ಬುಧವಾರ, ಜುಲೈ 6, 2022
23 °C

ಯುವಿ, ಸಚಿನ್, ವೀರು ಅಬ್ಬರ; ಇಂಡಿಯಾ ಲೆಜೆಂಡ್ಸ್ ಫೈನಲ್‌ಗೆ ಲಗ್ಗೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ರಾಯ್‌ಪುರ: ನಾಯಕ ಸಚಿನ್ ತೆಂಡೂಲ್ಕರ್ (65), 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್ (49*) ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (35) ಬ್ಯಾಟಿಂಗ್ ಅಬ್ಬರದ ನೆರವಿನಿಂದ ರಾಯ್‌ಪುರದಲ್ಲಿ ಸಾಗುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟ್ವೆಂಟಿ-20 ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಬುಧವಾರ ವೆಸ್ಟ್‌ಇಂಡೀಸ್ ಲೆಜೆಂಡ್ಸ್ ವಿರುದ್ಧ ನಡೆದ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು 12 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಇದರೊಂದಿಗೆ ವಿಂಡೀಸ್ ದಿಗ್ಗಜರಾದ ಬ್ರಿಯನ್ ಲಾರಾ (46), ಡ್ವೇಯ್ನ್ ಸ್ಮಿತ್ (63) ಮತ್ತು ನರಸಿಂಗ್ ಡಿಯೋನರೈನ್ (59) ಹೋರಾಟವು ವ್ಯರ್ಥವೆನಿಸಿತ್ತು.

 

 

 

ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಲೆಜೆಂಡ್ಸ್ ಮೂರು ವಿಕೆಟ್ ನಷ್ಟಕ್ಕೆ 218 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ವೀರು ಕೇವಲ 17 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಬಿರುಸಿನ 35 ರನ್ ಗಳಿಸಿದರು.

ಇದನ್ನೂ ಓದಿ: 

 

ಅಲ್ಲದೆ ನಾಯಕ ಸಚಿನ್ ಜೊತೆಗೆ 5.3 ಓವರ್‌ಗಳಲ್ಲಿ 56 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಾಸ್ಟರ್ ಬ್ಲಾಸ್ಟರ್ ಅರ್ಧಶತಕ ಸಾಧನೆ ಮಾಡಿದರು. 42 ಎಸೆತಗಳನ್ನು ಎದುರಿಸಿದ ಸಚಿನ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.

 

 

 

ಕೊನೆಯಲ್ಲಿ ಅಬ್ಬರಿಸಿದ ಯುವರಾಜ್, ಕೇವಲ 20 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಯುವಿ ಇನ್ನಿಂಗ್ಸ್‌ನಲ್ಲಿ ಆರು ಭರ್ಜರಿ ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಸೇರಿದ್ದವು.

 

ಇದರಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಯೂಸುಫ್ ಪಠಾಣ್ (ಅಜೇಯ 37 ರನ್, 20 ಎಸೆತ) ಮತ್ತು ಮೊಹಮ್ಮದ್ ಕೈಫ್ (27) ಸಹ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು.

ಬಳಿಕ ಗುರಿ ಬೆನ್ನಟ್ಟಿದ ವೆಸ್ಟ್‌ಇಂಡೀಸ್ ಲೆಜೆಂಡ್ಸ್ ಆರು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆರಂಭಿಕ ಡ್ವೇಯ್ನ್ ಸ್ಮಿತ್ 36 ಎಸೆತಗಳಲ್ಲಿ 63 ರನ್ (9 ಬೌಂಡರಿ, 2 ಸಿಕ್ಸರ್) ಗಳಿಸಿದರು.

 

 

 

ನರಸಿಂಗ್ ಡಿಯೋನರೈನ್ (59) ಸಹ ಬಿರುಸಿನ ಅರ್ಧಶತಕ ಬಾರಿಸಿದರು. 44 ಎಸೆತಗಳನ್ನು ಎದುರಿಸಿದ ಡಿಯೋನರೈನ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಇದನ್ನೂ ಓದಿ: 

 

ಮಧ್ಯಮ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಬ್ರಿಯಾನ್ ಲಾರಾ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಬೆಂಬಲದಿಂದ 46 ರನ್ ಚಚ್ಚಿದ್ದರು. ಈ ಮೂಲಕ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು.

ಆದರೆ ಲಾರಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ವಿನಯ್ ಕುಮಾರ್ ಭಾರತದ ರೋಚಕ ಗೆಲುವನ್ನು ಖಚಿತಪಡಿಸಿದರು.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು