮೂರನೆಯವರು) –ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್
ಮಹಿಳೆಯರ 800 ಮೀಟರ್‌ ಓಟದಲ್ಲಿ ಗುರಿಯತ್ತ ಮುನ್ನುಗ್ಗುತ್ತಿರುವ ಗ್ರೇಟ್‌ ಬ್ರಿಟನ್‌ನ ಕೀಲಿ ಹಾಡ್ಗ್‌ಕಿನ್ಸನ್ (ಚಿನ್ನ– ಬಲಗಡೆ) ಇಥಿಯೋಪಿಯಾದ ತ್ಸಿಗೆ ಡುಗುಮಾ (ಬೆಳ್ಳಿ– ಬಲದಿಂದ ಎರಡನೆಯವರು) ಮತ್ತು ಕೆನ್ಯಾದ ಮೇರಿ ಮೊರಾ (ಕಂಚು; ಬಲದಿಂದ ಮೂರನೆಯವರು) –ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT