ವಿರಾಟ್ಗೆ ಶೋಕಾಸ್ ನೋಟಿಸ್ ವದಂತಿ ನಿರಾಕರಿಸಿದ ಗಂಗೂಲಿ

ನವದಹೆಲಿ: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದರು ಎಂಬ ವದಂತಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ಎಎನ್ಐ ಟ್ವೀಟಿಸಿದೆ. ಎಎನ್ಐಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ವಿಜಯ್ ಲೋಕಪಲ್ಲಿ ಬರಹ: ವಿರಾಟ್ ಕೊಹ್ಲಿಗೆ ಬೇಕಿತ್ತು ಉತ್ತಮ ವಿದಾಯ
ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ತೆಗೆದು ಹಾಕಲು ಕಾರಣವಾದ ಘಟನೆಗಳ ಕುರಿತು ಸಾರ್ವಜನಿಕವಾಗಿ ಮಾತನಾಡಿದ ವಿರಾಟ್ ಕೊಹ್ಲಿ ವಿರುದ್ಧ ಶೋಕಾಸ್ ನೋಟಿಸ್ ರವಾನಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
Reports of me wanting to issue a show-cause notice to Virat Kohli are not true: BCCI president Sourav Ganguly to ANI
(File photo) pic.twitter.com/TGF4XFb5kS
— ANI (@ANI) January 21, 2022
ಕಳೆದ ವರ್ಷ ಟ್ವೆಂಟಿ-20 ನಾಯಕ ಸ್ಥಾನವನ್ನು ಕೊಹ್ಲಿ ತೊರೆದಿದ್ದರು. ಬಳಿಕ ನಿಗದಿತ ಓವರ್ಗಳ ಕ್ರಿಕೆಟ್ನಲ್ಲಿ ಏಕ ಕಪ್ತಾನ ನೀತಿಯನ್ನು ಪಾಲಿಸಿದ್ದ ಬಿಸಿಸಿಐ, ವಿರಾಟ್ ಅವರನ್ನು ಏಕದಿನ ನಾಯಕ ಸ್ಥಾನದಿಂದ ಕೆಳಗಿಳಿಸಿತ್ತು.
ಕೊಹ್ಲಿಯನ್ನು ಏಕದಿನ ಕಪ್ತಾನಗಿರಿಯಿಂದ ಕೆಳಗಿಳಿಸಿದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿದ ಗಂಗೂಲಿ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ವಿರಾಟ್ ಅವರೊಂದಿಗೆ ಚರ್ಚಿಸಲಾಗಿತ್ತು. ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸದಂತೆ ವಿನಂತಿಸಲಾಗಿತ್ತು ಎಂದು ಹೇಳಿದ್ದರು.
ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದ ಕೊಹ್ಲಿ, ಟ್ವೆಂಟಿ-20 ನಾಯಕತ್ವವನ್ನು ತೊರೆದಾಗ ಸರ್ವಾನುಮತದಿಂದ ಸ್ವಾಗತಿಸಲಾಯಿತು. ಅಲ್ಲದೆ ಏಕದಿನ ನಾಯಕತ್ವದಿಂದ ಕೆಳಗಿಳಿಸುವ ಕೆಲವೇ ತಾಸಿನ ಮೊದಲು ತಿಳಿಸಲಾಯಿತು ಎಂದು ಹೇಳಿದ್ದರು.
ಕೊಹ್ಲಿ ಹಾಗೂ ಗಂಗೂಲಿ ಅವರ ತದ್ವಿರುದ್ಧವಾದ ಹೇಳಿಕೆಗಳು ವಿವಾದಕ್ಕೀಡಾಗಿದ್ದವು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎದುರಾದ ಸೋಲಿನ ಬಳಿಕ ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ್ದ ಗಂಗೂಲಿ, ಇದು ವಿರಾಟ್ ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಬಿಸಿಸಿಐ ಅದನ್ನು ಗೌರವಿಸುತ್ತದೆ ಎಂದು ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.