ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುಟುಕು ಕ್ರಿಕೆಟ್‌’ನಲ್ಲಿ ಬೆಳಗಿದ ರೋಹನ್‌...

Last Updated 17 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಯ ಫೈನಲ್‌ ಪಂದ್ಯವಿದೆ ಎಂಬುದು ಖಚಿತವಾಗುತ್ತಿದ್ದಂತೆ ಮತ್ತೆ ಅಬ್ಬರಿಸುತ್ತಾರಾ ರೋಹನ್‌ ಎನ್ನುವ ಪ್ರಶ್ನೆ ಹಿಂದಲ್ಲೇ ಉದ್ಭವವಾಗಿತ್ತು.

ಬೆಳಗಾವಿಯ ರೋಹನ್‌ಗೆ ಮಹಾರಾಷ್ಟ್ರ ಅಪರಿಚಿತವೇನಲ್ಲ. ಅದೇ ರಾಜ್ಯದ ಗಡಿಜಿಲ್ಲೆಯ ಹುಡುಗನಿಗೆ ಕರ್ನಾಟಕ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಬೇಕು, ದೊಡ್ಡ ಸಾಧನೆ ಮಾಡಬೇಕು ಎನ್ನುವ ಆಸೆಯಿತ್ತು. ಇದಕ್ಕಾಗಿ ಹಿಂದೆ ಅನೇಕ ಅವಕಾಶಗಳು ಲಭಿಸಿದ್ದರೂ, ದೇಶಿ ಕ್ರಿಕೆಟ್‌ನ ದೊಡ್ಡ ಟ್ರೋಫಿಯೊಂದು ಕೈಗೆಟುಕುವ ಮಟ್ಟಿಗೆ ಸಾಧನೆ ಸಾಧ್ಯವಾಗಿರಲಿಲ್ಲ.

ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ತೋರುತ್ತಿದೆ. ಎಂಟು ಸಲ ರಣಜಿ ಟ್ರೋಫಿ, ಮೂರು ಬಾರಿ ವಿಜಯ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ಆದರೆ, 2006-07ರಿಂದ ನಡೆಯುತ್ತಿರುವ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಒಮ್ಮೆಯೂ ಪ್ರಶಸ್ತಿ ಜಯಿಸಿರಲಿಲ್ಲ. ವಲಯವಾರು ನಡೆದ ಟೂರ್ನಿಯಲ್ಲಿ ಕರ್ನಾಟಕ ತಂಡ ದಕ್ಷಿಣ ವಲಯದಲ್ಲಿ ಹಲವು ಬಾರಿ ಪ್ರಶಸ್ತಿ ಗೆದ್ದಿದೆ. ಆದರೆ ಸೂಪರ್‌ ಲೀಗ್‌ ಹಂತ ದಾಟಿ ಒಮ್ಮೆಯೂ ಫೈನಲ್‌ ತಲುಪಿರಲಿಲ್ಲ. ಈ ಬಾರಿ ಅಜೇಯ ಸಾಧನೆ ಮೂಲಕ ಪ್ರಶಸ್ತಿ ಗೆದ್ದು ‘ಮುಷ್ತಾಕ್‌ ಅಲಿ’ ಟ್ರೋಫಿಯ ಕೊರತೆ ನೀಗಿಸಿದೆ.

ಕರ್ನಾಟಕ ತಂಡದ ಸಂಘಟಿತ ಹೋರಾಟ ಮತ್ತು ಅನುಭವಿಗಳ ಬಲವೇ ಈ ಯಶಸ್ಸಿಗೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅನಿರೀಕ್ಷಿತವಾಗಿ ತಂಡದಲ್ಲಿ ಸ್ಥಾನ ಪಡೆದು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾದ ರೋಹನ್‌ ಕದಂ. ಎಡಗೈ ಬ್ಯಾಟ್ಸ್‌ಮನ್‌ ರೋಹನ್‌ 12 ಪಂದ್ಯಗಳಿಂದ ಒಟ್ಟು 536 ರನ್ ಕಲೆಹಾಕಿದರು. ಐದು ಅರ್ಧಶತಕಗಳನ್ನೂ ಬಾರಿಸಿದ್ದರು. ಇದು ಸೈಯದ್‌ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಗಳಿಸಿದ ಒಟ್ಟು ಗರಿಷ್ಠ ಮೊತ್ತ ಎನ್ನುವ ಕೀರ್ತಿಗೂ ಪಾತ್ರವಾಯಿತು. ಅಜೇಯ ಗೆಲುವಿನ ಮೂಲಕ ಕರ್ನಾಟಕ ತಂಡ ದಾಖಲೆ ಬರೆಯಿತು ಕೂಡ.

ಬದುಕು ಬದಲಿಸಿತು ಬೆಂಗಳೂರು

ರೋಹನ್‌ 12 ವರ್ಷಗಳ ಹಿಂದೆ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ತರಬೇತಿ ಆರಂಭಿಸುವ ಮೂಲಕ ವೃತ್ತಿಪರ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಬೆಳಗಾವಿ ಪ್ರೀಮಿಯರ್‌ ಲೀಗ್‌, ಅಂತರ ಕ್ಲಬ್‌ ಟೂರ್ನಿಗಳಲ್ಲಿ ಆಡಿ ಗಮನ ಸೆಳೆದರು. ಬೆಳಗಾವಿಯ ಮಧುಕರ ವಿಠ್ಠಲ್‌ ಹೆರ್ವಾಡ್ಕರ್‌ ಶಾಲೆಯಲ್ಲಿ ಪ್ರೌಢಶಾಲೆ ಪೂರ್ಣಗೊಳಿಸಿ ಶಿಕ್ಷಣ ಹಾಗೂ ಇನ್ನಷ್ಟು ಕ್ರಿಕೆಟ್‌ ತರಬೇತಿ ಪಡೆಯುವ ಉದ್ದೇಶದಿಂದ 16 ವರ್ಷದವರಾಗಿದ್ದಾಗ ಬೆಂಗಳೂರು ಸೇರಿದರು. ಜೈನ್‌ ಕಾಲೇಜಿನಲ್ಲಿ ಓದಿದ್ದಾರೆ. ವಿಜಯ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ರೋಹನ್ ತಂದೆ ಪ್ರಮೋದ ಕದಂ ವಿಶ್ವವಿದ್ಯಾಲಯದ ಮಟ್ಟದ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಿದ್ದರು. ಅವರು ಎಡಗೈ ಸ್ಪಿನ್ನರ್‌. ತಮ್ಮಂತೆಯೇ ಮಗನನ್ನೂ ಎಡಗೈ ಸ್ಪಿನ್ನರ್‌ ಮಾಡಬೇಕು ಎನ್ನುವ ಆಸೆ ಅಪ್ಪನಿಗೆ. ಆದ್ದರಿಂದ ಬೌಲಿಂಗ್‌ಗೆ ಒತ್ತು ಕೊಟ್ಟು ಅಭ್ಯಾಸ ಮಾಡಿಸುತ್ತಿದ್ದರು. ಗ್ರಾನೈಟ್ ಉದ್ಯಮಿಯಾಗಿರುವ ಪ್ರಮೋದ, ಮಗನ ಸಲುವಾಗಿ ತಮ್ಮ ಫ್ಯಾಕ್ಟರಿಯಲ್ಲಿ ಟರ್ಫ್‌ ವಿಕೆಟ್‌ ನಿರ್ಮಿಸಿದ್ದರು. ಆದರೆ, ರೋಹನ್‌ ವೇಗ, ಬ್ಯಾಟಿಂಗ್‌ ಕೌಶಲ ಗುರುತಿಸಿದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ನ ತರಬೇತುದಾರ ಸಂಗಮ ಪಾಟೀಲ ‘ನೀನು ಉತ್ತಮ ಬ್ಯಾಟ್ಸ್‌ಮನ್‌ ಆಗುವೆ’ ಎನ್ನುವ ಭರವಸೆ ತುಂಬಿದರು. ಈ ಮಾತೇ ಮುಂದೆ ದೊಡ್ಡ ಸಾಧನೆಗೆ ಕಾರಣವಾಯಿತು.

ರೋಹನ್‌ ವಿವಿಧ ಟೂರ್ನಿಗಳಲ್ಲಿ ಬೆಳಗಾವಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದಾರೆ. 16 ಮತ್ತು 19 ವರ್ಷದ ಒಳಗಿನವರ ವಿಭಾಗದಲ್ಲಿ ಧಾರವಾಡ ವಲಯದ ಪರ ಆಡಿದ್ದಾರೆ. ಸಂಗಮ ಪಾಟೀಲ ಬಳಿ ತರಬೇತಿ ಪಡೆದ ರೋಹನ್‌ ಕದಂ, ರೋನಿತ್‌ ಮೋರೆ, ಸುಜೇತ್‌ ಸಾತೇರಿ, ಸ್ವಪ್ನಿಲ್‌ ಎಳವೆ. ನಾರಾಯಣ ನಾರ್ವೇಕರ್‌ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ರಾಜ್ಯ ತಂಡದಲ್ಲಿ ಆಡಿದ್ದಾರೆ. ‘ರೋಹನ್‌ ದಿನಕ್ಕೆ ಇಂತಿಷ್ಟೇ ಸಮಯ ಅಭ್ಯಾಸ ಮಾಡಬೇಕೆಂದು ಎಂದೂ ಮಿತಿ ಹಾಕಿಕೊಂಡವನಲ್ಲ. ಯಾವಾಗಲೂ ಅಭ್ಯಾಸಕ್ಕೆ ಒತ್ತು ಕೊಡುತ್ತಿದ್ದ. ನಾನು ತರಬೇತಿ ನೀಡಿದ್ದು ಶೇ 10ರಷ್ಟು ಮಾತ್ರ. ಆತನ ಪ್ರಯತ್ನ ಹಾಗೂ ಕ್ರಿಕೆಟ್‌ ಬಗ್ಗೆ ಹೊಂದಿರುವ ಬದ್ಧತೆಯೇ ಈ ಸಾಧನೆಗೆ ಕಾರಣ’ ಎಂದು ಪಾಟೀಲ ಹೇಳಿದರು.

ಈಡೇರಿತು ಅಮ್ಮನ ಆಸೆ

ಅಪ್ಪನಂತೆ ಅಮ್ಮನಿಗೂ ಮಗ ದೊಡ್ಡ ಕ್ರಿಕೆಟಿಗನಾಗಬೇಕು ಎನ್ನುವ ಆಸೆಯಿತ್ತು. ಇದಕ್ಕಾಗಿ ಮಗನ ಎಲ್ಲ ಕ್ರೀಡಾ ಚಟುವಟಿಕೆಗೂ ಬೆಂಬಲವಾಗಿದ್ದರು. ಬೆಳಗಾವಿಯಲ್ಲಿ ಗೋಗಟೆ ಕಾಲೇಜಿನಲ್ಲಿ ರೋಹನ್‌ ತಾಯಿ ಜಯಶ್ರೀ ಕದಂ ಪ್ರಾಧ್ಯಾಪಕಿಯಾಗಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಅವರು ತೀರಿಕೊಂಡರು.

‘ಮಗ ದೊಡ್ಡ ಸಾಧನೆ ಮಾಡಬೇಕು ಎನ್ನುವುದು ತಾಯಿಯ ಆಸೆಯಾಗಿತ್ತು. ಕರ್ನಾಟಕ ತಂಡ ಮೊದಲ ಬಾರಿಗೆ ಟಿ–20 ಟೂರ್ನಿಯಲ್ಲಿ ಚಾಂಪಿಯನ್‌ ಆದಾಗ ಮಗ ಪ್ರಮುಖ ಪಾತ್ರ ವಹಿಸಿದ್ದಾನೆ. ಇದು ಕರ್ನಾಟಕ ತಂಡ ಹಾಗೂ ನಮಗೂ ಹೆಮ್ಮೆಯ ಕ್ಷಣ. ಈ ಖುಷಿ ಅನುಭವಿಸಲು ತಾಯಿಯೇ ಇಲ್ಲವಲ್ಲ’ ಎಂದು ಪ್ರಮೋದ ಕದಂ ಬೇಸರ ವ್ಯಕ್ತಪಡಿಸಿದರು. ರೋಹನ್‌ ಐಪಿಎಲ್‌ ಹಾಗೂ ಕರ್ನಾಟಕ ತಂಡದಲ್ಲಿ ಆಡಬೇಕೆನ್ನುವ ಆಸೆಯಿದೆ ಎಂದರು.

‘ರೋಹನ್‌ 12 ವರ್ಷದವನಾಗಿದ್ದಲೇ ನಮ್ಮಲ್ಲಿ ತರಬೇತಿಗೆ ಬಂದ. ಶಿಸ್ತು, ಆಟದ ಬಗ್ಗೆ ಹೊಂದಿದ್ದ ಬದ್ಧತೆ ಮತ್ತು ನಿರಂತರ ಅಭ್ಯಾಸದಿಂದ ಈ ಸಾಧನೆ ಮಾಡಿದ್ದಾನೆ. ಮುಷ್ತಾಕ್‌ ಅಲಿ ಟೂರ್ನಿ ಆರಂಭವಾಗುವ ಕೆಲ ದಿನಗಳ ಮೊದಲು ಈ ಬಾರಿ ನಾವು ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎಂದು ಅಛಲ ವಿಶ್ವಾಸ ವ್ಯಕ್ತಪಡಿಸಿದ್ದ. ಅಂದುಕೊಂಡಿದ್ದನ್ನು ಆತ ಹಾಗೂ ಕರ್ನಾಟಕ ತಂಡ ಮಾಡಿ ತೋರಿಸಿದೆ’ ಎಂದು ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ಪದಾಧಿಕಾರಿ ವಿವೇಕ ಪವಾರ್‌ ಹೆಮ್ಮೆ ವ್ಯಕ್ತಪಡಿಸಿದರು.

ಬೆಂಗಳೂರು ಸೇರಿದ ಬಳಿಕ ರೋಹನ್ ಹೆರಾನ್ಸ್ ಕ್ಲಬ್‌ ಸೇರಿದರು. ಅವರಿಗೆ ಪ್ರಥಮ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಲು ಕ್ಲಬ್‌ನ ಕೋಚ್‌ ಕೆ. ಮುರಳೀಧರ ಅವಕಾಶ ಮಾಡಿಕೊಟ್ಟರು. ಇದು ಕ್ರಿಕೆಟ್‌ ಬದುಕಿನಲ್ಲಿ ಹೊಸ ತಿರುವಿಗೂ ಕಾರಣವಾಯಿತು. ನಂತರ ವಿಜಯ ಬ್ಯಾಂಕ್‌, ಸೋಶಿಯಲ್ಸ್‌ ಕ್ಲಬ್‌ ಮತ್ತು ಜವಾನ್ಸ್‌ ಕ್ಲಬ್‌ಗಳಲ್ಲಿ ಆಡಿದರು.

‘ಹಿಂದೆ ಎಚ್‌.ಎಸ್‌. ಶರತ್‌, ಗೌರವ್‌ ದಿಮಾನ್‌, ಅರ್ಜುನ ಹೊಯ್ಸಳ, ಎಸ್‌. ಅರವಿಂದ್ ಹೀಗೆ ಅನೇಕ ಆಟಗಾರರಿಗೆ ಡಿವಿಷನ್‌ ಪಂದ್ಯಗಳಲ್ಲಿ ಅವಕಾಶ ಕೊಟ್ಟಿದ್ದೆವು. ಅದೇ ರೀತಿ ರೋಹನ್‌ ನಮ್ಮ ಕ್ಲಬ್‌ನಿಂದ ಪ್ರಥಮ ಡಿವಿಷನ್‌ ಆಡಿದ್ದ. ಈ ಬಾರಿಯ ಟೂರ್ನಿಯಲ್ಲಿ ರೋಹನ್‌ ನೀಡಿದ ಪ್ರದರ್ಶನದಿಂದ ಖುಷಿಯಾಗಿದೆ’ ಎಂದು ಮುರಳೀಧರ ಹೇಳಿದರು.

ರೋಹನ್‌ 2017ರಲ್ಲಿ ಲಿಪಸ್ಟ್‌ ‘ಎ’ ಟೂರ್ನಿಗೆ ಪದಾರ್ಪಣೆ ಮಾಡಿದರು. ಇದೇ ವರ್ಷ ಅಸ್ಸಾಂ ಎದುರು ಆಡುವ ಮೂಲಕ ಟಿ–20 ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. 12 ಪಂದ್ಯಗಳಿಂದ 53.60ರ ಸರಾಸರಿಯಲ್ಲಿ 536 ರನ್ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT